ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣದ ಜೊತೆಗೆ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡು ತಮ್ಮ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿದವರು ಜಿ.ಮಾದೇಗೌಡರು.ನಿತ್ಯ ಸಚಿವ ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ ಹಾಗೂ ಜಿ.ಮಾದೇಗೌಡರು ಮಾಡಿದ ಸಾಕಷ್ಟು ಕೆಲಸಗಳು, ಹೋರಾಟಗಳು ಜಿಲ್ಲೆಯ ಹೆಸರನ್ನು ಬಹು ಎತ್ತರಕ್ಕೆ ಕೊಂಡೊಯ್ದಿದೆ.
ಕೆ.ವಿ.ಶಂಕರಗೌಡರ ಶಿಷ್ಯನಾಗಿ ರಾಜಕೀಯ ಪ್ರವೇಶಿಸಿದ ಜಿ.ಮಾದೇಗೌಡರು ಶಂಕರಗೌಡರ ರೀತಿಯಲ್ಲೇ ಗತ್ತಿನ ರಾಜಕಾರಣ ಮಾಡಿದವರು. ಕಿರುಗಾವಲು ಕ್ಷೇತ್ರದಲ್ಲಿ ಸತತ ಆರು ಬಾರಿ ಶಾಸಕರಾಗಿ, ಒಂದು ಬಾರಿ ಅರಣ್ಯ ಸಚಿವರಾಗಿ, 2 ಬಾರಿ ಸಂಸದರಾಗಿದ್ದ ಗೌಡರು ಸೋತಿದ್ದು ಕೇವಲ ಒಂದು ಚುನಾವಣೆ ಮಾತ್ರ.ಜಿ.ಮಾದೇಗೌಡರನ್ನು ರಾಜಕಾರಣಿ ಆಗಿ ನೋಡುವುದಕ್ಕಿಂತ ಒಬ್ಬ ಹೋರಾಟಗಾರನಾಗಿ ಎಲ್ಲರೂ ಗುರುತಿಸುತ್ತಾರೆ. 6 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿದ್ದರೂ ಎಂದಿಗೂ ಗೂಟದ ಕಾರು ಬಯಸಲಿಲ್ಲ. ಪೊಲೀಸರು ಇವರಿಗೆ ನೀಡುವ ರಕ್ಷಣೆ ಮೀರಿ ಜನರು ಅವರಿಗೆ ರಕ್ಷಣೆ ನೀಡುತ್ತಿದ್ದುದ್ದು ಗಮನಾರ್ಹ ಸಂಗತಿ.
ನೇರನುಡಿಯೊಂದಿಗೆ ಮಾದೇಗೌಡರು ತಾನು ಶಾಸಕ, ಸಂಸದ ಎಂಬ ಹಮ್ಮು ಅವರಲ್ಲಿರಲಿಲ್ಲ. ನಾನು ಜನಪರ ಹೋರಾಟಗಾರ ಎಂಬ ಕಾರಣದಿಂದ ಮುಖ್ಯಮಂತ್ರಿ, ಸಚಿವರಾಗಲಿ, ಸಂಸದರಾಗಲಿ ಯಾರನ್ನು ಬಿಡದೆ ಧೈರ್ಯವಾಗಿ ಪ್ರಶ್ನಿಸುವ ಗತ್ತು ಮತ್ತು ಶಿಸ್ತಿನ ರಾಜಕಾರಣಿಯಾಗಿದ್ದರು. ಹಿಡಿದ ಕೆಲಸ ಆಗಬೇಕು ಎಂಬ ಧ್ಯೇಯವಾಗಿದ್ದರಿಂದ ಕಾವೇರಿ ಚಳವಳಿ ವೇಳೆ ಮಾಧ್ಯಮಗಳ ಸಮ್ಮುಖದಲ್ಲೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಹಲವರಿಗೆ ಮೊಬೈಲ್ ಮೂಲಕ ತರಾಟೆ ತೆಗೆದುಕೊಂಡಿದ್ದರು.ರಾಜ್ಯದಲ್ಲಿ ತೀವ್ರ ಬರಗಾಲ ಎದುರಾದಾಗ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿತು. ಇದರಿಂದ ಕೆರಳಿದ ಜಿ.ಮಾದೇಗೌಡರು ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು. ಇದೇ ವೇಳೆ ಎಸ್.ಎಂ.ಕೃಷ್ಣ ಬೆಂಗಳೂರಿನಿಂದ ಕೆ.ಆರ್.ಎಸ್. ಗೆ ಪಾದಯಾತ್ರೆ ಹಮ್ಮಿಕೊಂಡರು. ಪಾದಯಾತ್ರೆ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಬಂದಾಗ ರೊಚ್ಚಿಗೆದ್ದ ಜನತೆ ಸಿಎಂ ಮೇಲೆ ಚಪ್ಪಲಿ, ಮೊಟ್ಟೆ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್ ಎಸ್ ತನಕ ನಡೆಯಬೇಕಿದ್ದ ಪಾದಯಾತ್ರೆ ಮಂಡ್ಯದಲ್ಲೇ ಅಂತ್ಯವಾಯಿತು.
