ಗಾಂಧೀ ತತ್ವ ಮುಂದಿನ ಪೀಳಿಗೆಗೆ ತಲುಪಿಸಬೇಕು

| Published : Oct 03 2024, 01:22 AM IST

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಅಹಿಂಸೆಯನ್ನು ತನ್ನ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾವಾದಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವಾದ ಅ.2ರಂದು ಇಡೀ ಜಗತ್ತಿನಾದ್ಯಂತ ‘ವಿಶ್ವ ಅಹಿಂಸಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಅಳಿಯಬೇಕು, ಅಸ್ಪೃಶ್ಯತೆ ಸಂಪೂರ್ಣ ನಿರ್ಮೂಲನೆ ಆಗಬೇಕು, ಎಲ್ಲ ವರ್ಗದ ಜನರೂ ಸಾಮರಸ್ಯದಿಂದ ಬಾಳಬೇಕು ಎಂದು ಪ್ರತಿಪಾದಿಸಿದ ಮಹಾತ್ಮ ಗಾಂಧಿ ಅ‍ವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿರಂತರ ಪ್ರಕ್ರಿಯೆಯಲ್ಲಿ ನಾವುಗಳೆಲ್ಲ ಭಾಗಿಯಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

ನಗರದ ಜಿಲ್ಲಾ ಗ್ರಂಥಾಲಯದ ಪಕ್ಕ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿ, ಇಲ್ಲಿಯೇ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಅಹಿಂಸಾ ದಿನಾಚರಣೆ

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಅಹಿಂಸೆಯನ್ನು ತನ್ನ ಜೀವನದ ವಿಧಾನವನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಜಗತ್ತಿನ ಮಹಾನ್ ಅಹಿಂಸಾವಾದಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜನ್ಮದಿನವಾದ ಅಕ್ಟೋಬರ್ 2 ನ್ನು ಇಂದು ಇಡೀ ಜಗತ್ತಿನಾದ್ಯಂತ ‘ವಿಶ್ವ ಅಹಿಂಸಾ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿರುವುದು ಭಾರತೀಯೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ 2016ರಲ್ಲಿ ದೃಢ ಸಂಕಲ್ಪ ಮಾಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲು ನಿರ್ಧರಿಸಿ ಪ್ರತಿ ಜಿಲ್ಲೆಗೆ 3 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಅಂದಿನ ಸಚಿವ ಶಿವಶಂಕರರೆಡ್ಡಿ 5ನೇ ಜೂನ್ 2019 ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಆದರೆ ಮತ್ತೆ ಈಗ ಸಿದ್ದರಾಮಯ್ಯನವರೆ ಮುಖ್ಯ ಮಂತ್ರಿಯಾಗಿದ್ದು, ಗಾಂಧಿಭವನ ನಿರ್ಮಾಣವಾಗಿ ಲೋಕಾರ್ಪಣೆಯಾಗಿರುವುದು ಜಿಲ್ಲೆಗೆ ಕಳಶಪ್ರಾಯವಾಗಿದೆ. ಎಂದರು.

ನಂದಿಬೆಟ್ಟದಲ್ಲಿ ತಂಗಿದ್ದ ಗಾಂಧಿ

ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಆರೋಗ್ಯ ಹದಗೆಟ್ಟಾಗ ನಂದಿ ಗಿರಿಧಾಮದಲ್ಲಿ ವಿಶ್ರಾಂತಿ ಪಡೆಯಲು 20ನೇ ಎಪ್ರಿಲ್ 1927 ರಂದು ನಂದಿ ಗಿರಿಧಾಮಕ್ಕೆ ಆಗಮಿಸಿ 45 ದಿನ ವಿಶ್ರಮಿಸಿ ಚೇತರಿಸಿಕೊಂಡ ನಂತರ ನಂದಿ ಗಿರಿಧಾಮದಿಂದ ತೆರಳಿದ್ದರು. ನಂತರ 11 ಮೇ 1936ರಂದು. ನಂದಿ ಗಿರಿಧಾಮದಲ್ಲಿ ಎರಡನೇ ಬಾರಿ 20 ದಿನ ವಿಶ್ರಾಂತಿ ಪಡೆದಿದ್ದರು ಎಂದು ನೆನಪಿಸಿದರು.

ಸ್ಪರ್ಧೆ ವಿಜೇತರಿಗೆ ಬಹುಮಾನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ,ಗಾಂಧೀಜಿ ಕುರಿತು ಭಾಷಣ ಮಾಡಿದರು. ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ “ಗಾಂಧಿ ಕಾಲ್ನಡಿಗೆ ಜಾಥಾ” ಕಾರ್ಯಕ್ರಮಕ್ಕೆ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಸಚಿವರು ಚಾಲನೆ ನೀಡಿ, ಅಂಬೇಡ್ಕರ್ ವೃತ್ತದವರೆಗೆ ನಡೆಸಲಾಯಿತು.

, ನಂತರ ಅಂಬೇಡ್ಕರ್ ವೃತ್ತದಲ್ಲಿ ಶಾಸಕರು, ಗಣ್ಯರು, ಅಧಿಕಾರಿಗಳು, ಪೌರಕಾರ್ಮಿಕರೊಂದಿಗೆ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಂಡು,ಈ ವೇಳೆ ಸಚಿವರು ನೆರೆದಿದ್ದವರಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು.

ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧನೆ

ಈ ವೇಳೆ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್.ಪಿ. ಕುಶಲ್ ಚೌಕ್ಸೆ, ಎಡಿಸಿ ಡಾ. ಎನ್.ಭಾಸ್ಕರ್, ಎಎಸ್ ಪಿ. ಆರ್.ಐ.ಖಾಸಿಂ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಡಿಡಿಪಿಐ ಬೈಲಾಂಜಿನಪ್ಪ, ತಹಸೀಲ್ದಾರ್ ಅನಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್, ಗಾಂಧಿ ಭವನ ವಿನ್ಯಾಸದ ನೀಲನಕ್ಷೆ ಸಿದ್ದಪಡಿಸಿದ ಶಾರದ, ಯೋಜನಾ ಅಭಿಯಂತರ ನವೀನ್ಮ ತ್ತಿತರರು ಇದ್ದರು.