ಹರಿಪ್ರಸಾದ ಬಂಧಿಸಿ ತನಿಖೆ ನಡೆಸಿ: ಸುನೀಲ ಹೆಗಡೆ

| Published : Jan 05 2024, 01:45 AM IST

ಸಾರಾಂಶ

ಹಿಂದೂ ಕಾರ್ಯಕರ್ತರು, ರಾಮನ ಭಕ್ತರು, ಕರಸೇವಕರು ಕಾಂಗ್ರೆಸ್ ಕಾರ್ಯಕರ್ತರ ಹಾಗೇ ಯಾರದೋ ಮುಲಾಜಿಗಾಗಿ ಕೆಲಸ ಮಾಡುವವರಲ್ಲ. ಸನಾತನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಮಾಡುವಂತಹವರು.

ಹಳಿಯಾಳ:ರಾಜ್ಯದಲ್ಲಿಯೂ ಗುಜರಾತ ಗೋಧ್ರಾದಂತಹ ದುರ್ಘಟನೆ ಮರುಕಳಿಸಬಹುದು ಎಂದು ಆಘಾತಕಾರಿ ಹೇಳಿಕೆ ನೀಡಿರುವ ವಿಪ ಸದಸ್ಯ ಬಿ.ಕೆ. ಹರಿಪ್ರಸಾದ ಅವರನ್ನು ಸರ್ಕಾರ ತಕ್ಷಣ ಬಂಧಿಸಿ ಅವರ ಹೇಳಿಕೆಯ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಸುನೀಲ ಹೆಗಡೆ ಆಗ್ರಹಿಸಿದ್ದಾರೆ.ಗುರುವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಮೂರ್ತಿ ಪ್ರತಿಷ್ಠಾಪನೆಗೆ ತೆರಳುವ ಯಾತ್ರಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು, ಗೋಧ್ರಾ ಮಾದರಿಯಲ್ಲಿಯೇ ದುರಂತ ಸಂಭವಿಸಬಹುದೆಂದು ಎಂಬ ಹರಿಪ್ರಸಾದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಏನಾದರೂ ದುರಂತ ಸಂಭವಿಸಿದರೇ ಅದಕ್ಕೆ ಹರಿಪ್ರಸಾದರೇ ಕಾರಣ ಎಂದ ಅವರು, ಇಂತಹ ಹೇಳಿಕೆ ನೀಡಿ ರಾಮ ಭಕ್ತರು, ಹಿಂದೂ ಧರ್ಮಿಯರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿ, ರಾಮಮಂದಿರ ಉದ್ಘಾಟನೆಗೆ ತೆರಳದಂತೆ ನೋಡಿಕೊಳ್ಳುವ ಹುನ್ನಾರ ಅಡಗಿದೆ ಎಂದರು.ಪಿತೂರಿಯಲ್ಲಿ ಶಾಮೀಲು:ಹರಿಪ್ರಸಾದ ಹೇಳಿಕೆ ಗಮನಿಸಿದರೇ ಇವರು ಒಂದು ರೀತಿಯಲ್ಲಿ ಈ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಹರಿಪ್ರಸಾದ ಹಿಂದೂ ವಿರೋಧಿಯಾಗಿ ಹಿಂದೂ-ರಾಮ ಭಕ್ತರಿಗೆ ತೊಂದರೆ ಕೊಡುವ ಯೋಜನೆ ಹಾಕಿದ್ದಾರೆಂಬುವುದು ತಿಳಿದು ಬಂದಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯಲ್ಲಿ ರಾಮಭಕ್ತ ಶ್ರೀಕಾಂತ ಪೂಜಾರಿ ಬಂಧಿಸಿ ಹೆಮ್ಮೆ ಪಡುತ್ತಿದೆ. ಆದರೆ, ಬಂಧಿಸಿ ತನಿಖೆ ನಡೆಸಬೇಕಾಗಿರುವುದು ಹರಿಪ್ರಸಾದ ಅವರನ್ನು. ಮುಂದಿನ ದಿನಗಳಲ್ಲಿ ಏನಾದರೂ ಅಹಿತಕರ ಘಟನೆಯಾದರೇ ಹರಿಪ್ರಸಾದ ಹೊಣೆ ಎಂದು ಸುನೀಲ ಹೆಗಡೆ ಎಚ್ಚರಿಸಿದರು.ಹಿಂದೂ ಪೀಡಕರಿಗೆ ತಕ್ಕ ಪಾಠ:ಹಿಂದೂ ಕಾರ್ಯಕರ್ತರು, ರಾಮನ ಭಕ್ತರು, ಕರಸೇವಕರು ಕಾಂಗ್ರೆಸ್‌ ಕಾರ್ಯಕರ್ತರ ಹಾಗೇ ಯಾರದೋ ಮುಲಾಜಿಗಾಗಿ ಕೆಲಸ ಮಾಡುವವರಲ್ಲ. ಸನಾತನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಮಾಡುವಂತಹವರು. ಹಿಂದೂ ಜನ ಯಾವುದಕ್ಕೂ ಹೆದರುವವರಲ್ಲ. ಯಾರು ಹಿಂದೂಗಳ ಮೇಲೆ ದಾಳಿ, ತೊಂದರೆ ಕೊಟ್ಟರೆ ಭಾರತದಲ್ಲಿ ಇರುವುದೇ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.ಸೂಕ್ತ ರಕ್ಷಣೆ ನೀಡಿ:ಸರ್ಕಾರ ಹರಿಪ್ರಸಾದ ಅವರ ಮೇಲೆ ಕೊಲ ಯತ್ನ ಪ್ರಕರಣ ದಾಖಲಿಸಿ ಬಂಧಿಸಿ ಅವರ ಹೇಳಿಕೆಯ ಕುರಿತು ತನಿಖೆ ನಡೆಸಬೇಕು. ಜತೆಗೆ ಅಯೋಧ್ಯಾಗೆ ತೆರಳುವ ರಾಜ್ಯದ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಭಾರತ ರಾಮನದ್ದಾಗಿದ್ದರಿಂದ ಯಾರೂ ಹೆದರುವ ಅವಶ್ಯಕತೆಯಿಲ್ಲ, ಎಲ್ಲರೂ ಸೇರಿ ಜ. 22ರಂದು ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಸಂಭ್ರಮವನ್ನು ಮನೆ, ಊರಿನಲ್ಲಿ ಸಂಭ್ರಮದಿಂದ ಆಚರಿಸೋಣ ಎಂದು ಜನರಿಗೆ ಕರೆ ನೀಡಿದರು.