ಅನಿಲ ವಿದ್ಯುತ್ ಘಟಕ ಲೋಕಾರ್ಪಣೆಗೆ ಸಜ್ಜು

| Published : Jun 27 2024, 01:04 AM IST

ಸಾರಾಂಶ

ಬೆಂಗಳೂರಿನ ಯಲಹಂಕ ಬಳಿ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕ (ಸಿಸಿಪಿಪಿ) ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಯಲಹಂಕ ಬಳಿ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕ (ಸಿಸಿಪಿಪಿ) ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಪುಟ್ಟೇನಹಳ್ಳಿ ಕೆರೆ ಹಾಗೂ ಯಲಹಂಕ ಕೆರೆ ಮಧ್ಯ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಘಟಕವನ್ನು ಸ್ಥಾಪನೆ ಮಾಡಿದೆ. ಹೀಗಾಗಿ ಈ ಭಾಗದ ಜೀವವೈವಿಧ್ಯೆತೆಗೆ ಧಕ್ಕೆ ಉಂಟಾಗುವ ಜತೆಗೆ ಸ್ಥಳೀಯ ನಿವಾಸಿಗಳಿಗೆ ಶಬ್ಧ ಹಾಗೂ ವಾಯುಮಾಲಿನ್ಯ ಉಂಟಾಗಲಿದೆ ಎಂದು ಯಲಹಂಕ ನಿವಾಸಿಗಳಿಂದ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಲ್ಲದೆ, ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಿದ್ದರು. ಸುಪ್ರೀಂ ಕೋರ್ಟ್‌ 2023ರಲ್ಲಿ ಪ್ರಾಯೋಗಿಕವಾಗಿ ಘಟಕ ಕಾರ್ಯಾರಂಭ ಮಾಡಲು ಅನುಮತಿ ನೀಡಿತ್ತು. ಅಲ್ಲದೆ ಐದೂವರೆ ತಿಂಗಳ ಕಾಲ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ವಹಿಸಿ ಪರಿಸರದಲ್ಲಿ ಆಗುವ ಬದಲಾವಣೆ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಈ ಪ್ರಕ್ರಿಯೆಯೆಲ್ಲಾ ಪೂರ್ಣಗೊಂಡ ಬಳಿಕ ಇದೀಗ ಘಟಕದಿಂದ ವಿದ್ಯುತ್‌ ಉತ್ಪಾದನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಕು ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಘಟಕವನ್ನು ಉದ್ಘಾಟಿಸಲು ತೀರ್ಮಾನಿಸಲಾಗಿದೆ.

ಒಟ್ಟು 370.05 ಮೆಗಾ ವ್ಯಾಟ್ ಸಾಮರ್ಥ್ಯದ ಈ ಘಟಕದಲ್ಲಿ ಗ್ಯಾಸ್ ಟರ್ಬೈನ್ ಜನರೇಟರ್ ಔಟ್‌ಪುಟ್ ಮೂಲಕ 236.825 ಮೆಗಾ ವ್ಯಾಟ್ ಮತ್ತು ಸ್ಟೀಮ್ ಟರ್ಬೈನ್ ಜನರೇಟರ್ ಔಟ್ ಪುಟ್ ಮೂಲಕ 133.225 ಮೆಗ್ಯಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಉದ್ಘಾಟಿಸುತ್ತಿದ್ದಾರೆ. ಎಲ್ಲಾ ಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಿ ಜುಲೈ 2ನೇ ವಾರದಲ್ಲಿ ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆ.ಜೆ. ಜಾರ್ಜ್ ಸೂಚಿಸಿದರು.

ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತಾ, ಕೆಪಿಸಿಎಲ್‌ ಹಣಕಾಸು ನಿರ್ದೇಶಕ ಆರ್‌. ನಾಗರಾಜ್‌, ತಾಂತ್ರಿಕ ನಿರ್ದೇಶಕ ಸಿ.ಎಂ. ದಿವಾಕರ್‌ ಸೇರಿ ಹಲವರು ಹಾಜರಿದ್ದರು.ಜುಲೈ ಮಾಸಾಂತ್ಯ ಬಿಡದಿ ತ್ಯಾಜ್ಯ

ವಿದ್ಯುತ್‌ ಘಟಕಕ್ಕೆ ಚಾಲನೆ: ಜಾರ್ಜ್

ಇದೇ ವೇಳೆ ಬಿಡದಿಯಲ್ಲಿ ಸ್ಥಾಪಿಸಲಾಗುತ್ತಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕದ ಪ್ರಗತಿ ಬಗ್ಗೆಯೂ ಸಚಿವ ಕೆ.ಜೆ. ಜಾರ್ಜ್ ಸಭೆ ನಡೆಸಿದ್ದು, ಜುಲೈ ಕೊನೆಯ ವಾರದಲ್ಲಿ ತ್ಯಾಜ್ಯ ವಿದ್ಯುತ್‌ ಉತ್ಪಾದನಾ ಘಟಕ ಲೋಕಾರ್ಪಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 260 ಕೋಟಿ ರು. ವೆಚ್ಚದಲ್ಲಿ 600 ಟನ್ ತ್ಯಾಜ್ಯ ಸಂಸ್ಕರಿಸಿ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಘಟಕ ನಿರ್ಮಾಣ ಮಾಡಲಾಗುತ್ತಿದೆ.

ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಆರಂಭಗೊಳಿಸಿ ಜುಲೈ ಕೊನೇ ವಾರದಲ್ಲಿ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.