ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಲಾಲ್‌ಬಾಗ್ ಮಾದರಿಯಲ್ಲೇ ಕಬ್ಬನ್ ಉದ್ಯಾನದಲ್ಲಿ ಇಂದಿನಿಂದ ಡಿಸೆಂಬರ್ 7ರವರೆಗೆ ಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು ಭರ್ಜರಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಲಾಲ್‌ಬಾಗ್ ಮಾದರಿಯಲ್ಲೇ ಕಬ್ಬನ್ ಉದ್ಯಾನದಲ್ಲಿ ನ.27ರಿಂದ ಡಿಸೆಂಬರ್ 7ರವರೆಗೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ
ಮಕ್ಕಳನ್ನು ಆಕರ್ಷಿಸುವ ಮುಖ್ಯ ಉದ್ದೇಶದಿಂದ ಈ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು ಕಬ್ಬನ್ ಉದ್ಯಾನದಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ವಿವಿಧ ವನ್ಯ ಮೃಗಗಳು, ಚಿಟ್ಟೆಗಳು, ಹಣ್ಣುಗಳ ಕಲಾಕೃತಿಗಳನ್ನು ರಚಿಸಲಾಗಿದೆ. 25 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳಿಂದ ಅಲಂಕರಿಸಲಾಗಿದೆ
ಬೋನ್ಸಾಯಿ ಗಿಡಗಳ ಪ್ರದರ್ಶನ
ಈ ಪುಷ್ಪ ಪ್ರದರ್ಶನದಲ್ಲಿ ಬೋನ್ಸಾಯಿ ಗಿಡಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಕಾರ್ಯಕ್ರಮ, ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಪ್ರದರ್ಶನ, ಇಕೆಬಾನ ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ತೋಟಗಾರಿಕೆ ಇಲಾಖೆ ವತಿಯಿಂದ ಸುಮಾರು 25ರಿಂದ 30 ಸಾವಿರ ಹೂಕುಂಡಗಳನ್ನು ಬಳಸಿ ಪ್ರದರ್ಶನವನ್ನು ಆಕರ್ಷಣೀಯಗೊಳಿಸಿದೆ
ತಿರುಮಲ ನರ್ಸರಿ, ಇಂಡೋ ಅಮೇರಿಕನ್ ಹೈಬ್ರೀಡ್ ಸೀಡ್ಸ್, ಭಾಗ್ಯಲಕ್ಷ್ಮಿ ಫಾರ್ಮ್ಸ್ ಸಹಯೋಗವೂ ಇದ್ದು ಪುಷ್ಪ ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ಸಿಕ್ಕಿದೆ.
ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉಪಸ್ಥಿತರಿದ್ದು, ಗಾಯಕ ವಸು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ. ಜಾನಪದ ಕಲಾ ತಂಡಗಳಿಂದ ಡೊಳ್ಳುಕುಣಿತ, ಪೂಜಾ ಕುಣಿತ, ನ.28- 29ರಂದು ಇಕೆಬನ ಪ್ರದರ್ಶನ, ಸೇನಾ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೆರಿಟೇಜ್ ಬೇಕು ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 30ರಂದು ವೇಷಭೂಷಣ ಸ್ಪರ್ಧೆ, ಕಬ್ಬನ್ ಉದ್ಯಾನವನ ನಡಿಗೆದಾರರ ಸಂಘದಿಂದ ರಂಗೋಲಿ ಸ್ಪರ್ಧೆ, ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಇರಲಿದೆ. ಡಿ.1ರಂದು ಥಾಯ್ ಆರ್ಟ್ ಸ್ಪರ್ಧೆ ಹಾಗೂ ಪ್ರದರ್ಶನ ಇರಲಿದೆ.
ಡಿ.3- 4ರಂದು ತರಕಾರಿ ಹಾಗೂ ಹಣ್ಣಿನ ಕಲಾಕೃತಿಗಳ ಕೆತ್ತನೆ ಸ್ಪರ್ಧೆ ಹಾಗೂ ಪ್ರದರ್ಶನ, ಡಿ.5ರಂದು ಜಾನೂರ್ ಕಲೆ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ. ಪ್ರತಿ ದಿನವೂ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಪೊಲೀಸ್ ಅಥವಾ ಮಿಲಿಟರಿ ಬ್ಯಾಂಡ್. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.7ರಂದು ಪುಷ್ಪ ಪ್ರದರ್ಶನ ಮುಕ್ತಾಯವಾಗಲಿದೆ. ಈ ಬಾರಿ ತೋಟಗಾರಿಕೆ ಇಲಾಖೆಯಿಂದ ಅಂದಾಜು ₹38 ಲಕ್ಷ ವೆಚ್ಚದಲ್ಲಿ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ:
ಪುಷ್ಪ ಪ್ರದರ್ಶನದ 11 ದಿನವೂ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಪ್ರದರ್ಶನ ಇರಲಿದೆ. ವಯಸ್ಕರಿಗೆ ತಲಾ 30 ರು.ಗಳು ಮತ್ತು ಮಕ್ಕಳಿಗೆ 10 ರು.ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆದರೆ, ಮಕ್ಕಳು ಶಾಲೆಯ ಗುರುತಿನ ಚೀಟಿ ಪ್ರದರ್ಶಿಸಬೇಕು. ಸರ್ಕಾರಿ ಶಾಲೆಯಿಂದಲೂ ಮಕ್ಕಳನ್ನು ಪ್ರದರ್ಶನಕ್ಕೆ ಕರೆ ತರಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಕಬ್ಬನ್ ಉದ್ಯಾನ) ಜಿ. ಕುಸುಮಾ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.