ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಾಲರ್ ಹಾಡಿ ಗ್ರಾಮದ ಮನೆಗಳಿಗೆ ವಿದ್ಯುತ್ ಕಲ್ಪಿಸಲು ಒತ್ತಾಯಿಸಿ ಅರಣ್ಯವಾಸಿ ಸೇವಾ ಟ್ರಸ್ಟ್, ಪಾಲರ್ ಗ್ರಾಮಸ್ಥರು ಶುಕ್ರವಾರ ಚೆಸ್ಕಾಂ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು.
ಪಟ್ಟಣದ ಸೆಸ್ಕಾಂ ಇಲಾಖೆಯ ಇಇ ಕಚೇರಿಯ ಮುಂದೆ ಪಾಲಾರ್ ಗ್ರಾಮದ ಗ್ರಾಮಸ್ಥರ ಜೊತೆಗೂಡಿ ಉಪವಾಸ ಸತ್ಯಾಗ್ರಹ ನಡೆಸಿ ಸಂಬಂಧಿಸಿದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಮಹದೇಶ್ವರ ಬೆಟ್ಟದ ಕುಡಿಯುವ ನೀರಿನ ಯೋಜನೆಗಾಗಿ ಪಾಲಾರ್ ಗ್ರಾಮದ ಐವತ್ತು ಮೀ ಸಮೀಪದಿಂದಲೇ ವಿದ್ಯುತ್ ಹಾದುಹೋಗಿದ್ದರೂ ಸಹ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರೆತಿಲ್ಲ, ಸ್ವಾತಂತ್ರ್ಯ ದೊರೆತು 76 ವರ್ಷಗಳು ಕಳೆದರೂ ನಮಗೆ ಈ ಸ್ಥಿತಿ ಉಂಟಾಗಿರುವುದು ವಿಪರ್ಯಾಸ. ಇನ್ನೆಷ್ಟು ವರ್ಷ ನಾವು ಕಾಯಬೇಕು ಎಂದು ಪ್ರತಿಭಟನಾ ನೇತೃತ್ವ ವಹಿಸಿದ್ದ ನಾಗೇಂದ್ರ ತಮ್ಮ ಅಳಲು ತೋಡಿಕೊಂಡರು.
55ಕ್ಕೂ ಹೆಚ್ಚು ಗ್ರಾಮಸ್ಥರಿದ್ದು ಪಾಲಾರ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೂ ನಾವು ಸ್ಥಳ ಬಿಟ್ಟು ಕದಲಲ್ಲ, ಉಪವಾಸವಿದ್ದು ಗ್ರಾಮದ ಅಭ್ಯುದಯಕ್ಕಾಗಿ ನಾವು ಪ್ರಾಣ ಬಿಡಲು ಸಿದ್ದ ಎಂದು ಇದೇ ವೇಳೆ ಪ್ರತಿಭಟನಾಕಾರರು ಹೇಳಿದರು.
ಸ್ಥಳಕ್ಕೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳಾದ ತಬಸ್ಸುಮ್ ಭಾನು, ಎಇಇ ರಾಜು, ಶಂಕರ್, ಅರಣ್ಯ ಇಲಾಖೆಯ ಎಸಿಎಫ್ ಶಶಿಧರ್, ಆರ್.ಎಫ್.ಓ ಭರತ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಚೆಸ್ಕಾಂ ಇಲಾಖೆಯ ತಬಸ್ಸುಮ್ ಭಾನು, ಈಗಾಗಲೇ ವಿದ್ಯುತ್ ಕಂಬ ಅಳವಡಿಕೆ ಸರ್ವೇ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನುಳಿದ ನಿಯಮಗಳನ್ನು ಪಾಲಿಸಿ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು,
ಇನ್ನು 1ತಿಂಗಳಲ್ಲಿ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರಕಲಿದ್ದು, ಪ್ರತಿಭಟನಾಕಾರರು ನಮ್ಮೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರಲ್ಲದೆ, ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆಯೂ ದಾಖಲೆ ಸಹಿತ ಮಾಹಿತಿ ಒದಗಿಸಿದರು.
ಅಲ್ಲದೆ ಜಿಲ್ಲಾಧಿಕಾರಿಗಳು ನಿಮ್ಮ ಸಮಸ್ಯೆ ಕುರಿತು 3 ದಿನಗಳ ಹಿಂದೆಯೂ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕೂಡಲೇ ನಿಮ್ಮ ಬೇಡಿಕೆಗೆ ನ್ಯಾಯ ಸಿಗಲಿದೆ ಎಂದರು.
ಇದಕ್ಕೂ ಪ್ರತಿಭಟನಾಕಾರರು ಜಗ್ಗದ ಹಿನ್ನೆಲೆ ಈ ಕೂಡಲೇ ಸ್ಥಳ ಪರಿಶೀಲಿಸಿ ತುರ್ತು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಅರಣ್ಯವಾಸಿ ಸೇವಾ ಟ್ರಸ್ಟ್ ಕಾಯಾದ್ಯಕ್ಷ ನಾಗೇಂದ್ರ, ರಾಮನಗರ ಕಾನೂನು ಸೇವೆಗಳ ಪ್ರಾಧಿಕಾರದ ಸ್ವಸೇವಕರು ಪ್ರಜ್ವಲ್, ಪ್ರವೀಣ್, ಮೇಫೂಜ್, ಎಸ್ಡಿಪಿಐ ಟೌನ್ ಅಧ್ಯಕ್ಷ ಜಾಕೀರ್ ಪಾಷ, ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಕಲೀಲ್, ಪಾಲರ್ ಗ್ರಾಪಂ ಉಪಾಧ್ಯಕ್ಷ ಕೆಂಪಾರ, ಸದಸ್ಯೆ ಮಾದೇವಿ, ಗ್ರಾಮಸ್ಥರಾದ ಮಹದೇವ, ಸಿದ್ದಮರಿ, ಕೆಂಪಮ್ಮ, ಲಕ್ಷ್ಮೀ, ಈರಮ್ಮ ಇನ್ನಿತರಿದ್ದರು.
20ಲಕ್ಷ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಈಗಾಗಲೇ ಪಾಲಾರ್ ಗ್ರಾಮಕ್ಕೆ ತೆರಳಿ ಸರ್ವೇ ಕಾರ್ಯ ನಡೆಸಲಾಗಿದೆ. ಆದಷ್ಟು ಬೇಗ ಪಾಲಾರ್ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. -ತಬಸ್ಸುಮ್ ಭಾನು , ಚೆಸ್ಕಾಂ ಇಲಾಖೆ ಇಒ
ನನ್ನ ಮಗು ಓದಲು ವಿದ್ಯುತ್ ಸಂಪರ್ಕ ನೀಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಸಹಾ ಫಲಪ್ರದವಾಗಿಲ್ಲ, ನಮಗೆ ಸಾಕಾಗಿದೆ. ಹಲವು ಅಧಿಕಾರಿಗಳಿಗೆ ಕೈಮುಗಿದು ಬೇಸತ್ತಿದ್ದೇವೆ, ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ನೀಡುವ ತನಕ ನಾವು ಇಲ್ಲಿಂದ ಕದಲಲ್ಲ. ನಮ್ಮ ಕಷ್ಟ ನೀವು ಅರಿಯಿರಿ. - ನಾಗೇಂದ್ರ. ಅರಣ್ಯವಾಸಿ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