ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ: ಹೊರಟ್ಟಿ

| Published : Jan 21 2024, 01:31 AM IST

ಸಾರಾಂಶ

ಕಬಡ್ಡಿ ಆಡುವುದರಿಂದ ಅಂಗಾಂಗಗಳು ಸದೃಢಗೊಳ್ಳುತ್ತವೆ. ನಾನೂ ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಟ ಆಡಿದ್ದೆ. ಅದನ್ನು ಇಂದಿನ ಯಮನೂರು ಮತ್ತು ಅಮರಗೋಳ ಗ್ರಾಮಗಳ ತಂಡಗಳು ನೆನಪು ಮಾಡಿಕೊಟ್ಟಿವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನವಲಗುಂದ: ಕಬಡ್ಡಿ ಕ್ರೀಡೆ ಹಮ್ಮಿಕೊಳ್ಳುವುದರೊಂದಿಗೆ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶುಕ್ರವಾರ ರಾತ್ರಿ ಇಲ್ಲಿನ ಶಂಕರ ಕಾಲೇಜು ಮೈದಾನದಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಸಂಸದರ ಟ್ರೋಫಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಟ್ರೋಫಿ ಅನಾವರಣ ಮಾಡುವ ಮುಖಾಂತರ ಚಾಲನೆ ನೀಡಿ ಮಾತನಾಡಿದರು.

ಕಬಡ್ಡಿ ಆಡುವುದರಿಂದ ಅಂಗಾಂಗಗಳು ಸದೃಢಗೊಳ್ಳುತ್ತವೆ. ನಾನೂ ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಟ ಆಡಿದ್ದೆ. ಅದನ್ನು ಇಂದಿನ ಯಮನೂರು ಮತ್ತು ಅಮರಗೋಳ ಗ್ರಾಮಗಳ ತಂಡಗಳು ನೆನಪು ಮಾಡಿಕೊಟ್ಟಿವೆ. ಆಟಗಳನ್ನು ಆಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಎಂದಿಗೂ ನಶಿಸದ ಹಾಗೆ ಶಾಲೆ ಮತ್ತು ಕಾಲೇಜು ತದನಂತರವೂ ಆಟದಲ್ಲಿ ಬೆರೆಯುವ ಮನೋಭಾವವನ್ನು ಯುವಕರು ಬೆಳೆಸಿಕೊಂಡು ತಮ್ಮ ದೇಹವನ್ನು ಸದೃಢವಾಗಿಟ್ಟುಕೊಂಡು ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಗಳಾಗುವಂತೆ ಕರೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಳೆದ 2 ವರ್ಷಗಳಿಂದ ದೇಶಿ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಯುವಕರಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ ನೀಡುತ್ತಿದ್ದೇವೆ. ಇದೀಗ ನವಲಗುಂದ ಮೊದಲ ವಿಧಾನಸಭಾ ಕ್ಷೇತ್ರದಲ್ಲಿ 108 ತಂಡಗಳು ಪಾಲ್ಗೊಂಡಿರುವುದು ಸಂತಸ ತಂದಿದೆ. ಇನ್ನೂ 7 ವಿಧಾನಸಭಾ ಕ್ಷೇತ್ರಗಳಲ್ಲಿ 2 ತಿಂಗಳಲ್ಲಿ ಹಂತ ಹಂತವಾಗಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿ ಅವುಗಳಲ್ಲಿ ಆಯ್ದ ತಂಡಗಳು ಲೋಕಸಭಾ ಕಬಡ್ಡಿ ಟ್ರೊಫಿಯಲ್ಲಿ ಪಾಲ್ಗೊಳ್ಳಲಿವೆ.

ಜ. 27 ಮತ್ತು 28 ರಂದು ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ. ರಾಜಕೀಯವಾಗಿ ಹಾಗೂ ಬಲಿಷ್ಠವಾಗಿ ಬೆಳೆಯಲು ಭಾರತ ಈಗಾಗಲೆ ಜಗತ್ತಿನಲ್ಲಿ 5ನೇ ರಾಷ್ಟ್ರವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ 3ನೇ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ದೇಶಿ ಆಟಗಳನ್ನು ಪ್ರೋತ್ಸಾಹಿಸಿ ಯುವಕರನ್ನು ಬಲಿಷ್ಠರನ್ನಾಗಿ ಮಾಡಬೇಕಾಗಿದೆ ಎಂದರು.

ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿ ಸಂಭ್ರಮಿಸಿದರು. 2024ರ ಶ್ರೀರಾಮ ಮಂದಿರದ ಹಾಗೂ ವಿವಿಧ ಕಾಮಗಾರಿಗಳ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಕೆ.ಎನ್. ಗಡ್ಡಿ, ಮಾಜಿ ಶಾಸಕ ಆರ್.ಬಿ. ಶಿರಿಯಣ್ಣವರ, ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮುಖಂಡರಾದ ನಾಗರಾಜ ಛಬ್ಬಿ, ಎ.ಬಿ. ಹಿರೇಮಠ, ಅಡಿವೆಪ್ಪ ಮನಮಿ, ಸಿದ್ದನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಬಸವರಾಜ ಕುಂದಗೋಳಮಠ, ಶರಣಪ್ಪಗೌಡ ದಾನಪ್ಪಗೌಡ್ರ, ದೇವರಾಜ ದಾಡಿಭಾವಿ, ಷಣ್ಮುಖ ಗುರಿಕಾರ, ಬಿ.ಬಿ. ಗಂಗಾಧರಮಠ ಸೇರಿದಂತೆ ಹಲವರಿದ್ದರು.