ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ಕಾಡುಪ್ರಾಣಿಗಳ ಹಾವಳಿಯಿಂದ ಪರಿಹಾರ ನೀಡದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳಿಕೆ ನೀಡಿದ ರೈತನ ಜಮೀನಿಗೆ ಅರಣ್ಯಾಧಿಕಾರಿಗಳು ಭೇಟಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.ತಾಲೂಕಿನ ಮಂಚಪುರ ಗ್ರಾಮದ ರೈತ ಪೆರುಮಾಳ್ ತನ್ನ 4 ಎಕರೆ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಹಾಕಲಾಗಿದೆ. ಕಾಡು ಹಂದಿಗಳು ಫಸಲು ತಿಂದು ತುಳಿದು ನಾಶಗೊಳಿಸಿವೆ. ಈ ಹಿನ್ನೆಲೆ ರೈತ ವಿಷದ ಕಳೆನಾಶಕ ಔಷಧಿಯನ್ನು ಹಿಡಿದು ಪರಿಹಾರ ನೀಡದಿದ್ದರೆ ಕುಡಿದು ಸಾಯುವುದಾಗಿ ಆಕ್ರೋಶಪಡಿಸಿರುವ ಬಗ್ಗೆ ಎಚ್ಚೆತ್ತ ಅರಣ್ಯಾಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.
ವರದಿ ಎಚ್ಚೆತ್ತ ಅರಣ್ಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ:ಪರಿಹಾರ ನೀಡದಿದ್ದರೆ ವಿಷ ಕುಡಿಯುತ್ತೇನೆ: ರೈತ ಪೆರಮಳ್ ಎಂಬ ಶೀರ್ಷಿಕೆ ಅಡಿ ಕನ್ನಡಪ್ರಭ ಪತ್ರಿಕೆಯಲ್ಲಿ ಭಾನುವಾರ ವರದಿ ಪ್ರಕಟಗೊಂಡಿದ್ದಕ್ಕೆ ಎಚ್ಚೆತ್ತ ವಲಯ ಅರಣ್ಯ ಅಧಿಕಾರಿ ಉಮಾಪತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈತನ ಜಮೀನಿನಲ್ಲಿ ಬೆಳೆ ನಷ್ಟ ಉಂಟಾಗಿರುವುದನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಿಮಗೆ ಆಗಬೇಕಾಗಿರುವ ನಷ್ಟ ಪರಿಹಾರವನ್ನು ನೀಡಲು ಸಂಪೂರ್ಣ ಸಹಕಾರ ನೀಡುವುದಾಗಿ ಬರವಸೆ ನೀಡಿದರು.
ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ:ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿಯಿಂದ ರೈತನ ಜಮೀನಿನಲ್ಲಿ ಬೆಳೆಯಲಾಗುವ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು. ಕಾಡುಪ್ರಾಣಿಗಳು ರೈತನ ಜಮೀನಿಗೆ ಬರದಂತೆ ಎಚ್ಚರಿಕೆವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.