ಜಿಲ್ಲಾದ್ಯಂತ ಭಾರೀ ಮಳೆ: 4 ಬಡಾವಣೆ ಜಲಾವೃತ, ಮಗು ಗಂಭೀರ

| Published : Oct 18 2024, 01:19 AM IST

ಜಿಲ್ಲಾದ್ಯಂತ ಭಾರೀ ಮಳೆ: 4 ಬಡಾವಣೆ ಜಲಾವೃತ, ಮಗು ಗಂಭೀರ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರ, ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾದರೆ, ಗೋಡೆಯೊಂದು ಕುಸಿದ ಪರಿಣಾಮ ಮೂವರು ಗಾಯಗೊಂಡು, ಓರ್ವ ಬಾಲಕಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿದೆ.

- ದಾವಣಗೆರೆಯಲ್ಲಿ ಪಿಸಾಳೆ ಕಾಂಪೌಂಡ್‌, ಹರಿಹರದ ಜೈಭೀಮ್‌, ಕಾಳಿದಾಸ, ಮೆಹಬೂಬ್‌ ನಗರಗಳ ಮನೆಗಳಿಗೆ ನುಗ್ಗಿದ ನೀರು

- - - * ಹರಿಹರದಲ್ಲೇನಾಯ್ತು? - ಹರಿಹರದ ಜೈಭೀಮ್ ನಗರದಲ್ಲಿ ಮನೆ ಗೋಡೆ ಕುಸಿದು ನಾಲ್ವರು ಕೂದಲೆಳೆ ಅಂತರದಲ್ಲಿ ಪಾರು

- ಘಟನೆಯಲ್ಲಿ 4 ವರ್ಷದ ಮಗು ಆಯೇಷಾಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು

- ಕಾಳಿದಾಸ ನಗರ, ಮೆಹಬೂಬ್‌ ನಗರ ಜಲಾವೃತ, ರಾತ್ರೋರಾತ್ರಿ ಮನೆಗಳ ತೊರೆದ ಜನ

- ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಹರಿಹರ ನಗರಸಭೆ ಅಧಿಕಾರಿಗಳ ವಿರುದ್ಧ ಜನರ ತೀವ್ರ ಆಕ್ರೋಶ

- ಯಾವ ಮನೆ, ಯಾವಾಗ, ಯಾರ ಮೇಲೆ ಕುಸಿಯುತ್ತದೋ ಎಂಬ ಆತಂಕದಲ್ಲಿ ನಿವಾಸಿಗಳು

- ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಆದೇಶಕ್ಕಾಗಿ ಕಾದುಕುಳಿತ ಹರಿಹರ ತಾಲೂಕು ಆಡಳಿತ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರ, ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾದರೆ, ಗೋಡೆಯೊಂದು ಕುಸಿದ ಪರಿಣಾಮ ಮೂವರು ಗಾಯಗೊಂಡು, ಓರ್ವ ಬಾಲಕಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿದೆ.

ಹರಿಹರದ ಜೈಭೀಮ್ ನಗರದಲ್ಲಿ ತೀವ್ರ ಮಳೆಯಿಂದ ಮನೆ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿದ್ದ ನಾಲ್ವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ 4 ವರ್ಷದ ಮಗು ಆಯೇಷಾ ತೀವ್ರ ಗಾಯಗೊಂಡಿದೆ. ಮಗುವನ್ನು ಹರಿಹರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರೋರಾತ್ರಿ ಮನೆಗಳ ತೊರೆದರು:

ಅಲ್ಲಿನ ಕಾಳಿದಾಸ ನಗರ, ಮೆಹಬೂಬ್‌ ನಗರಗಳು ಅಕ್ಷರಶಃ ಜಲಾವೃತವಾಗಿದ್ದು, ಎರಡು ಬಡಾವಣೆಗಳ ಜನಜೀವನ ಅಸ್ತವ್ಯಸ್ತವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಕಳೆದ ರಾತ್ರಿಯಿಂದಲೂ ಜನರು ತೀವ್ರ ತೊಂದರೆ ಅನುಭ‍ವಿಸಿದರು. ಜನರು ಜೀವ ಉಳಿಸಿಕೊಳ್ಳಲು ಮಕ್ಕಳು, ಮರಿ, ಹಿರಿಯರು, ಅಗತ್ಯ ವಸ್ತುಗಳು, ಬಟ್ಟೆಗಳ ಸಮೇತ ರಾತ್ರೋರಾತ್ರಿ ಮನೆಗಳನ್ನು ತೊರೆದು, ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.

