ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಹಿಂದೇಟು: ರಮೇಶ್ ರಾಜು

| Published : Jan 10 2025, 12:45 AM IST

ಸಾರಾಂಶ

ರೈತರು ತಾವು ಬೆಳೆದ ಭತ್ತವನ್ನು ನಷ್ಟದ ಬೆಲೆಗೆ ಕೊಡುವುದಕ್ಕೆ ಸರ್ಕಾರ ಭತ್ತದ ಖರೀದಿ ಕೇಂದ್ರ ತೆರೆಯದಿರುವುದೇ ಕಾರಣ. ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲವೆಂದು ಕಳೆದ ಬಾರಿ ಬೊಬ್ಬೆ ಹಾಕಿತ್ತು. ಹಾಗಾಗಿ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರೂ ಅದನ್ನೂ ಸರಿಯಾಗಿ ಕೊಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಕಾಲದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಡಿಸೆಂಬರ್ ಮಧ್ಯಭಾಗದಿಂದ ಭತ್ತದ ಕಟಾವು ಕಾರ್ಯ ಆರಂಭವಾಗುತ್ತದೆ. ಭತ್ತದ ಕಟಾವು ಆರಂಭವಾದ ತಕ್ಷಣ ಖಾಸಗಿ ಮಧ್ಯವರ್ತಿಗಳು ರೈತರ ತಾಕಿಗೆ ಬಂದು ಭತ್ತವನ್ನು ಖರೀದಿ ಮಾಡುವರು ಎಂದರು.

ಕಳೆದ ವರ್ಷ ಮುಂಚಿತವಾಗಿ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿದ್ದರು. ಆಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ 3000 ರು.ನಿಂದ 3200 ರು.ವರೆಗೆ ಇತ್ತು. ಈ ವರ್ಷ ಭತ್ತದ ಖರೀದಿ ಕೇಂದ್ರವನ್ನು ಸರ್ಕಾರ ಇನ್ನೂ ತೆರೆಯದಿರುವುದರಿಂದ ಭತ್ತದ ಬೆಲೆ 1000 ರು.ನಷ್ಟ ಕಡಿಮೆಯಾಗಿದೆ. 1800 ರು.ನಿಂದ 2000 ರು.ವರೆಗೆ ಕ್ವಿಂಟಲ್ ಭತ್ತದ ಬೆಲೆ ಇಳಿಸಿದ್ದಾರೆ. ಇದರಿಂದ ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರು.ಗೂ ಹೆಚ್ಚು ನಷ್ಟವಾಗುತ್ತಿದೆ ಎಂದು ದೂರಿದರು.

ರೈತರು ತಾವು ಬೆಳೆದ ಭತ್ತವನ್ನು ನಷ್ಟದ ಬೆಲೆಗೆ ಕೊಡುವುದಕ್ಕೆ ಸರ್ಕಾರ ಭತ್ತದ ಖರೀದಿ ಕೇಂದ್ರ ತೆರೆಯದಿರುವುದೇ ಕಾರಣ. ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲವೆಂದು ಕಳೆದ ಬಾರಿ ಬೊಬ್ಬೆ ಹಾಕಿತ್ತು. ಹಾಗಾಗಿ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರೂ ಅದನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದು ಜರಿದರು.

ಕೃಷಿ ಸಮ್ಮಾನ್ ಯೋಜನೆಯಿಂದ ಸಣ್ಣಪುಟ್ಟ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಹಾಯವಾಗಿದ್ದ 4 ಸಾವಿರ ರು. ಹಣವನ್ನು ರೈತರಿಗೆ ಕತ್ತರಿ ಮಾಡಿ ನಿಲ್ಲಿಸಿದೆ. ಗ್ರಾಮೀಣ ಪ್ರದೇಶದ ಸಣ್ಣ ರೈತರು ಒಂದೆರಡು ಹಸುಗಳನ್ನು ಸಾಕಿಕೊಂಡು ಜೀವನ ರೂಪಿಸಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಾಲು ಉತ್ಪಾದಕರಿಗೆ 2 ರು .ವರೆಗೆ ಕಡಿಮೆ ಮಾಡಿದೆ ಎಂದರು.

ವಿದ್ಯುತ್ ಸಂಪರ್ಕದ ಅಕ್ರಮ-ಸಕ್ರಮ ಯೋಜನೆಯಲ್ಲಿ ರೈತರು 25 ಸಾವಿರ ರು. ಭರಿಸಿದರೆ ಉಳಿಕೆ ಹಣವನ್ನು ಸರ್ಕಾರವೇ ಭರಿಸಿ ವಿದ್ಯುತ್ ಸಂಪರ್ಕ ಕೊಡುತ್ತಿದ್ದರು. ಇದನ್ನು ನಿಲ್ಲಿಸಿ ರೈತರು ಸುಮಾರು 4 ರಿಂದ 5 ಲಕ್ಷ ರು. ಭರಿಸಿ ವಿದ್ಯುತ್ ಸಂಪರ್ಕ ಪಡೆಯಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಇದ್ದ ರೈತ ವಿದ್ಯಾರ್ಥಿ ನಿಧಿಯನ್ನು ಬಂದ್ ಮಾಡಿ ರೈತರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದೆ. ಕೃಷಿಗೆ ಸಹಾಯಕವಾಗಿದ್ದ ಡೀಸೆಲ್, ಸಹಾಯಧನ ಬಂದ್ ಮಾಡಿದೆ. ಆರ್‌ಟಿಸಿ, ಎಂ.ಆರ್., ಇ-ಸ್ಟ್ಯಾಂಪ್ ಹಾಗೂ ಸಮುದಾಯ ಇಲಾಖೆಯ ಇತರೆ ಶುಲ್ಕಗಳನ್ನು ಅತ್ಯಂತ ದುಬಾರಿ ಮಾಡಿ ರೈತರಿಗೆ ಹೊರೆಯಾಗುವಂತೆ ಮಾಡಿದೆ ಎಂದು ದೂಷಿಸಿದರು.

ಕೃಷ್ಣರಾಜಸಾಗರ ಜಲಾಶಯದಲ್ಲಿ ಸಾಕಷ್ಟು ನೀರು ಇರುವುದರಿಂದ ಮುಂದಿನ ಬೆಳೆಗೆ ಕಟ್ಟು ಪದ್ಧತಿಯಲ್ಲಿ ನೀರು ಕೊಡದೆ ಇದುವರೆಗೂ ಕೊಟ್ಟಂತೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಕಾಲುವೆಗೆ ಹರಿಸಿದರೆ ಕಳೆದ ಬಾರಿಯ ಬರದಿಂದ ತತ್ತರಿಸಿರುವ ರೈತರು ಬದುಕಿಕೊಳ್ಳುತ್ತಾರೆ. ಆದ್ದರಿಂದ ಬಿತ್ತನೆ ಬಿತ್ತುವ ಸಕಾಲದಿಂದ ಕಟಾವಿನವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರನ್ನು ಹರಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಾರಾಯಣಸ್ವಾಮಿ, ಬಿ.ಪಿ.ಅಪ್ಪಾಜಿ, ಅಚ್ಯುತ್, ಇಂದಿರಮ್ಮ ಇದ್ದರು.