ಮಾರನೇ ದಿನ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜನಜಾತ್ರೆ ಸೇರಿತು. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಲಿನಿ ಕೃಷ್ಣಮೂರ್ತಿ ಜನರನ್ನು ಗುಂಪುಗೂಡದಂತೆ ಮೈಕ್ ಮೂಲಕ ಎಚ್ಚರಿಕೆ ನೀಡುತ್ತಲೇ ಇದ್ದರು. ಆಗ ಮಾದೇಗೌಡರು ನೀನು ಹೆಂಗಸು ಅಂತ ಸುಮ್ಮನಿದ್ದೇವೆ. ನೀವು ಲಾಠಿ, ಬಂದೂಕು ತಂದರೆ ನಾವು ಹಾರೆ, ಮಚ್ಚು ತಂದು ನಿಮ್ಮನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಬಹಿರಂಗ ಸವಾಲು ಹಾಕಿ ಎಚ್ಚರಿಸಿದ್ದು ಉಂಟು.ಮಾದೇಗೌಡರು ಕೇವಲ ಹೋರಾಟಗಾರರಲ್ಲದೆ ಕಟ್ಟಾ ಗಾಂಧಿವಾದಿವಾಗಿದ್ದರೂ ಕೆ.ಎಂ.ದೊಡ್ಡಿ ಭಾರತಿ ಕಾಲೇಜಿನ ಆವರಣದಲ್ಲಿ ಹಾಗೂ ಮಂಡ್ಯದ ವಿವಿ ರಸ್ತೆ ಪಕ್ಕದಲ್ಲೆ ಗಾಂಧಿ ಭವನ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಎಚ್.ಮಲ್ಲಿಗೆರೆ ಬಳಿ ಗಾಂಧಿ ಗ್ರಾಮ ಮಾಡುವ ಕನಸು ಹೊಂದಿದ್ದರು.
