ಸಾರಾಂಶ
ಶುಕ್ರವಾರ ಸಂಜೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮಗಳು ನಡೆಯಲಿವೆ. ಒಂದು ವೇಳೆ ಬೇರೆ ಪಕ್ಷದವರು ನನ್ನ ಸ್ಥಾನದಲ್ಲಿರುತ್ತಿದ್ದರೆ ಖಂಡಿತಾ ರಾಜಕೀಯ ಮಾಡುತ್ತಿದ್ದರು. ನಾನು ಯಾವತ್ತಿಗೂ ಈ ಹೆಣ್ಣು ಮಗಳ ಪರವಾಗಿಯೇ ನಿಲ್ಲುತ್ತೇನೆ ಎಂದು ಅಶೋಕ್ ರೈ ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಪ್ರಕರಣವು ಎರಡು ಕುಟುಂಬಗಳ ನಡುವಿನ ಪ್ರಶ್ನೆಯಾಗಿದ್ದು, ಇದನ್ನು ಯಾರೂ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ಸಂದರ್ಭ ಸಂತ್ರಸ್ತೆ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಆಲೋಚಿಸಬೇಕಾಗಿದೆ. ಎಲ್ಲವೂ ಉತ್ತಮ ರೀತಿಯಲ್ಲಿ ಮುಗಿಯಲಿ ಎಂದು ಶಾಸಕನಾಗಿ ನಾನು ಸಲಹೆ ನೀಡಿದ್ದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ಅವರು ಶನಿವಾರ ಪುತ್ತೂರಿನ ಸಿದ್ಯಾಳದಲ್ಲಿರುವ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಪುತ್ತೂರಿನಲ್ಲಿ ನಡೆದಿರುವ ಘಟನೆ ಎರಡು ಕುಟುಂಬಗಳ ವಿಚಾರವಾಗಿದೆ. ಅದು ಒಳ್ಳೆಯ ರೀತಿಯಲ್ಲಿಯೇ ಮುಗಿಯಲಿ ಎಂದು ಸಲಹೆ ನೀಡಿದ್ದೆ. ಆದರೆ ಅದಕ್ಕೆ ಕೆಲ ಪಕ್ಷಗಳು-ಸಂಘಟನೆಗಳು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಇಂತಹ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಠಾಣೆಯಲ್ಲಿದ್ದಾಗ ಎರಡೂ ಕುಟುಂಬಗಳು ನನ್ನಲ್ಲಿ ಮಾತನಾಡಿರುವುದು, ನಾನು ಫೋನ್‌ನಲ್ಲಿಯೇ ಅವರಿಗೆ ಸಲಹೆ ನೀಡಿರುವುದು ಹೊರತು ರಾಜೀಸಂಧಾನ ಮಾಡಿದ್ದಲ್ಲ. ಇಬ್ಬರೂ ಮದುವೆಯಾಗುತ್ತಾರೆ ಎಂದಾಗ ದೂರು ಕೊಟ್ಟು ಅವರು ಪ್ರತ್ಯೇಕವಾಗುವುದು ಬೇಡ ಎಂಬ ನೆಲೆಯಲ್ಲಿ ಸಲಹೆ ನೀಡಿದ್ದೆ. ಆದರೆ ಈಗ ಕೆಲ ಸಂಘಟನೆಗಳು, ಪಕ್ಷಗಳು ನಾನು ರಾಜೀಸಂಧಾನ ಮಾಡಿದ್ದು, ಅವರೇ ಅದನ್ನು ಮುಗಿಸಬೇಕು ಎಂಬಂತೆ ಮಾತನಾಡುತ್ತಿದ್ದಾರೆ. ಈ ಕ್ಷಣಕ್ಕೂ ನಾನು ಎರಡೂ ಕುಟುಂಬಗಳಿಗೆ ಒಮ್ಮತದಿಂದ ಇದನ್ನು ಮುಗಿಸಿಕೊಳ್ಳಿ. ಇಬ್ಬರಿಗೂ ಮದುವೆ ಮಾಡಿ ಎಂದೇ ಹೇಳುತ್ತಿದ್ದೇನೆ ಎಂದರು.ಶುಕ್ರವಾರ ಸಂಜೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮಗಳು ನಡೆಯಲಿವೆ. ಒಂದು ವೇಳೆ ಬೇರೆ ಪಕ್ಷದವರು ನನ್ನ ಸ್ಥಾನದಲ್ಲಿರುತ್ತಿದ್ದರೆ ಖಂಡಿತಾ ರಾಜಕೀಯ ಮಾಡುತ್ತಿದ್ದರು. ನಾನು ಯಾವತ್ತಿಗೂ ಈ ಹೆಣ್ಣು ಮಗಳ ಪರವಾಗಿಯೇ ನಿಲ್ಲುತ್ತೇನೆ ಎಂದು ಅಶೋಕ್ ರೈ ಹೇಳಿದರು.