ಸಾರಾಂಶ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಗೊ.ರು. ಚನ್ನಬಸಪ್ಪ ಅವರು 1993 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸೂತ್ರಧಾರರಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಂಡ್ಯ ಮಂಜುನಾಥ
ಮಂಡ್ಯ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಗೊ.ರು. ಚನ್ನಬಸಪ್ಪ ಅವರು 1993 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸೂತ್ರಧಾರರಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸೃಜನಶೀಲ ವ್ಯಕ್ತಿತ್ವ, ಸರಳ, ಸಜ್ಜನಿಕೆಯ ನಡೆಯಿಂದಲೇ ಹಿರಿಯರು-ಕಿರಿಯರೆಂಬ ಬೇಧವಿಲ್ಲದೆ ಎಲ್ಲರನ್ನೂ ಗೌರವಿಸುತ್ತಾ ಒಗ್ಗಟ್ಟಿನಿಂದ ಮುನ್ನಡೆಸಿದ್ದರಿಂದಲೇ ಮೂವತ್ತು ವರ್ಷಗಳ ಹಿಂದೆ ನಡೆದ ಮಂಡ್ಯ ಸಾಹಿತ್ಯ ಸಮ್ಮೇಳನ ಇತಿಹಾಸದ ಪುಟ ಸೇರುವಂತಾಯಿತು ಎಂದು ಅಂದಿನ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಪ್ರೊ.ಜಿ.ಟಿ.ವೀರಪ್ಪ ಅವರು ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ಅಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನ ಕುರಿತಾಗಿ ನೀಡುತ್ತಿದ್ದ ಉತ್ತಮ ಸಲಹೆ, ಮಾರ್ಗದರ್ಶನಗಳಿಂದ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಸಮ್ಮೇಳನ ನಡೆಯುವಂತಾಯಿತು. ಸಾಹಿತ್ಯ ಸಮ್ಮೇಳನಕ್ಕೆ ಹಣಕಾಸನ್ನು ದೊರಕಿಸಿಕೊಡುವಂತೆ ಜಿಲ್ಲೆಯ ಹಿರಿಯ ರಾಜಕಾರಣಿಗಳಾಗಿದ್ದ ಜಿ.ಮಾದೇಗೌಡ ಮತ್ತು ಎಸ್.ಎಂ.ಕೃಷ್ಣ ಅವರ ಬಳಿ ಗೊರುಚ ಮತ್ತು ನಾನು ಹೋಗಿ ಮನವಿ ಮಾಡಿದ್ದೆವು. ಗೊರುಚ ಅವರ ಮೇಲೆ ವಿಶ್ವಾಸವಿಟ್ಟು ಸಮ್ಮೇಳನಕ್ಕೆ ತೊಂದರೆಯಾಗದಂತೆ ಹಣಕಾಸಿನ ನೆರವನ್ನು ಒದಗಿಸುವ ಭರವಸೆ ನೀಡಿದ್ದರು.
ಆ ನಂತರ ಅಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಲ್ಲೆಯವರಾದ ಡಾ.ಎಚ್.ಎಲ್.ನಾಗೇಗೌಡ ಅವರನ್ನು ಆಯ್ಕೆ ಮಾಡುವ ಪ್ರಸ್ತಾವ ಅವರೆದುರು ಬಂದಾಗ ಅದನ್ನು ಎಲ್ಲಿಯೂ ಬಹಿರಂಗಪಡಿಸದೆ ಮಂಡ್ಯ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುವಾಗ ಆ ಜಿಲ್ಲೆಯವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ತಪ್ಪಾಗುತ್ತದೆ. ಡಾ.ಎಚ್.ಎಲ್.ನಾಗೇಗೌಡರು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಭೂಷಣ ಪ್ರಾಯರಾಗಿದ್ದರೂ ಅವರನ್ನು ಮಾಡುವುದು ಬೇಡ ಎಂದಿದ್ದರು. ಆನಂತರ ಎಲ್ಲರೂ ಒಮ್ಮತದಿಂದ ಚದುರಂಗ ಅವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೆವು ಎಂಬುದಾಗಿ ನೆನಪಿಸಿಕೊಂಡರು.
ಸಮ್ಮೇಳನದ ಗೋಷ್ಠಿಗಳು ಹೇಗಿರಬೇಕು, ಯಾರ್ಯಾರನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕು, ವಸತಿ-ಊಟದ ವ್ಯವಸ್ಥೆ ಹೇಗಿರಬೇಕು ಎಂಬ ಪ್ರತಿಯೊಂದು ವಿಷಯಗಳನ್ನು ಎಲ್ಲ್ರೊಂದಿಗೆ ಪ್ರಸ್ತಾಪಿಸಿ, ಮುಕ್ತವಾಗಿ ಚರ್ಚಿಸುವ ಸಜ್ಜನಿಕೆ ಅವರಲ್ಲಿತ್ತು. ಎಲ್ಲರ ಸಲಹೆ-ಅಭಿಪ್ರಾಯ ಸ್ವೀಕರಿಸಿ, ಉತ್ತಮವಾದವನ್ನು ಒಪ್ಪಿ ತಪ್ಪಿದ್ದರೆ ಅದರ ಬಗ್ಗೆ ಮಾರ್ಗದರ್ಶನ ನೀಡುತ್ತಾ ಸಮ್ಮೇಳನ ಯಶಸ್ವಿಗೊಳಿಸುವುದಕ್ಕೆ ಕಾರಣೀಭೂತರಾಗಿದ್ದರು.
