ಸಾರಾಂಶ
-ರಾಮಸಮುದ್ರದ ಜ್ಞಾನಯೋಗಿ ಫೌಂಡೇಶನ್ ನಿಂದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಸಮಾರಂಭ
---------ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕ ಹಿಂದುಳಿಯಲು ಶೈಕ್ಷಣಿಕ ಹಿನ್ನೆಡೆಯೇ ಕಾರಣವಾಗಿದೆ. ಇನ್ನುಳಿದಂತೆ ಸಂಪದ್ಭರಿತವಾಗಿರುವ ಈ ಪ್ರದೇಶವನ್ನು ಹೊರಗಿನಿಂದ ಬಂದವರು ದೋಚುವಂತಾಗಿದೆ. ಇದು ತಪ್ಪಬೇಕೆಂದರೆ ಗುಣಮಟ್ಟದ ಶಿಕ್ಷಣ ಎಲ್ಲರೂ ಪಡೆಯುವಂತಾಗಬೇಕೆಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಪ್ರಾಧ್ಯಾಪಕ ಡಾ. ಲಕ್ಷ್ಮಣ ಬಿ. ನರಗುಂದ ಸಲಹೆ ನೀಡಿದರು.ತಾಲೂಕಿನ ರಾಮಸಮುದ್ರದ ಜ್ಞಾನಯೋಗಿ ಫೌಂಡೇಶನ್ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಕೊರತೆ ಇರುವುದು ಶಿಕ್ಷಣ. ಅದಕ್ಕೂ ಮಿಗಿಲಾಗಿ ಜ್ಞಾನದ ಕೊರತೆ ಇದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಭಾಗದ ಜನತೆಯಲ್ಲಿನ ಶೈಕ್ಷಣಿಕ ಹಿಂದುಳಿಯುವಿಕೆಯೇ ಕಾರಣವಾಗಿದೆ. ಉತ್ತಮ ಶಿಕ್ಷಣ ಪಡೆದುಕೊಂಡು ಬರೀ ಶಿಕ್ಷಿತರಾಗದೇ ಜ್ಞಾನವಂತರಾಗಿ ಮುಂದೆ ಬರಬೇಕೆಂದು ತಿಳಿಸಿದರು.ಎಸ್.ಎಸ್.ಎಲ್.ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಹಲವಾರು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಮುಂದಿನ ಭವಿಷ್ಯದ ಬಗ್ಗೆ ಕುಲಂಕುಶವಾಗಿ ವಿವರಣೆಯನ್ನು ಕೊಟ್ಟು ಅವರ ಕನಸುಗಳನ್ನು ಸಹಕಾರಗೊಳಿಸಲು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಆರ್.ಸಿ ಮಲ್ಲಿಕಾರ್ಜುನ್ ಪೂಜಾರಿ, ಶಿಕ್ಷಕರ ಕೊರತೆಯಿಂದಾಗಿ ಶೈಕ್ಷಣಿಕವಾಗಿ ಪ್ರದೇಶದಲ್ಲಿ ಹಿನ್ನೆಡೆಗೆ ಕಾರಣವಾಗಿದೆ ಎಂದು ತಿಳಿಸಿದರು.ಜ್ಞಾನಯೋಗಿ ಫೌಂಡೇಶನ್ ಸಂಸ್ಥಾಪಕ ಯಂಕಪ್ಪ ರಾಮಸಮುದ್ರ ಮಾತನಾಡಿ, ಎಸ್.ಎಸ್.ಎಲ್.ಸಿ ಫಲಿತಾಂಶ ಯಾದಗಿರಿ ಜಿಲ್ಲೆಯಲ್ಲಿ ಕುಂಠಿತಗೊಂಡಿದ್ದು, ಮಕ್ಕಳಿಗೆ ಓದುವ ವಿಧಾನವನ್ನು ಮತ್ತು ಬಡತನವನ್ನು ನಿವಾರಿಸಲು ಶಿಕ್ಷಣದಿಂದ ಮಾತ್ರವೆ ಸಾಧ್ಯವೆಂದು ತಿಳಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಮಾತನಾಡಿ, ಬಡ ಕುಟುಂಬದವರಿಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದು, ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಇದರಿಂದಾಗಿ ಗುಳೆ ಹೋಗುವವರ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಡತನದಿಂದ ಮೇಲೆ ಬರಲು ಶಿಕ್ಷಣವೇ ಮೂಲ ಮಂತ್ರವಾಗಬೇಕು ಎಂದರು.ಡಿ.ಡಿ.ಪಿ.ಐ ಕಚೇರಿ ಮಲ್ಲಿಕಾರ್ಜುನ ಕಾವಲಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳಿಂದ 10 ಶಾಲೆಗಳನ್ನೊಳಗೊಂಡ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರಥಮ ಬಹುಮಾನ ಮುದ್ದಸರ ಅಹ್ಮದ್ 10,001 ರು. ವನ್ನು ವಿದ್ಯಾರ್ಥಿಗೆ ನೀಡಿದರು. ದ್ವಿತೀಯ ಬಹುಮಾನ 5000 ಬಸವರಾಜಪ್ಪ ಬಾಗ್ಲಿ ಹಾಗೂ ತೃತೀಯ ಬಹುಮಾನ 3000 ಈಶಪ್ಪ ಪೂಜಾರಿ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
------22ವೈಡಿಆರ್1: ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಮಸಮುದ್ರದ ಜ್ಞಾನಯೋಗಿ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಸಮಾರಂಭ ಜರುಗಿತು.