ಗುಂಡ್ಲುಪೇಟೆಯಲ್ಲಿ ಗ್ರಾಮ ಪಂಚಾಯಿತಿ ಅವ್ಯವಹಾರ: ಸ್ಪಷ್ಟ ಅಭಿಪ್ರಾಯ ತಿಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ

| Published : Aug 03 2024, 12:34 AM IST

ಗುಂಡ್ಲುಪೇಟೆಯಲ್ಲಿ ಗ್ರಾಮ ಪಂಚಾಯಿತಿ ಅವ್ಯವಹಾರ: ಸ್ಪಷ್ಟ ಅಭಿಪ್ರಾಯ ತಿಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯ ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕ ಅವ್ಯವಹಾರ, ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿ ಕ್ರಮವಹಿಸುವ/ವಹಿಸಬೇಕಿರುವ ಮಾಹಿತಿಯನ್ನು ಸ್ಪಷ್ಟ ಅಭಿಪ್ರಾಯ ತಿಳಿಸಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತಾಲಯ ಪತ್ರ ಬರೆದಿದೆ.

ಚುನಾಯಿತಿ ಪ್ರತಿನಿಧಿಗಳ ಮೇಲೆ ಕ್ರಮಕ್ಕೆ ಸ್ಪಷ್ಟ ಅಭಿಪ್ರಾಯ ಕೇಳಿದ ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತಾಲಯಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕ ಅವ್ಯವಹಾರ, ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ದಂಡನೆ ವಿಧಿಸಲಾಗುತ್ತಿದ್ದು, ಇನ್ನು ಮುಂದೆ ಇಂತಹ ಎಲ್ಲಾ ಪ್ರಕರಣಗಳಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾತ್ರಕ್ಕನುಗುಣವಾಗಿ ಸದರಿಯವರ ಮೇಲೆ ಕ್ರಮವಹಿಸುವ/ವಹಿಸಬೇಕಿರುವ ಮಾಹಿತಿಯನ್ನು ಸ್ಪಷ್ಟ ಅಭಿಪ್ರಾಯ ತಿಳಿಸಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತಾಲಯ ಪತ್ರ ಬರೆದಿದೆ.

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿ ಮೇರೆಗೆ ಜು.೨೧ ರಂದು ನಡೆದ ಸಭಾ ನಡಾವಳಿಯಂತೆ ಗ್ರಾಪಂಗಳಲ್ಲಿನ ಆರ್ಥಿಕ ಅವ್ಯವಹಾರ, ಹಣಕಾಸು ದುರುಪಯೋಗಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಕೇವಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ದಂಡನೆ ವಿಧಿಸಲಾಗುತ್ತಿದ್ದು, ಗ್ರಾಪಂ ಅಧ್ಯಕ್ಷ/ಸದಸ್ಯರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೆ ಇರುವ ಬಗ್ಗೆ ಚರ್ಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಗ್ರಾಪಂ ಅಧ್ಯಕ್ಷ/ಸದಸ್ಯರ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೂ ಕೈಗೊಂಡ ಕ್ರಮದ ಬಗ್ಗೆ ಅಗತ್ಯ ವರದಿಯನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗ್ರಾಪಂಗಳಲ್ಲಿ ಆರ್ಥಿಕ ವ್ಯವಹಾರಗಳ ಖರ್ಚು, ವೆಚ್ಚ ಪಾವತಿಸುವಾಗ ಧನಾದೇಶವನ್ನು ಕರ್ನಾಟಕ ಪಂಚಾಯತ್‌ ರಾಜ್‌ (ಗ್ರಾಪಂಗಳ ಲೆಕ್ಕ ಪತ್ರಗಳು ಮತ್ತು ಬಜೆಟ್‌) ನಿಯಮಗಳು, ೨೦೦೬ ರನ್ವಯ ಗ್ರಾಪಂ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಸಹಿ ಮಾಡುತ್ತಿದ್ದು, ಸದರಿಯವರೂ ಸಹ ಜವಾಬ್ದಾರರಾಗಿರುತ್ತಾರೆ.

ಕಾಮಗಾರಿಗಳ ಅನುಷ್ಠಾನದಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಿಂದ ತಾಂತ್ರಿಕ ಅನುಮೋದನೆ ಮತ್ತು ಕಾಮಗಾರಿಗಳ ಎಂಬಿಯನ್ನು ನಮೂದಿಸುತ್ತಿದ್ದು, ಅದರ ಆಧಾರದ ಮೇಲೆ ಬಿಲ್‌ಗಳನ್ನು ಪಾವತಿಸುತ್ತಿರುವ ಕಾರಣ ಇನ್ಮುಂದೆ ಇಂತಹ ಎಲ್ಲಾ ಪ್ರಕರಣಗಳಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾತ್ರಕ್ಕನುಗುಣವಾಗಿ ಸದರಿಯವರ ಮೇಲೆ ಕ್ರಮವಹಿಸುವ/ವಹಿಸಬೇಕಿರುವ ಮಾಹಿತಿಯನ್ನು ಸ್ಪಷ್ಟ ಅಭಿಪ್ರಾಯವನ್ನು ಆಯುಕ್ತಾಲಯಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರು (ಆಡಳಿತ-೧) ಜು.೩೦ ರಂದು ಪತ್ರ ಬರೆದಿದ್ದಾರೆ.