ಸಾರಾಂಶ
ರಾಣಿಬೆನ್ನೂರು: ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವನರ ಹೇಳಿದರು. ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಜನರಲ್ಲಿ ಭರವಸೆ ಮೂಡಿಸಿವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರ್ಕಾರ ಎಂದು ಜನ ಮನ್ನಣೆ ದೊರೆತಿದೆ. ಗ್ರಾಮೀಣ ಭಾಗದ ಮಹಿಳೆಯರು ಇದರ ಬಗ್ಗೆ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಣಿಬೆನ್ನೂರು ತಾಲೂಕಿನ ಬ್ಯಾಡಗಿ ಮತ ಕ್ಷೇತ್ರದ ಗುಡ್ಡದ ಅನ್ವೇರಿ, ದೇವರಗುಡ್ಡ, ಗುಡಿಹೊನ್ನತ್ತಿ ಭಾಗದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಗಳನ್ನು ಹಂತವಾಗಿ ಬಗೆ ಹರಿಸಲಾಗುವುದು. ಮಾಲತೇಶ ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಸಂಶಿ, ಮಾಲತೇಶ ಹಕಾರಿ, ಮಂಜು ಬ್ಯಾಡಗಿ, ಸುರೇಶ ಚಳಗೇರಿ, ನಿಂಗಣ್ಣ ಗಂಟಿ, ಮಾರುತಿ ಐಗಳ, ಮಾಲತೇಶ ಏಳಕುರಿ, ನಿಂಗಪ್ಪ ಮುದ್ದಿ, ಶಾಂತಕುಮಾರ ಮತ್ತಿತರರಿದ್ದರು.