ಸಾರಾಂಶ
- ಎಸ್‌ಎಸ್ ಹೈಟೆಕ್ ಆಸ್ಪತ್ರೆ ವೈದ್ಯ-ಸಿಬ್ಬಂದಿಗೆ ಸೂಚನೆ ನೀಡಿದ ಸಂಸದೆ । ಮಳೆಹಾನಿ ಪ್ರದೇಶಗಳ ಪರಿಶೀಲನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಬುಧವಾರ ರಾತ್ರಿ, ಗುರುವಾರ ನಸುಕಿನಲ್ಲಿನ ಭಾರಿ ಮಳೆಯಿಂದಾಗಿ ಮನೆ ಕುಸಿದು ತೀವ್ರ ಗಾಯಗೊಂಡಿದ್ದ ಹರಿಹರದ 4 ವರ್ಷದ ಮಗುವನ್ನು ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ಗುರುವಾರ ಸಂಜೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ತಾಕೀತು ಮಾಡಿದರು.ಹರಿಹರದ ಮೆಹಬೂಬ್ ನಗರದ ಮಗು ಆಯೇಷಾ ಮನೆ ಕುಸಿದು, ಗಂಭೀರವಾಗಿ ಗಾಯಗೊಂಡಿದೆ. ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸದೆ ಡಾ.ಪ್ರಭಾ ಆಸ್ಪತ್ರೆ ವೈದ್ಯರೊಂದಿಗೆ ಮಗುವಿನ ಆರೋಗ್ಯ, ಸ್ಥಿತಿಗತಿ ಬಗ್ಗೆ ವಿಚಾರಿಸಿದರು. ಅನಂತರ ಮಗುವಿನ ಪಾಲಕರಿಗೆ ಧೈರ್ಯ ಹೇಳಿದರು.
ಬಳಿಕ ಸಂಸದರು ಮೇಯರ್ ಕೆ.ಚಮನ್ ಸಾಬ್, ಉಪ ಮೇಯರ್ ಶಾಂತಕುಮಾರ ಸೋಗಿ, ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯರಾದ ಎ.ಬಿ.ರಹೀಂ ಸಾಬ್ ಇತರರೊಂದಿಗೆ ಮಳೆ ಹಾನಿಗೀಡಾದ ಗಾಂಧಿ ನಗರ, ಮಂಡಕ್ಕಿ ಭಟ್ಟಿ ಲೇಔಟ್ ಇತರೆ ಪ್ರದೇಶಗಳಿಗೂ ಭೇಟಿ ನೀಡಿದರು. ಸಂತ್ರಸ್ಥರಿಗೆ ನೈತಿಕ ಸ್ಥೈರ್ಯ ತುಂಬಿದರು.ಡಾ.ಪ್ರಭಾ ಈ ಸಂದರ್ಭ ಮಾತನಾಡಿ, ತೀವ್ರ ಮಳೆಯಿಂದಾಗಿ ದಾವಣಗೆರೆ, ಹರಿಹರ, ಹರಪನಹಳ್ಳಿ ಸೇರಿದಂತೆ ಜಿಲ್ಲಾದ್ಯಂತ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್, ಉಪ ಮೇಯರ್, ಅಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಅಗತ್ಯ ಎಲ್ಲ ನೆರವು ಒದಗಿಸಲಾಗುವುದು ಎಂದರು.
ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಸ್ವಚ್ಛತೆ ಕೊರತೆ ಇದೆ. ಇದರಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಭಟ್ಟಿ ಪ್ರದೇಶವನ್ನು, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಳೆಯಿಂದಾಗಿ ಸಾಕಷ್ಟು ತೊಂದರೆ ಆಗುತ್ತಿರುವ ಬಗ್ಗೆ ಜನರು ನಮ್ಮ ಗಮನಕ್ಕೆ ತಂದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದರು ತಿಳಿಸಿದರು.ಅನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಡಾ.ಪ್ರಭಾ, ತೀವ್ರ ಮಳೆಯಿಂದಾಗಿ ಹಾನಿಗೀಡಾದ ಮನೆಗಳಿಗೆ ಖುದ್ದಾಗಿ ತೆರಳಿ, ಸ್ಥಿತಿಗತಿ ವೀಕ್ಷಿಸಿದರು. ಸಂತ್ರಸ್ತರಿಗೆ ಸೂಕ್ತ ಪರಿಹಾರ ಹರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪರಿಹಾರ ಕ್ರಮ ಕೈಗೊಳ್ಳಲು, ಸಂತ್ರಸ್ತರಿಗೆ ಮನೆಗಳನ್ನು ಒದಗಿಸುವಂತೆ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜೊತೆಗೂ ಚರ್ಚಿಸುವುದಾಗಿ ಭರವಸೆ ನೀಡಿದರು.
- - - -17ಕೆಡಿವಿಜಿ21, 22:ದಾವಣಗೆರೆಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ ನೀಡಿ, ಪರಿಶೀಲಿಸಿದರು. ಮೇಯರ್ ಚಮನ್ ಸಾಬ್, ಉಪ ಮೇಯರ್ ಶಾಂತಕುಮಾರ ಸೋಗಿ ಇತರರು ಇದ್ದರು.
-17ಕೆಡಿವಿಜಿ23, 24, 25:ಹರಿಹರದಲ್ಲಿ ತೀವ್ರ ಮಳೆಯಿಂದಾಗಿ ಮನೆ ಕುಸಿದು ತೀವ್ರ ಗಾಯಗೊಂಡಿದ್ದ 4 ವರ್ಷದ ಮಗು ಆಯೇಷಾ ದಾವಣಗೆರೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಸಂಸದೆ ಡಾ.ಪ್ರಭಾ ಗಾಯಾಳು ಮಗುವಿಗೆ ಸೂಕ್ತ ಚಿಕಿತ್ಸೆ, ಔಷಧೋಪಾಚಾರಕ್ಕೆ ಸೂಚಿಸಿದರು.