ಸಾರಾಂಶ
ಬೆಂಗಳೂರು : ‘ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಹಾಗೂ ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಈ ನಾಡದ್ರೋಹದ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ತನ್ಮೂಲಕ ಕನ್ನಡ ಹಾಗೂ ಕನ್ನಡಿಗರನ್ನು ಅವಹೇಳನ ಮಾಡುವವರ ವಿರುದ್ಧ ‘ನಾಡ ದ್ರೋಹದ’ ಕ್ರಮ ಆಗಬೇಕು ಎಂದು ಹಕ್ಕೊತ್ತಾಯ ಮಾಡಿದ್ದ ‘ಕನ್ನಡಪ್ರಭ’ ಪತ್ರಿಕೆಯ ಸರಣಿ ವರದಿಗಳಿಗೆ ಫಲಶೃತಿ ದೊರೆತಿದೆ.
ಅ.24 ರಿಂದ ನ.1ರವರೆಗೆ ಸತತ ಎಂಟು ದಿನಗಳಿಂದ ಸರಣಿ ವರದಿ ಪ್ರಕಟಿಸಿದ್ದ ಕನ್ನಡಪ್ರಭ ಪತ್ರಿಕೆಯು, ‘ರಾಜ್ಯದ ನಾಡು, ನುಡಿ ಮೇಲೆ ಆಗುತ್ತಿರುವ ದೌರ್ಜನ್ಯ. ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿನ ನೆಲ-ಜಲಕ್ಕೆ ದ್ರೋಹ ಬಗೆಯುತ್ತಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರನ್ನು ಅವಮಾನಿಸುವವರ ವಿರುದ್ಧ ನಾಡದ್ರೋಹದ ಅಡಿ ಕ್ರಮ ಆಗಬೇಕು’ ಎಂದು ಆಗ್ರಹಿಸಿತ್ತು.
ಇದನ್ನು ಶಿಕ್ಷಾರ್ಹ ಅಪರಾಧವಾಗಿಸಲು ಸಾಹಿತಿ, ಕನ್ನಡ ಹೋರಾಟಗಾರರು ಹಾಗೂ ಕಾನೂನು ತಜ್ಞರು ಶುಕ್ರವಾರ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿ ಮೂಲಕ ಹಕ್ಕೊತ್ತಾಯ ಮಾಡಿದ್ದರು.
ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ -2024 ದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾಡದ್ರೋಹದ ವಿರುದ್ಧ ಕಠಿಣ ಕ್ರಮದ ವಾಗ್ದಾನ ನೀಡಿದ್ದಾರೆ.
ಕನ್ನಡ ಹಾಗೂ ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇದು ನಾಡದ್ರೋಹ. ಅಂತಹವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತದೆ. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಅವರು ಯಾವುದೇ ಜಾತಿ, ಧರ್ಮ, ಭಾಷೆಯವರೇ ಆಗಿದ್ದರೂ ಕನ್ನಡಿಗರೇ. ಕನ್ನಡವನ್ನು ಗೌರವಿಸಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಆಗಿ ನೀಡಿದರು.
ನಾವು ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ಬಲಿ ಕೊಟ್ಟು ಉದಾರಿಗಳಾಗಬಾರದು. ಕನ್ನಡ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಅಗ್ರ ಹಾಗೂ ಸಾರ್ವಭೌಮ ಭಾಷೆ. ನಾವು ಸಹ ಕನ್ನಡಗರಿಗಾಗಿಯೇ ಇರುತ್ತೇವೆ. ಬೇರೆಯವರಿಗೂ ಕನ್ನಡ ಕಲಿಸುತ್ತೇವೆ ಎಂದು ನಾವು ಪ್ರತಿಜ್ಞೆ, ಶಪಥ ಮಾಡೋಣ. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಿ ಎಂದು ರಾಜ್ಯದ ಜನರಿಗೆ ಕರೆ ನೀಡಿದರು.
ಭಾಷೆಯ ಬಗ್ಗೆ ಅಭಿಮಾನಿಗಳಾಗಿ:
ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜತೆಗೆ ಬೇರೆಯವರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಭಾಷೆಗಳಿವೆ. ಯಾವುದೇ ಭಾಷೆ, ಜಾತಿ, ಧರ್ಮ ಆಗಿರಲಿ ಎಲ್ಲರೂ ಕನ್ನಡಿಗರು. ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಹೀಗಾಗಿ ನಾವು ಕನ್ನಡದ ಅಭಿಮಾನಿಗಳಾಗಬೇಕು. ಕನಿಷ್ಠ ಅಭಿಮಾನ ಇಲ್ಲದಿದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ಕಿವಿ ಮಾತು ಹೇಳಿದರು.