ಸಾರಾಂಶ
ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿ ಜೇನು ಕೃಷಿಯಿಂದಲೂ ಉತ್ತಮ ಆದಾಯ ಗಳಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬುವುದನ್ನು ಜಿಲ್ಲೆಯ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ವಾಸವಿರುವ ಉಷಾ ಎಂಬುವವರೇ ಜೇನು ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ.ಮಕ್ಕಳು ಚಿಕ್ಕವರಿರುವಾಗಲೇ ತನ್ನ ಗಂಡನಿಂದ ದೂರವಾದ ಉಷಾ ತೀರಾ ಬಡತನದಿಂದ ಬಳಲುತ್ತಿದ್ದರು, ಆದರೆ ಬಳಿಕ ಒಂದು ನಿರ್ದಿಷ್ಟವಾದ ವೃತ್ತಿಯನ್ನು ಕಂಡುಕೊಳ್ಳುವ ಸಲುವಾಗಿ ಜೇನು ಕೃಷಿಯನ್ನು ಆಯ್ಕೆ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ.ಪೊನ್ನಂಪೇಟೆ ಫಾರೆಸ್ಟ್ ಕಾಲೇಜಿನ ಕೆಂಚರೆಡ್ಡಿ ಯವರಿಂದ ಜೇನು ಸಾಕಾಣಿಕೆ ತರಬೇತಿ ಪಡೆದುಕೊಂಡ ಉಷಾ ತಮ್ಮ ಮನೆಯ ಅಂಗಳದಲ್ಲಿ ಎರಡುಮೂರು ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಕೃಷಿ ಆರಂಭಿಸಿದರು. ಪ್ರಸಕ್ತ 20 ಜೇನು ಪೆಟ್ಟಿಗೆ ಮನೆ ಬಳಿ ಇದೆ. ಆದರೆ ಇವರಿಗೆ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತಿತ್ತು. ದಿನ ಕಳೆದಂತೆ ಇವರ ಪ್ರಯತ್ನಕ್ಕೆ ತಕ್ಕಂತೆ ಜೇನು ಕೃಷಿಯಿಂದ ಉತ್ತಮ ಆದಾಯ ಬರಲು ಆರಂಭಿಸಿದ್ದು ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುತ್ತಾರೆ.ಸರಿಯಾಗಿ ನಿರ್ವಹಣೆ ಮಾಡಿದ್ದೇ ಆದರೆ ಜೇನು ಸಾಕಾಣಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ಉಷಾ ರವರು ಪ್ರತಿ ಕೆಜಿಗೆ 1000 ರುಪಾಯಿಯಿಂದ 1200 ರುಪಾಯಿವರೆಗೆ ಮಾರಾಟ ಮಾಡುತ್ತಿದ್ದು, ವಾರ್ಷಿಕವಾಗಿ 6 ಲಕ್ಷ ರುಪಾಯಿ ವರೆಗೂ ಆದಾಯ ಗಳಿಸಿದ್ದು ಕೂಡ ಇದೆ.ಜೇನಿನ ನಿರ್ವಹಣೆ ಹೇಗೆ..?ಜೇನು ಸಾಕಾಣಿಕೆ ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಸರಿಯಾದ ನಿರ್ವಹಣೆ ಮಾಡದಿದ್ದರೆ ನಷ್ಟ ಅನುಭವಿಸುವುದು ಖಂಡಿತ. ಕ್ರಮಬದ್ಧವಾಗಿ ನಿರ್ವಹಣೆ ಮಾಡಿದ್ದೇ ಆದಲ್ಲಿ ಜೇನು ಸಾಕಾಣಿಕೆಯಲ್ಲಿ ಯಶಸ್ವಿ ಕಾಣಬಹುದು ಎಂದು ಉಷಾ ಹೇಳುತ್ತಾರೆ. ಹೂವಿನ ಅಭಾವ ಆದಾಗ ಆಹಾರದ ಕೊರತೆ ಆಗದಂತೆ ಸಕ್ಕರೆ ಪಾಕ ನೀಡಬೇಕು. ಇತರೆ ಕೀಟಗಳ ದಾಳಿಯಿಂದ ರಕ್ಷಣೆ ಒದಗಿಸಬೇಕು, ಕಾಲಕಾಲಕ್ಕೆ ತಕ್ಕಂತೆ ಪೆಟ್ಟಿಗೆಗಳಿಂದ ನೊಣಗಳನ್ನು ಬೇರ್ಪಡಿಸಬೇಕು ಮತ್ತು ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಜೇನು ನೊಣಗಳನ್ನು ಹಾಗೂ ಪೆಟ್ಟಿಗೆಯನ್ನು ರಕ್ಷಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್ ಮುಚ್ಚುವುದು, ಮಳೆ ಬೀಳದ ಸ್ಥಳದಲ್ಲಿ ಇಡುವ ಇತ್ಯಾದಿ ಕೆಲಸಗಳನ್ನು ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.ಹಾರಂಗಿ ಸಮೀಪದ ತಮ್ಮ ಮನೆಯಲ್ಲಿ ಜೇನು ಕೃಷಿ ಆರಂಭಿಸಿದ ಇವರು ಇಂದು ಗುಂಡ್ಲುಪೇಟೆ, ನೆಲಂಬೂರು, ಕನ್ಯಾಕುಮಾರಿಯಲ್ಲೂ ಜೇನು ಸಾಕಾಣೆ ಆರಂಭಿಸಿದ್ದು, ಹೆಚ್ಚಿನ ಆದಾಯ ಗಳಿಸಲು ಮುಂದಾಗಿದ್ದಾರೆ.ಉತ್ತಮ ಬೇಡಿಕೆ:
ತಾಜಾ (Live honey) ಜೇನು ಬೇಕಿದ್ದಲ್ಲಿ ಅದನ್ನು ಕೂಡ ಇವರು ಗ್ರಾಹಕರ ಮುಂದೆಯೇ ಪೆಟ್ಟಿಗೆಯಿಂದ ತೆಗೆದು ಕೊಡುತ್ತಿರುವುದರಿಂದ ಇವರ ಜೇನಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ.ಆಸಕ್ತಿಯುಳ್ಳವರಿಗೆ ಉಚಿತ ತರಬೇತಿ ನೀಡುವ ಬಯಕೆ ಹೊಂದಿರುವ ಇವರು ಜೇನು ಸಾಕಣಿಗೆ ಅವಶ್ಯಕತೆ ಇರುವ ಪೆಟ್ಟಿಗೆ ಸೇರಿದಂತೆ ಇತರ ಸಲಕರಣೆಗಳನ್ನು ಕೂಡ ಕಡಿಮೆ ದರದಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಕೂರ್ಗ್ ಕ್ವೀನ್ ಹನಿ (coorg queen honey) ಎಂಬ ತಮ್ಮದೇ ಬ್ರ್ಯಾಂಡ್ ಹೆಸರಿನಲ್ಲಿ ಇವರ ಬಳಿ ಸೂರ್ಯಕಾಂತಿ, ಹುರುಳಿ ಕಾಳು, ಹಾಗೂ ಮಲ್ಟಿ ಫ್ಲವರ್ ವೆರೈಟಿಯ ಜೇನು ತುಪ್ಪ ಸಿಗುತ್ತದೆ.ಮೂರು ವರ್ಷಗಳ ಹಿಂದೆ ನಾನು ಅನೇಕ ಅಂಗಡಿ ಮಳಿಗೆಗಳಲ್ಲಿ ಕೆಲಸ ಮಾಡಿದ್ದೇನೆ. ಅದರಿಂದ ದೊರಕುತ್ತಿದ್ದ ಅಲ್ಪ ಸಂಬಳದಿಂದ ನನ್ನ ಕುಟುಂಬ ನಿರ್ವಹಣೆ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಉದ್ಯೋಗ ಮಾಡಲು ಚಿಂತನೆ ಮಾಡುತ್ತಿದ್ದ ಸಂದರ್ಭ ನನಗೆ ಸಂಬಂಧಿಕರೋರ್ವರು ಜೇನು ಕೃಷಿ ಮಾಡಲು ಸಲಹೆ ನೀಡಿದರು. ಬಳಿಕ ನಾನು ಪೊನ್ನಂಪೇಟೆ ಫಾರೆಸ್ಟ್ ಕಾಲೇಜಿನಲ್ಲಿ ತರಬೇತಿ ಪಡೆದುಕೊಂಡು ಜೇನು ಸಾಕಾಣೆ ಆರಂಭಿಸಿದೇ. ಕೆಲವು ದಿನ ಕಷ್ಟವಾಗಿದ್ದರೂ ಇದೀಗ ಉತ್ತಮ ಆದಾಯ ಗಳಿಸುತ್ತಿದ್ದೇನೆ. ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಸಫಲವಾಗಿದ್ದೇನೆ. ಸಣ್ಣದಾಗಿ ಆರಂಭವಾದ ನನ್ನ ಕೃಷಿ ಪಯಣವನ್ನು ವಿವಿಧ ಕಡೆಗೆ ವಿಸ್ತರಿಕೊಂಡಿದ್ದೇನೆ.। ಉಷಾ , ರೈತ ಮಹಿಳೆ ಕುಶಾಲನಗರ