ನಗರಸಭೆ ವಿರುದ್ಧ ಆಕ್ರೋಶ:

ಎರಡೂ ಬಡಾವಣೆಗಳಿಗೆ ಎತ್ತರ ಪ್ರದೇಶದಲ್ಲಿ ಆದ ಮಳೆಯಿಂದಾಗಿ ಕಾಲುವೆಯಲ್ಲಿ ಬಂದಂತೆ ನೀರು ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಸುಮಾರು ಒಂದು ಕಿಮೀಗೂ ಅಧಿಕ ಉದ್ದದ ಬಡಾವಣೆ ಸಂಪೂರ್ಣ ಜಲಾವೃತವಾಗಿದೆ. ಪ್ರತಿ ಸಲ ಜೋರು ಮಳೆಯಾದಾಗಲೂ ಇದೇ ಪರಿಸ್ಥಿತಿ ಇರುತ್ತದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಹರಿಹರ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಳಿದಾಸ ನಗರದ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಕಾಲುವೆ ನೀರು ನುಗ್ಗಿದೆ. ಪರಿಣಾಮ ಕಾಳಿದಾಸ ನಗರ, ಮೆಹಬೂಬ್ ನಗರ, ನೀಲಕಂಠ ನಗರ, ಬೆಂಕಿ ನಗರ ಬಡಾವಣೆಗಳಲ್ಲಿ ನೀರು ನುಗ್ಗಿ ಬರುತ್ತಿದೆ. ಬಟ್ಟೆಗಳು, ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಇತರೆ ಸಾಮಾನು ಸರಂಜಾಮು ಸಂಪೂರ್ಣ ನೀರು ಪಾಲಾಗಿವೆ. ತುತ್ತು ಅನ್ನಕ್ಕೂ ಇಡೀ ದಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಮನೆ, ಯಾವಾಗ, ಯಾರ ಮೇಲೆ ಕುಸಿಯುತ್ತದೋ ಎಂಬ ಆತಂಕದಲ್ಲಿ ಇಡೀ ದಿನವನ್ನು ಜನರು ಕಳೆಯಬೇಕಾಯಿತು.

ಕಾಳಜಿ ಕೇಂದ್ರ ತೆರೆಯದ ತಾಲೂಕು ಆಡಳಿತ:

ಮಳೆಯಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಶೀಘ್ರ ಕಾಳಜಿ ಕೇಂದ್ರ ತೆರೆದು, ನೆರವಿಗೆ ಬರಬೇಕಿದೆ. ಆದರೆ, ಊಟ ವಸತಿ ಕಲ್ಪಿಸಲು ಜಿಲ್ಲಾಡಳಿತದ ಆದೇಶಕ್ಕೆ ಹರಿಹರ ತಾಲೂಕು ಆಡಳಿತ ಕಾದುಕುಳಿತಿದೆ. ಗುರುವಾರ ಮಧ್ಯಾಹ್ನವಾದರೂ ಕಾಳಜಿ ಕೇಂದ್ರ ತೆರೆಯದ ಬಗ್ಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದರು. ಬಡವರು, ಶ್ರಮಿಕರು, ಕೂಲಿ ಕಾರ್ಮಿಕರು ವಾಸಿಸುವ ಬಡಾವಣೆಯಲ್ಲೇ ವರುಣನ ಆರ್ಭಟ ಜೋರಾಗಿದ್ದು, ಶಾಸಕರು, ತಹಸೀಲ್ದಾರರು, ನಗರಸಭೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ಜನರಿಗೆ ಧೈರ್ಯ ಹೇಳಿದರು.

ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ:

ಪ್ರತಿ ವರ್ಷವೂ ಮಳೆಗಾದಲ್ಲಿ ಮೆಹಬೂಬ್‌ ನಗರ, ಕಾಳಿದಾಸ ನಗರದ ಜನತೆ ತೀವ್ರ ತೊಂದರೆ ಅನುಭವಿಸುತ್ತಾರೆ. ಕಾಲುವೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಜೋರು ಮಳೆಯಾದರೂ ಮಳೆ ನೀರೆಲ್ಲಾ ಬಡಾವಣೆಗಳಿಗೆ ನುಗ್ಗಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಗುರುವಾರ ಸಂಜೆಯಾದರೂ ನಾಲ್ಕೂ ಬಡಾವಣೆಗಳಿಗೆ ಒಂದೇ ಸಮನೆ ಮೇಲ್ಭಾಗದಿಂದ ಹರಿದು ಬರುತ್ತಿದ್ದ ಮಳೆನೀರು ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇತ್ತು. ಯಾವ ಆಡಳಿತವಾದರೇನು, ಮುನ್ನೆಚ್ಚರಿಕೆ ವಹಿಸಿದ್ದರೆ ಸಮಸ್ಯೆ ಕಡಿಮೆ ಮಾಡಬಹುದಿತ್ತು. ಆದರೆ, ಈಗ ಆಗಿರುವ ಸಮಸ್ಯೆ, ಸಂಕಷ್ಟದಿಂದ ತಾತ್ಕಾಲಿಕವಾಗಿ ಜನರಿಗೆ ಸ್ಪಂದಿಸಬಹುದಷ್ಟೇ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- - -

