ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮನುಷ್ಯನ ಎಲ್ಲ ಸಂಪತ್ತುಗಳಲ್ಲಿ ಮುಖ್ಯವಾದ ಸಂಪತ್ತು ಆರೋಗ್ಯ. ಆರೋಗ್ಯ ಕಾಪಾಡಿಕೊಳ್ಳಲು ಮೊದಲು ಆದ್ಯತೆ ನೀಡಬೇಕು. ಅಂಧರ ಬಾಳಿಗೆ ಬೆಳಕಾಗುವಂತಹ ಕೆಲಸ ಮಾಡುತ್ತಿರುವ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಮೇಲೆ ಖಾಸ್ಗತನ ಅನುಗ್ರಹವಿದೆ ಎಂದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗ ದೇವರು ಹೇಳಿದರು.ಪಟ್ಟಣದ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ವಿಜಯಪುರ ಅನುಗ್ರಹ ವಿಜನ್ ಫೌಂಡೇಶನ್, ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಖಾಸ್ಗತೇಶ್ವರ ಮಠದ ಸಹಯೋಗದಲ್ಲಿ ಶನಿವಾರ ಖಾಸ್ಗತೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ನೂರಕ್ಕೂ ಅಧಿಕ ಗ್ರಾಮಗಳ ಜನರು ಶ್ರೀ ಖಾಸ್ಗತ ಮಠದ ಭಕ್ತರಿದ್ದಾರೆ. ಅವರ ಆರೋಗ್ಯ ಚನ್ನಾಗಿದ್ದರೆ ಶ್ರೀಮಠದ ಜಾತ್ರೆ ವೈಭವವಾಗಿ ಜರುಗಲಿದೆ. ಲಿಂ.ವಿರಕ್ತ ಮಹಾಸ್ವಾಮಿಗಳ ಆಶಯದಂತೆ ಸರ್ವ ರೋಗಿಗಳಿಗೂ ಒಂದೇ ಸೂರಿನಡಿ ಆರೋಗ್ಯ ಚಿಕಿತ್ಸೆ ಕೊಡಿಸಬೇಕೆಂಬ ಉದ್ದೇಶದಿಂದ ಸರ್ವ ರೋಗಿಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರೊಂದಿಗೆ ಚರ್ಚಿಸಿ ಮಠದ ಶ್ರೀ ಖಾಸ್ಗತಜ್ಜನ ಆರೋಗ್ಯ ಜಾತ್ರೆಗೆ ಸಹಕರಿಸಿದ್ದಾರೆ. ಜೊತೆಗೆ ಸಾಕಷ್ಟು ಜನ ಯುವ ಸಮೂಹ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಈ ಶಿಬಿರದ ಆಯೋಜನೆಗೆ ಕೈ ಜೋಡಿಸಿದ ಡಾ.ಪ್ರಭುಗೌಡರ ಮೇಲೆ ಶ್ರೀ ಖಾಸ್ಗತನ ಅನುಗ್ರಹ ಸದಾ ಇರಲಿದೆ ಎಂದು ಆಶೀರ್ವಚನ ನೀಡಿದರು.ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಮನುಷ್ಯನಿಗೆ ಸಾಮಾನ್ಯವಾಗಿ ಆರೋಗ್ಯ ಕೆಡುವದು ಸಹಜ. ಆರೋಗ್ಯವನ್ನು ಯಾರು ನಿರ್ಲಕ್ಷ್ಯ ಮಾಡಬಾರದು. ಶ್ರೀ ಖಾಸ್ಗತೇಶ್ವರ ಮಠವು ಭಕ್ತರ ಪಾಲಿನ ಆಶಾಕಿರಣವಾಗಿದೆ. ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿರುವ ಸಿದ್ದಲಿಂಗಶ್ರೀಗಳು ತಮ್ಮ ಮಠದ ಭಕ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಸರ್ವ ರೋಗಿಗಳಿಗೆ ಒಂದೇ ಸೂರಿನಡಿ ತಪಾಸಣೆಯ ಜೊತೆಗೆ ಚಿಕಿತ್ಸೆ ಕೊಡಿಸಲು ಆರೋಗ್ಯ ಜಾತ್ರೆ ಹಮ್ಮಿಕೊಂಡಿದ್ದಾರೆ. ಈ ಹಿಂದೆ ಕೋವಿಡ್ ಸಮಯದಲ್ಲಿಯೂ ಗ್ರಾಮೀಣ ಭಾಗದ ೨೩ ಸಾವಿರ ಕುಟುಂಬಗಳಿಗೆ ಶ್ರೀಮಠದಿಂದ ದವಸ ಧಾನ್ಯದ ಕಿಟ್ ನೀಡಿ ಅವರ ಹಸಿವು ತಣಿಸುವ ಕೆಲಸ ಮಾಡಿದ್ದರು. ಎಲ್ಲ ಭಕ್ತರಿಗೂ ಬಡವರಿಗೆ ಜಿಲ್ಲಾ ಕೇಂದ್ರ ಸ್ಥಳಗಳಲ್ಲಿರುವ ಆಸ್ಪತ್ರೆಗಳಿಗೆ ಬರಲು ತೊಂದರೆಯಾಗುತ್ತದೆ. ಹಾಗಾಗಿ ಒಂದೆಡೆ ಸೇರಿಸಿ ಆರೋಗ್ಯ ಕಾಪಾಡುವ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಈ ಆರೋಗ್ಯ ತಪಾಸಣೆಯಲ್ಲಿ ೩೫೦ ನೇತ್ರ ತಪಾಸಣೆ ನಡೆಸಿದ್ದು,ಈ ಪೈಕಿ ೮೦ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಬಿಎಲ್‌ಡಿಯಿಂದ ಇತರೆ ೩೦೦ ರೋಗಿಗಳಿಗೆ ತಪಾಸಣೆ ಕೈಗೊಳ್ಳಲಾಯಿತು. ಈ ಶಿಬಿರದಲ್ಲಿ ೪೫ ಜನರು ರಕ್ತದಾನ ಮಾಡಿದರು.ಈ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಡಾ.ವ್ಹಿ.ಎಸ್.ಕಾರ್ಚಿ, ಡಾ.ನಜೀರ ಕೋಳ್ಯಾಳ, ಡಾ.ಎ.ಎ.ನಾಲಬಂದ, ಡಾ.ರವಿ ಅಗರವಾಲಾ, ಬಿ.ಎಂ.ಪಾಟೀಲ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯರು ಹಾಗೂ ಸಿಬ್ಬಂದಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))