ಹಿಂದೂ ಮಹಾ ಗಣಪನ ಅದ್ಧೂರಿ ಶೋಭಾಯಾತ್ರೆ

| Published : Sep 14 2025, 01:04 AM IST

ಸಾರಾಂಶ

ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಜಂಟಿಯಾಗಿ ಪ್ರತಿಷ್ಠಾಪಿಸಿದ್ದ, ಹಿಂದೂ ಮಹಾ ಗಣಪತಿ ವಿಸರ್ಜನೆ ಶನಿವಾರ ನಗರದಲ್ಲಿ ಭಾರಿ ವೈಭವದಿಂದ ಜರುಗಿತು. ಇಲ್ಲಿನ ಬಾಲಾಜಿ ದೇವಸ್ಥಾನ ರಸ್ತೆಯಲ್ಲಿನ ಗೌತಮ ಚಂದ್ ದೋಕಾ ನಿವೇಶನದಲ್ಲಿ, ಎಂದಿನಂತೆ ಈ ಬಾರಿಯೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ 5ನೇ ವರ್ಷದ ಗಣೇಶ ಪ್ರತಿಷ್ಠಾಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಜಂಟಿಯಾಗಿ ಪ್ರತಿಷ್ಠಾಪಿಸಿದ್ದ, ಹಿಂದೂ ಮಹಾ ಗಣಪತಿ ವಿಸರ್ಜನೆ ಶನಿವಾರ ನಗರದಲ್ಲಿ ಭಾರಿ ವೈಭವದಿಂದ ಜರುಗಿತು. ಇಲ್ಲಿನ ಬಾಲಾಜಿ ದೇವಸ್ಥಾನ ರಸ್ತೆಯಲ್ಲಿನ ಗೌತಮ ಚಂದ್ ದೋಕಾ ನಿವೇಶನದಲ್ಲಿ, ಎಂದಿನಂತೆ ಈ ಬಾರಿಯೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ 5ನೇ ವರ್ಷದ ಗಣೇಶ ಪ್ರತಿಷ್ಠಾಪಿಸಲಾಗಿತ್ತು.

18ನೇ ದಿನವಾದ ಶನಿವಾರ ವಿಸರ್ಜನೆಗೆ ಅದ್ಧೂರಿ ಮೆರವಣಿಗೆ ಸಾಕ್ಷಿಯಾಗಿತ್ತು. ಈ 18 ದಿನಗಳ ಅವಧಿಯಲ್ಲಿ ಅನೇಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ದೇಶಭಕ್ತಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಆಯೋಜಕರು, ನಾಡು-ನುಡಿ, ದೇಶಭಕ್ತಿ, ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಧಾರ್ಮಿಕ ಭಾವನೆಗಳನ್ನು ಮನದಲ್ಲಿ ಅಚ್ಚೊಳಿಯುವಂತೆ ಮಾಡುವ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದು ವಿಶೇಷ.

ಈ ಜೊತೆಗೆ, ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾಸೋಹ, 24 ಗಂಟೆಗಳ ಕಾಲ ನಗರದ ವಿಬಿಆರ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಲಕ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡು, ತಜ್ಞವೈದ್ಯರ ಮೂಲಕ ರೋಗಿಗಳ ಚಿಕಿತ್ಸೆಗೆ ನೆರವಾಗಿದ್ದೆವು ಎಂದು ಸಮಿತಿಯ ಉತ್ಸವ ಸಮಿತಿ ಸಂಚಾಲಕ ಹಾಗೂ ಬಜರಂಗದಳದ ಕಲಬುರಗಿ ವಿಭಾಗದ ಸಹ ಸಂಯೋಜಕ ಶಿವುಕುಮಾರ್ ಸುಕಲೋರ್ ಕನ್ನಡಪ್ರಭಕ್ಕೆ ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ ಕರ್ನಾಟದ ಉತ್ತರ ಪ್ರಾಂತದ ಅಧ್ಯಕ್ಷರಾದ ಲಿಂಗರಾಜಪ್ಪ ಅಪ್ಪಾ ಅವರ ಮಾರ್ಗದರ್ಶನದಲ್ಲಿ ರಚಿತಗೊಂಡ ಉತ್ಸವ ಸಮಿತಿಯು, 20 ಅಡಿ ಎತ್ತರದ, ಸುಮಾರು 4 ಲಕ್ಷ ರು.ಗಳ ಮೌಲ್ಯದ ಈ ವಿಗ್ರಹವನ್ನು ಹೈದರಾಬಾದಿನಿಂದ ತರಿಸಿಕೊಳ್ಳಲಾಗಿತ್ತು. 18ನೇ ದಿನ ವಿಸರ್ಜನೆ ದಿನವಾದ ಶನಿವಾರ (ಸೆ.13) ಬೃಹತ್ ಶೋಭಾಯಾತ್ರೆ ಮೆರುಗು ಮೂಡಿಸಿತ್ತು. ಭವ್ಯ ಶೋಭಾಯಾತ್ರೆ ವೀಕ್ಷಿಸಲು ಯಾದಗಿರಿ ನಗರ ಸೇರಿದಂತೆ ನೆರೆ ಜಿಲ್ಲೆ ಹಾಗೂ ತೆಲಂಗಾಣ, ಮಹಾರಾಷ್ಟ್ರದಿಂದಲೂ ಜನರು ಆಗಮಿಸಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ರೂಪಕಗಳು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾತಂಡಗಳ ಪ್ರದರ್ಶನ ಜನಾಕರ್ಷಸಿತ್ತು. ಡಿಜೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಯುವ ಜನಸಮೂಹದ ದಂಡು, ಆಗಸದೆತ್ತರಕ್ಕೆ ಚಿಮ್ಮುತ್ತಿದ್ದ ವರ್ಣರಂಜಿತ ಬೆಳಕಿನ ಚಿತ್ತಾರ, ಜೈಕಾರಗಳ ಘೋಷಣೆ ಮುಗಿಲ ಮುಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ ಹಾಗೂ ಸರಳ ವಿಸರ್ಜನೆಗೆ ಅನುಕೂಲವಾಗಲೆಂದು ಪೊಲೀಸರು ಸೂಕ್ತ ಬಂದೋಬಸ್ತ್‌ ನೆರವೇರಿಸಿದ್ದರು.

----

ಕನ್ನಡಪ್ರಭ ಚಿತ್ರಗಳು : ಮಂಜುನಾಥ್‌ ಎಸ್‌. ಬಿರಾದರ್‌.