ದರ ನಿಗದಿ ಮಾಡದಿದ್ರೆ ರೈತರ ಜೊತೆ ಜನ್ಮ ದಿನಾಚರಣೆ

| Published : Nov 05 2025, 03:15 AM IST

ಸಾರಾಂಶ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡದಿದ್ದರೆ ಬುಧವಾರ ಜನ್ಮದಿನವಿದ್ದರೂ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದರು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಸ್ಥಳಕ್ಕೆ ಉಸ್ತುವಾರಿ ಸಚಿವರನ್ನಾಗಲಿ, ಸಕ್ಕರೆ ಸಚಿವರನ್ನಾಗಲಿ ಅಥವಾ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡದಿದ್ದರೆ ಬುಧವಾರ ಜನ್ಮದಿನವಿದ್ದರೂ ಹೋರಾಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದರು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಸ್ಥಳಕ್ಕೆ ಉಸ್ತುವಾರಿ ಸಚಿವರನ್ನಾಗಲಿ, ಸಕ್ಕರೆ ಸಚಿವರನ್ನಾಗಲಿ ಅಥವಾ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳಲ್ಲಿ ಕಬ್ಬಿಗೆ ಅಗತ್ಯ ಬೆಲೆ ಕಲ್ಪಿಸಲು ಆಗ್ರಹಿಸಿ ನಿರಂತರ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಕಬ್ಬು ಬೆಳೆದು ಅಗತ್ಯ ಬೆಲೆ ದೊರಕದೆ ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿರುವ ರೈತರ ಬೇಡಿಕೆಗೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕಾರ್ಖಾನೆಗಳು ರೈತರಿಗೆ ₹3,050 ಪ್ರತಿ ಟನ್ ಮಾತ್ರ ನೀಡಲು ಒಪ್ಪಿಕೊಂಡಿವೆ. ರೈತರು ₹3,500 ಪ್ರತಿ ಟನ್ ಕೇಳುತ್ತಿದ್ದಾರೆ. ಪ್ರತಿ ಟನ್‌ಗೆ ₹3,550 ಬೆಲೆ ನಿಗದಿಪಡಿಸಬೇಕೆಂಬ ರೈತರ ಆಗ್ರಹದಂತೆ ಕಾರ್ಖಾನೆ ಮಾಲೀಕರನ್ನು ಕರೆತು ಸೌಹಾರ್ದಯುತವಾಗಿ ಮಾತುಕತೆ ನಡೆಸಿ, ಕಬ್ಬು ಬೆಳೆಗಾರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬಾಕಿ ಇರುವ ಬಿಲ್ ಪಾವತಿಸಿ ರೈತರ ನೆರವಿಗೆ ಧಾವಿಸಬೇಕು. ಈ ಮೂಲಕ ರಾಜ್ಯ ಸರ್ಕಾರ ವಿಳಂಬಕ್ಕೆ ಅವಕಾಶ ನೀಡದೆ ರೈತರ ನ್ಯಾಯೋಜಿತ ಹೋರಾಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವವರೆಗೂ ಹೋರಾಟ ಮಾಡಲಾಗುವುದು. ಬುಧವಾರವೂ ರೈತರ ಜೊತೆಯಾಗಿ ಹೋರಾಟದಲ್ಲಿ ಧುಮುಕುತ್ತೇನೆ. ನನ್ನ ಜನ್ಮದಿನವಿದ್ದರೂ ಕಣ್ಣೀರು ಸುರಿಸುತ್ತಿರುವ ರೈತರಿಗೆ ಆ ದಿನ ಮೀಸಲಿಡುತ್ತೇನೆ. ಒಂದು ವೇಳೆ ಬಗೆಹರಿಯದಿದ್ದರೆ ರಾಜ್ಯಾದ್ಯಂತ ರೈತರ ಕಿಡಿ ಹರಡುತ್ತದೆ ಎಂದು ಎಚ್ಚರಿಕೆ ನೀಡಿದರು.ಒಂದೆರಡು ತಾಸು ಇದ್ದು ಇಲ್ಲಿ ಹೊರಡಬೇಕು ಎಂದು ಬಂದಿದ್ದೆ. ಉರಿ ಬಿಸಿಲಿನಲ್ಲಿ ರೈತರು ಕುಳಿತಿದ್ದನ್ನು ಕಂಡು ಇಲ್ಲೇ ಇರಲು ತೀರ್ಮಾನ ಮಾಡಿದೆ.

ನೀವೆಲ್ಲರೂ ಇಲ್ಲೇ ಮಲಗುತ್ತಿರಿ ಅಂದರೆ ನಾನು ಕೂಡ ಇಲ್ಲೇ ಮಲಗುತ್ತೇನೆ. ರಾತ್ರಿ ರೈತರ ಜೊತೆಗೆ ಪ್ರತಿಭಟನಾ ಸ್ಥಳದಲ್ಲೇ ಮಲಗುತ್ತೇನೆ ಎಂದರು.ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿ ಜೊತೆಗೆ ನಾನು ಮಾತಾಡಿದ್ದೇನೆ. ರೈತರನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬೇಡಿ. ರೈತರನ್ನು ಎದುರು ಹಾಕಿಕೊಂಡರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಜೊತೆಗೆ ಮಾತಾಡಿ ಎಂದು ಹೇಳಿದ್ದೇನೆ. ಜಿಲ್ಲೆಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇನ್ನೂ ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದರೆ, ಆ ಭಗವಂತ ಕೂಡ ನಿಮ್ಮ ಸರ್ಕಾರ ಕಾಪಾಡಲು ಆಗುವುದಿಲ್ಲ. ಕಬ್ಬು ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ .ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ದಾದಾಗೌಡ ಬಿರಾದಾರ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಸೇರಿದಂತೆ ರೈತ ಹೋರಾಟಗಾರರು, ವಿವಿಧ ರೈತಪರ ಸಂಘಟನೆಗಳ ಪ್ರಮುಖರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.