ಮಲ್ಲಿಗೆರೆಯಲ್ಲಿ ಗಾಂಧಿಭವನಕ್ಕಾಗಿ ಜಮೀನನ್ನು ಕೂಡಾ ಪಡೆದುಕೊಂಡಿದ್ದರು. ಆದರೆ, ಕೊಂಚ ತಾಂತ್ರಿಕ ದೋಷವಿದ್ದಾಗ ಅದೊಂದು ದಿನ ನಗರದ ಪ್ರವಾಸಿ ಮಂದಿರದಲ್ಲಿ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸಮ್ಮುಖದಲ್ಲಿ ಸಭೆ ನಡೆಯುತ್ತಿತ್ತು. ಈ ವಿಚಾರ ತಿಳಿದು ಸಭೆಗೆ ತೆರಳಿದ ಜಿ.ಮಾದೇಗೌಡರು ಎಲ್ಲ ಅಧಿಕಾರಿ ಸಿಬ್ಬಂದಿ ಸಮ್ಮುಖದಲ್ಲಿಯೇ ಅಂದಿನ ಡಿಸಿ ಅಜಯ್ ನಾಗಭೂಷಣ್ ಅವರನ್ನು ಕೊಲೆ ಮಾಡಿ ಜೈಲಿಗೆ ಹೋಗುತ್ತೇನೆ ಎಂದು ಉಗ್ರರೂಪ ತಾಳಿದ್ದರು. ಇದರಿಂದ ಇಡೀ ರಾಜ್ಯದಲ್ಲಿ ಆ ವಿಚಾರ ಸಂಚಲನ ಮೂಡಿಸಿತು.ಜಿ.ಮಾದೇಗೌಡರಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಕಿರುಗಾವಲು ಹುಲಿ ಎಂದೇ ಖ್ಯಾತಿ ಪಡೆದಿದ್ದ ಕೆ.ಎನ್.ನಾಗೇಗೌಡರ ರಾಜಕೀಯದ ಬದ್ಧ ವೈರಿಗಳಾಗಿದ್ದರೂ ಗೌಡರ ವ್ಯಕ್ತಿತ್ವದ ಬಗ್ಗೆ ಹೊರತಂದ ಅಪರಂಜಿ ಕೃತಿಯಲ್ಲಿ ಎಸ್.ಎಂ.ಕೃಷ್ಣ ಅವರು ನನ್ನ ಹಾಗೂ ಮಾದೇಗೌಡರ ನಡುವೆ ವೈಯಕ್ತಿಕ ಕಾರಣಕ್ಕೆ ದ್ವೇಷವಿರಲಿಲ್ಲ. ಅವರ ಚಿಂತನೆ ಮತ್ತು ನನ್ನ ದೂರದೃಷ್ಟಿ ಒಂದೇ ಇತ್ತು ಎಂದು ಹೇಳಿರುವುದು ಗೌಡರ ಸಾಮಾಜಿಕ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಗೌಡರ ಮಾತುಗಳು ಒರಟಾಗಿದ್ದರೂ ಜನರ ಪರ ನಿಲುವು ಇತ್ತು. ಭಾರತೀನಗರದಲ್ಲಿ (ಕೆ.ಎಂ.ದೊಡ್ಡಿ) ಚಾಂಶುಗರ್ ಕಾರ್ಖಾನೆ ಆರಂಭಿಸಲು ತೆಗೆದುಕೊಂಡ ತೀರ್ಮಾನ ಶ್ಲಾಘನೀಯ. ಕೆ.ಎನ್.ನಾಗೇಗೌಡರು ಕೂಡ ಜಿ.ಮಾದೇಗೌಡರನ್ನು ಒಬ್ಬ ರಾಜಕಾರಣಿಯಾಗಿ ನೋಡುವುದಕ್ಕಿಂತ ಹೋರಾಟಗಾರರನ್ನಾಗಿ ನೋಡಬೇಕೆಂದು ಹೇಳಿದ್ದಾರೆ. ಇವೆಲ್ಲವುಗಳನ್ನು ನೋಡಿದಾಗ ಮಾದೇಗೌಡರ ಸಿಟ್ಟು, ಸೆಡವು ವೈಯಕ್ತಿಕವಾಗಿ ಇರಲಿಲ್ಲ. ಜನರ ಪರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.ಡಾ.ಜಿ.ಮಾದೇಗೌಡರ ಜತೆ 1975ರಿಂದಲೂ ಜೀವಿತಾವಧಿವರೆಗೂ ಒಡನಾಟವಿತ್ತು. ಅವರೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕಾಭಿವೃದ್ಧಿಯಲ್ಲಿ ಸಕ್ರಿಯವಾಗಿದ್ದೆ ನನ್ನ ಪೂರ್ವ ಜನ್ಮದ ಪುಣ್ಯ. ಅವರ ಆಶೋತ್ತರಗಳನ್ನು ಈಡೇರಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ.- ಬಿ.ಎಂ.ನಂಜೇಗೌಡ, ಕಾರ್ಯದರ್ಶಿ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್, ಮಂಡ್ಯ