ನಾಯಕತ್ವದ ಗುಣ ಬೆಳೆಸಲು ಶಾಲಾ ಸಂಸತ್ತು ಸಹಕಾರಿ

| Published : Jul 06 2025, 01:51 AM IST

ಸಾರಾಂಶ

ಶಾಲಾ ಸಂಸತ್ತು ಎಂಬ ಪರಿಕಲ್ಪನೆಯು ಶಾಲೆಯ ಆಡಳಿತದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಉತ್ತಮ ಮಾರ್ಗವಾಗಿದ್ದು, ನಾಯಕತ್ವದ ಗುಣಗಳನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಅವಕಾಶ ನೀಡುತ್ತದೆ ಎಂದು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಸುರೇಶ್ ತಿಳಿಸಿದರು.

ಶಿಕಾರಿಪುರ: ಶಾಲಾ ಸಂಸತ್ತು ಎಂಬ ಪರಿಕಲ್ಪನೆಯು ಶಾಲೆಯ ಆಡಳಿತದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಉತ್ತಮ ಮಾರ್ಗವಾಗಿದ್ದು, ನಾಯಕತ್ವದ ಗುಣಗಳನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಅವಕಾಶ ನೀಡುತ್ತದೆ ಎಂದು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಸುರೇಶ್ ತಿಳಿಸಿದರು.

ಶನಿವಾರ ಪಟ್ಟಣದ ಭವಾನಿರಾವ್ ಕೇರಿಯ ಕುಮದ್ವತಿ ಪ್ರೌಢಶಾಲೆ ಮತ್ತು ಮೈತ್ರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲಾ ಸಂಸತ್ತು ಶಾಲೆಯ ಮೂಲಸೌಕರ್ಯ, ಕಲಿಕಾ ವಾತಾವರಣ ಮತ್ತು ಶಾಲೆಯ ಇತರ ವಿಷಯಗಳ ಸುಧಾರಣೆಗೆ ಸಲಹೆಗಳನ್ನು ನೀಡುತ್ತದೆ. ಶಾಲಾ ಸಂಸತ್ತಿನ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದರು.

ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆ ಜೊತೆಗೆ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಅರಿತಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನೆಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ ಎಂದು ಹೇಳಿದರು.

ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದ್ದು, ಶಾಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳು ಸಹ ಅರ್ಹರಾಗಿದ್ದಾರೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ. ಶಾಲೆಯಲ್ಲಿ ರಚನೆಯಾಗಿರುವ ಶಿಸ್ತಿನ ಮಂತ್ರಿಯ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿಯೂ ಸಚಿವ ಸ್ಥಾನ ರಚನೆ ಆಗಬೇಕಾಗಿದೆ ಎಂದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಪ್ರತಿನಿಧಿ ಹಾಗೂ ಪ್ರಾಚಾರ್ಯ ಡಾ.ಶಿವಕುಮಾರ.ಜಿ.ಎಸ್ ಮಾತನಾಡಿ, ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣದ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ ಎಂದರು.

ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಶಾಲಾ ಪ್ರಾಚಾರ್ಯ ವಿಶ್ವನಾಥ.ಪಿ, ಶಾಲಾ ಸಂಸತ್ತು ಶಾಲೆಯೊಳಗೆ ವಿದ್ಯಾರ್ಥಿ ನಾಯಕತ್ವಕ್ಕೆ ಅವಕಾಶಗಳನ್ನು ಒದಗಿಸುತ್ತದೆ. ಇದು ಅಲ್ಪಾವಧಿಯಲ್ಲಿ ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿಗಳನ್ನು ನಿಜ ಜೀವನದ ನಾಯಕತ್ವಕ್ಕೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ ಚುನಾಯಿತ ಪ್ರತಿನಿಧಿಗಳಿಗೆ ಬ್ಯಾಡ್ಜ್ ವಿತರಿಸಿ ಶುಭ ಹಾರೈಸಿದರು.

ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಾನ್ವಿ ಸಂಗಡಿಗರು ಪ್ರಾರ್ಥಿಸಿ, ವರ್ಷ ಸ್ವಾಗತಿಸಿ, ಪ್ರಣತಿ ಮತ್ತು ಹೇಮಾ ನಿರೂಪಿಸಿ ಧನುಷ್‌ ವಂದಿಸಿದರು.