ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮವ್ಯಕ್ತಿಗತ ಶಿಸ್ತು ಮತ್ತು ಅಧ್ಯಯನಶೀಲ ಮನಸ್ಥಿತಿ ರೂಢಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಸಮುದಾಯ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕಂಚಿನಕೆರೆ ಗೋವಿಂದೇಗೌಡ ತಿಳಿಸಿದರು.ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯದಲ್ಲಿ ಅಶಿಸ್ತು ಹೆಚ್ಚಾಗುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ಸರ್ಕಾರ ಗ್ರಾಮೀಣ ಪ್ರದೇಶದ ರೈತ, ಬಡ, ಹಿಂದುಳಿದ ಮತ್ತು ಅವಕಾಶ ವಂಚಿತ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ದೊರಕಿಸಿಕೊಡುವ ಉದ್ದೇಶದಿಂದ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಕ್ರೀಡಾಂಗಣ, ನುರಿತ ಅಧ್ಯಾಪಕ- ಅಧ್ಯಾಪಕೇತರ ವರ್ಗ ಇದ್ದರೂ ಅದರ ಸದುಪಯೋಗ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಬೇಸರದ ಸಂಗತಿ ಎಂದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನ ವೇಗದ ಗತಿಗೆ ನಮ್ಮ ಗ್ರಾಮೀಣ ಮಕ್ಕಳು ಹೊಂದಿಕೊಳ್ಳಬೇಕು. ಕೇವಲ ಪದವಿ, ಅಂಕಪಟ್ಟಿಗೆ ಸೀಮಿತವಾದರೆ ಪ್ರಯೋಜನವಿಲ್ಲ. ಕಾಲೇಜಿನಲ್ಲಿ ಎನ್‌ಎಸ್‌ಎಸ್, ರೆಡ್ ಕ್ರಾಸ್, ಸ್ಕೌಟ್ಸ್‌ಮತ್ತು ಗೈಡ್ಸ್, ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಹಲವು ಸಮಿತಿಗಳಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ತಿಳಿ ಹೇಳಿದರು.ಐಕ್ಯೂಎಸಿ ಸಂಚಾಲಕ ಸುರೇಶ್ ಛಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪ್ರಮುಖವಾಗಿ ಮೂರು ಕೌಶಲ್ಯ ಬೆಳೆಸಿಕೊಳ್ಳಬೇಕು. ಮೊದಲನೆಯದು ಕೇಳಿಸಿ ಕೊಳ್ಳುವ ಕೌಶಲ್ಯ, ಎರಡನೆಯದು ಸಂವಹನ ಮಾಡುವ ಕೌಶಲ್ಯ ಹಾಗೂ ನಂತರ ತಾನು ಕಲಿತದ್ದನ್ನು ಬರವಣಿಗೆಯ ಮೂಲಕ ಅಭಿವ್ಯಕ್ತಿಪಡಿಸುವ ಕೌಶಲ್ಯಗಳು ಯಶಸ್ಸಿಗೆ ಬಹಳ ಮುಖ್ಯ ಎಂದು ಅವರು ಸಲಹೆ ನೀಡಿದರು.ಸಹಾಯಕ ಪ್ರಾಧ್ಯಾಪಕ ಡಾ. ಸತ್ಯನಾರಾಯಣ, ಎಚ್.ಎಸ್. ಮಧು, ಡಾ.ಎ.ಎಸ್. ರಾಜೇಶ್, ಡಾ.ಬಿ.ಕೆ. ಸುಮನಾ, ಡಾ.ಎಸ್. ಸುವರ್ಣ, ಮಂಜುನಾಥ್, ಡಾ.ಬಿ.ಟಿ. ಪ್ರತಿಮಾ, ಡಾ.ಎಂ. ತಹಸೀನ್, ಗ್ರಂಥಪಾಲಕ ಡಾ.ಜಿ.ಟಿ. ಮಹೇಶ್, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಜಿ.ಪಿ. ಗಾಯತ್ರಮ್ಮ, ಕಚೇರಿ ಅಧೀಕ್ಷಕ ಎಸ್. ಬ್ರಿಜೇಶ್, ಎಫ್.ಡಿ.ಎ ಟಿ.ಪಿ. ಸುಮನಾ ಅವರು ತಮ್ಮ ತಮ್ಮ ವಿಭಾಗಗಳು ಹಾಗೂ ಸಮಿತಿಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.ಐಕ್ಯೂಎಸಿ ಸಹ ಸಂಚಾಲಕ ಎಂ. ಶ್ರೀನಿವಾಸ ವಂದಿಸಿದರು. ವಿದ್ಯಾರ್ಥಿನಿ ಟಿ.ಎಲ್. ಕುಸುಮಾ ಮತ್ತು ತಂಡದವರು ಪ್ರಾರ್ಥಿಸಿದರು.ಮಧ್ಯಾಹ್ನದ ಗೋಷ್ಠಿಯಲ್ಲಿ ತರಬೇತುದಾರ ಎಚ್.ಎನ್. ಗಿರೀಶ್ ಅವರು ಉಪನ್ಯಾಸ ನೀಡಿದರು.