ಬಾಕ್ಸ್ * ದಾವಣಗೆರೆ ಪಿಸಾಳೆ ಕಾಂಪೌಂಡ್‌ ಮನೆಗಳಿಗೆ ನುಗ್ಗಿದ ನೀರು

- ಮಳೆನೀರು ಹೊರಹಾಕಲು ಮನೆ ಮಂದಿ ರಾತ್ರಿಯಿಡೀ ಹರಸಾಹಸ

ಕನ್ನಡಪ್ರಭ ವಾರ್ತೆ, ದಾವಣಗೆರೆ

ತುಂತುರು ಸುರಿಯುತ್ತಿದ್ದ ಮಳೆ ರಾತ್ರೋರಾತ್ರಿ ತೀವ್ರ ಸ್ವರೂಪ ಪಡೆದ ಪರಿಣಾಮ ಜಿಲ್ಲಾ ಕೇಂದ್ರದ ಅನೇಕ ಬಡಾವಣೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಹಳೇ ಪಿ.ಬಿ. ರಸ್ತೆ ಪಕ್ಕದ ಪಿಸಾಳೆ ಕಾಂಪೌಂಡ್‌ನ ಮೂರನೇ ಕ್ರಾಸ್‌ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಬಡಾವಣೆಗಳು, ಹೊಸ ಬಡಾವಣೆಗಳು, ತಗ್ಗುಪ್ರದೇಶಗಳು, ಮೂಲ ಸೌಕರ್ಯಗಳಿಲ್ಲದ ಪ್ರದೇಶಗಳು, ಕೊಳಗೇರಿಗಳಲ್ಲಿ ಜನಜೀವನಕ್ಕೆ ತೀವ್ರ ತೊಂದರೆಗೆ ಸಿಲುಕಿದೆ. ಇಡೀ ರಾತ್ರಿ ಜನ ಭಯದಿಂದಲೇ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಪಿಸಾಳೆ ಕಾಂಪೌಂಡ್‌ ನಿವಾಸಿಗಳು ಮಳೆ ನೀರು ಹೊರಗೆ ಹಾಕಲು ಹರಸಾಹಸ ಪಡಬೇಕಾಯಿತು. ಮಕ್ಕಳು, ಮಹಿಳೆಯರು, ಹಿರಿಯರು ದಿನವಿಡೀ ಮನೆಗೆ ನುಗ್ಗಿದ ಮಳೆನೀರು ಹಾಗೂ ಒಳಚರಂಡಿ ಮೂಲಕ ಒಳಗೆ ಬಂದ ಕೊಳಕು ನೀರನ್ನು ಬಕೇಟುಗಳಲ್ಲಿ ತೋಡಿ ತೋಡಿ ಹೊರಹಾಕುವುದರಲ್ಲೇ ಸಾಕಾಗಿಹೋದರು. ಬುಧವಾರ ರಾತ್ರಿ ಭಯಾನಕ ವಾತಾವರಣದಲ್ಲೇ ಕಾಲ ಕಳೆದಿದ್ದನ್ನು ನೆನೆನೆನೆದು ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದರು.

ಪಿಸಾಳೆ ಕಾಂಪೌಂಡ್‌ನ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಮನೆ ಮಂದಿಗಳೆಲ್ಲ ಸಂಬಂಧಿಗಳು, ಪರಿಚಯಸ್ಥರ ಮನೆಗಳಲ್ಲಿ ರಾತ್ರಿ ಕಳೆದರು. ಉಳಿದವರು ಮನೆಗೆ ನುಗ್ಗಿದ ನೀರನ್ನು ಹೊರಹಾಕುವುದರಲ್ಲಿ ಬೆಳಕು ಹರಿಸಿದರು. ಪಿಸಾಳೆ ಕಾಂಪೌಂಡ್ ತಗ್ಗು ಪ್ರದೇಶದಲ್ಲಿದೆ. ಆದಕಾರಣ ಮಳೆನೀರು ವಸತಿ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಠಿಸಿತ್ತು.

