ತೋಟಗಾರಿಕೆ ಇಲಾಖೆಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ‘ಫಲಪುಷ್ಪ ಪ್ರದರ್ಶನ’ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲಾಲ್‌ಬಾಗ್, ಕಬ್ಬನ್ ಉದ್ಯಾನದ ಮಾದರಿಯಲ್ಲಿ ನಗರದ ಇನ್ನೂ ಮೂರು ಕಡೆ ಹೊಸ ಉದ್ಯಾನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಗುರುವಾರ ತೋಟಗಾರಿಕೆ ಇಲಾಖೆಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ‘ಫಲಪುಷ್ಪ ಪ್ರದರ್ಶನ’ಕ್ಕೆ ಚಾಲನೆ ನೀಡಿ, ಹೂವಿನಿಂದ ಅರಳಿರುವ ‘ಗಂಗರ ಸಾಮ್ರಾಜ್ಯದ ವೈಭವ’ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಗರದಲ್ಲಿರುವ ರಕ್ಷಣಾ ಇಲಾಖೆಯ ಭೂಮಿಯಲ್ಲಿ ಒಂದು ಉದ್ಯಾನ ಮಾಡುವ ಉದ್ದೇಶವಿದೆ. ಭೂಮಿ ರಕ್ಷಣಾ ಇಲಾಖೆ ವಶದಲ್ಲಿಯೇ ಇರುತ್ತದೆ. ಆದರೆ, ಉದ್ಯಾನವನ ನಿರ್ಮಿಸಲಾಗುತ್ತದೆ. ಈಗಾಗಲೇ ಅನುಮತಿ ಕೋರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ರಕ್ಷಣಾ ಸಚಿವರನ್ನೂ ಭೇಟಿ ಮಾಡಿ ಜಾಗ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಬೆಂಗಳೂರು ನಗರದೊಳಗಿನ ಅರಣ್ಯ ಜಾಗದಲ್ಲಿ ಮತ್ತೆರಡು ಉದ್ಯಾನವನಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ನಿರ್ಮಿಸಲು ಆಲೋಚಿಸಿದ್ದೇವೆ.ರಾಜ್ಯದಲ್ಲಿ ಹಸಿರು ಪ್ರದೇಶ ಹೆಚ್ಚಿಸಿ ರೈತರ ಬದುಕು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಇದು ರೈತರು ಹಾಗೂ ಸರ್ಕಾರದ ನಡುವಿನ ಪಾಲುದಾರಿಕೆಯ ಕಾರ್ಯಕ್ರಮವಾಗಿದೆ. ಇದನ್ನು ಆಗಸ್ಟ್ 15ರಂದು ಪ್ರಕಟಿಸುತ್ತೇವೆ. ಸರ್ಕಾರ ನೂರು ದಿನಗಳ ಕಾರ್ಯಕ್ರಮ ರೂಪಿಸಿದ್ದು, ರೈತರ ಬದುಕಿಗೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಆಲೋಚಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು. ಲಾಲ್‌ಬಾಗ್ ಕೇವಲ ಉದ್ಯಾನವನ ಮಾತ್ರವಲ್ಲ. ಇದೊಂದು ಇತಿಹಾಸ. ಗಂಗರ ಸಾಮ್ರಾಜ್ಯದ ಇತಿಹಾಸ ಬಿಂಬಿಸುವ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ರೂಪಿಸಲಾಗಿದೆ. ಗಂಗರು ಆಗಿನ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಇಂದಿಗೂ ಉಳಿದಿವೆ. ಕಷ್ಟಕಾಲದಲ್ಲಿ ಆ ಕೆರೆಗಳು ರಕ್ಷಣೆ ಮಾಡಿವೆ. ಗಂಗರ ಇತಿಹಾಸ ಸಮಾನತೆ, ಕೃಷಿಕರ ಬದುಕು, ಹೋರಾಟವನ್ನು ಹೊಂದಿದೆ. ಇದು ನಮ್ಮ ಸಂಸ್ಕೃತಿ, ರೈತರ ಬದುಕು ಹಾಗೂ ಕಲೆಯ ಸಂಭ್ರಮ. 12 ದಿನಗಳ ಕಾಲ ಈ ಪುಷ್ಪ ಪ್ರದರ್ಶನ ನಡೆಯಲಿದೆ. ನಾಡಿನ ಜನತೆ ಈ ಫಲಪುಷ್ಟ ಪ್ರದರ್ಶನ ವೀಕ್ಷಿಸಿ ಆನಂದಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ಉದಯ ಬಿ.ಗರುಡಾಚಾರ್, ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಸೂರು, ಅಪರ ನಿರ್ದೇಶಕ (ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಡಾ.ಎಂ.ಜಗದೀಶ್ ಸೇರಿದಂತೆ ಇದ್ದರು.