ರಾಜ್ಯಾಧ್ಯಕ್ಷರಾಗಿದ್ದರೂ ಎಲ್ಲರೊಳಗೆ ಒಂದಾಗಿಬಿಡುತ್ತಿದ್ದರು. ವೈಮನಸ್ಸು, ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ, ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದಾರ ಗುಣವನ್ನು ಹೊಂದಿದ್ದರು. ಅವರು ನೀಡಿದ ಸಹಕಾರ, ಮಾರ್ಗದರ್ಶನದಿಂದ ಸಮ್ಮೇಳನಕ್ಕೆ ಸಂಗ್ರಹಿಸಿದ್ದ 42.50 ಲಕ್ಷ ರು. ಹಣದಲ್ಲಿ 20 ಲಕ್ಷ ರು. ಹಣ ಉಳಿಸುವುದಕ್ಕೆ ಸಾಧ್ಯವಾಯಿತು ಎಂದು ನೆನೆದರು.
ದತ್ತಿ ನಿಧಿಗಳ ಜನಕ:
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಗಳನ್ನು ಸ್ಥಾಪಿಸುವ ಮೂಲಕ ಗೊರುಚ ಅವರು ದತ್ತಿನಿಧಿಗಳ ಜನಕ ಎಂದೇ ಖ್ಯಾತಿ ಗಳಿಸಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ೬೦ ರಿಂದ ೬೫ ದತ್ತಿನಿಧಿಗಳನ್ನು ಸ್ಥಾಪನೆ ಮಾಡುವ ಮೂಲಕ ಸಾಹಿತ್ಯದ ಕಾರ್ಯಕ್ರಮಗಳಿಗೆ ಬೇರೆಯವರ ಬಳಿ ಕೈಚಾಚದಂತೆ ಮಾಡಿದರು. ದತ್ತಿ ಹಣದಿಂದಲೇ ಯಶಸ್ವಿಯಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಮಾದರಿ ನಡೆಯನ್ನು ಅನುಸರಿಸಿದರು ಎಂಬುದಾಗಿ ಪ್ರೊ.ಜಿ.ಟಿ.ವೀರಪ್ಪ ಹೇಳಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರನ್ನು ಆರಿಸಿರುವುದು ಉತ್ತಮ ಆಯ್ಕೆಯಾಗಿದೆ. ಮೊದಲೇ ಸಮ್ಮೇಳನಾಧ್ಯಕ್ಷ ಸ್ಥಾನ ಅವರಿಗೆ ಸಿಗಬೇಕಿತ್ತು. ತಡವಾಗಿಯಾದರೂ ಅವರನ್ನು ಗುರುತಿಸಲಾಗಿದೆ. ಅಂತಹವರ ಆಯ್ಕೆಯಿಂದ ಸಮ್ಮೇಳನಕ್ಕೆ ಹೊಸ ಮೆರುಗು ಬಂದಿದೆ. ೧೯೯೩ರ ಸಾಹಿತ್ಯ ಸಮ್ಮೇಳನದ ವೇಳೆ ರಾಜ್ಯಾಧ್ಯಕ್ಷರಾಗಿದ್ದ ಗೊರುಚ ಸಮರ್ಥವಾಗಿ ಹೊತ್ತು ನಡೆದು ಮಂಡ್ಯದ ಹಿರಿಮೆಯನ್ನು ಹೆಚ್ಚಿಸಿದ್ದರು.
- ಪ್ರೊ.ಜಿ.ಟಿ.ವೀರಪ್ಪ, ಹಿರಿಯ ಸಾಹಿತಿ
ಗೊರುಚ ಆಯ್ಕೆಗೆ ಮೀರಾ ಅಭಿನಂದನೆ
ಡಿ. 20, 21, 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರು ಆಯ್ಕೆಯಾಗಿರುವುದು ಪ್ರಶಂಸನೀಯ ಹಾಗೂ ಅಭಿನಂದನೀಯ ಎಂದು ಜಿಲ್ಲಾ ಕಸಾಪ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದ್ದಾರೆ.
ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿಯಲ್ಲಿ ಸಾಹಿತಿ ಗೊ.ರು.ಚ. ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದ್ದಾರೆ.
ಈ ಹಿಂದೆ ಅವರೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 1994ರಲ್ಲಿ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಇದೀಗ ಅವರೇ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಂಡ್ಯ ಜಿಲ್ಲೆಯ ಸೌಭಾಗ್ಯ ಎಂದಿದ್ದಾರೆ.