ಮನೆಯ ಬಟ್ಟೆ, ಬರೆ, ಸಾಮಗ್ರಿಗಳು, ದವಸ ಧಾನ್ಯಗಳು ಕೂಡ ನೀರು ಪಾಲಾಗಿದ್ದು, ಮನೆಯಲ್ಲಿದ್ದ ನೀರನ್ನು ಹೊರ ಹಾಕುವ ಕೆಲಸವನ್ನು ಇಲ್ಲಿನ ಸ್ಥಳೀಯರು ಮಾಡುತ್ತಿದ್ದಾರೆ. ಬೈಕ್, ಕಾರು ಇತರೆ ವಾಹನಗಳು ಕೂಡ ಮುಳುಗಡೆಯಾಗಿವೆ. ಇನ್ನೊಂದು ಕಡೆ ಪಾಲಿಕೆ ಸಿಬ್ಬಂದಿ ಪಿಸಾಳೆ ಕಾಂಪೌಂಡ್‌ನಲ್ಲಿದ್ದ ನೀರನ್ನು ಹೊರಹಾಕುವ ಕೆಲಸ ಮಾಡುತ್ತಿದ್ದಾರೆ.‌ ಉಳಿದಂತೆ ನಗರದ ಹಲವು ಭಾಗದಲ್ಲಿಯೂ ಮಳೆನೀರು‌ ಮನೆಗಳಿಗೆ ನುಗ್ಗಿದ್ದು ಅಪಾರ ಹಾನಿ‌ ಸಂಭವಿಸಿದೆ. ಅಲ್ಲಲ್ಲಿ ಮನೆ, ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭಿಸುತ್ತಿವೆ.

ಜಿಲ್ಲಾದ್ಯಂತ ಅನೇಕ ರಸ್ತೆಗಳು, ಸೇತುವೆಗಳು ಜಲಾವೃತವಾದವು. ದಾವಣಗೆರೆ-ಹರಪನಹಳ್ಳಿಗೆ ಸಂಪರ್ಕಿಸುವ ಅನೇಕ ಸೇತುವೆಗಳು ಮಳೆ ನೀರಿನಿಂದಾಗಿ ಮುಳುಗಡೆಯಾಗಿದ್ದವು. ಸೇತುವೆ ಮೇಲೆ ನೀರು ಹರಿದರೂ, ಬಸ್‌, ಕಾರು ಇತರೆ ವಾಹಗಳನ್ನು ಚಾಲಕರು ನೀರಲ್ಲೇ ಚಾಲನೆ ಮಾಡಿಕೊಂಡು, ಮತ್ತೊಂದು ದಡ ಸೇರುವ ಮೂಲಕ ಪ್ರಯಾಣ ಮುಂದುವರಿಸಿದರು. ಈ ಎಲ್ಲ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿಯೂ ವೈರಲ್ ಆಗುತ್ತಿವೆ.

ಹರಿಹರ, ಹರಪನಹಳ್ಳಿಗೆ ಸಂಪರ್ಕದ ರಸ್ತೆ, ಸೇತುವೆಗಳು ಜಲಮಯವಾಗಿವೆ. ರಸ್ತೆಯೇ ಕಾಣದಂತೆ ಸೇತುವೆಯ ಮೇಲೆ, ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದರಿಂದ ಅನೇಕ ವಾಹನಗಳ ಸವಾರರು, ಚಾಲಕರು ನಿಂತಲ್ಲಿಯೇ ವಾಹನ ನಿಲ್ಲಿಸಿ, ರಾತ್ರಿ ಕಳೆದರು. ಮತ್ತೆ ಕೆಲವರು ರಾತ್ರೋರಾತ್ರಿ ಬಂದ ದಾರಿಯಲ್ಲೇ ವಾಪಸಾದರು. ಈ ಮಧ್ಯೆ ಕೆಲವು ಚಾಲಕರು ಹುಚ್ಚು ಸಾಹಸ ಮೆರೆದು, ಸೇತುವೆಗಳ ಮೇಲೆ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೇ ವಾಹನ ಚಾಲನೆ ಮಾಡಿಕೊಂಡು ಹೋದರು.

- - - -17ಕೆಡಿವಿಜಿ1, 2:

ದಾವಣಗೆರೆ ಪಿಸಾಳೆ ಕಾಂಪೌಂಡ್ ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿದ ಕೊಳಚೆ ನೀರು ಹೊರಹಾಕುತ್ತಿರುವ ಜನರು.