ಸಾರಾಂಶ
ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೆರೆ ಕಟ್ಟಿ, ಬಳಿಕ ಬೆಳೆಯಿಂದ ತುಂಬಿದ್ದ ಹೊಲಗದ್ದೆಗಳಿಗೆ ಮಂಗಳವಾದ್ಯಗಳಾದ ದುಡಿಕೊಟ್ಟುಪಾಟ್‌ಗಳೊಂದಿಗೆ ತೆರಳಿ ಧಾನ್ಯಲಕ್ಷ್ಮೀಗೆ ಪೂಜೆ ಸಲ್ಲಿಸಲಾಯಿತು. ವೀರತ್ವದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಧಾನ್ಯಲಕ್ಷ್ಮೀಗೆ ಗೌರವ ಸಲ್ಲಿಸಲಾಯಿತು. ಬಳಿಕ ಕದಿರು ಕೊಯ್ದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಒಕ್ಕಣೆ ಕಣಕ್ಕೆ ಕದಿರು ತರಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನ ಜನಪ್ರಿಯ ಉತ್ಸವ ಹುತ್ತರಿ ಹಬ್ಬವನ್ನು ಸೋಮವಾರ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹುತ್ತರಿಯಂದು ಧಾನ್ಯ ದೇವತೆಯನ್ನು ಮನೆ ತುಂಬಿಸಿಕೊಳ್ಳಲಾಗುತ್ತದೆ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಿ ಮನೆಗೆ ತರುವುದಕ್ಕೂ ಮುನ್ನ ಸಂಪ್ರದಾಯಬದ್ಧವಾಗಿ ಧಾನ್ಯ ಲಕ್ಷ್ಮೀಗೆ ಪೂಜೆ ಸಲ್ಲಿಸಿದರು. ಈ ಮೂಲಕ ಧಾನ್ಯ ಲಕ್ಷ್ಮೀಯನ್ನು ಮನೆ ತುಂಬಿಸಿಕೊಂಡು ಹುತ್ತರಿ ಆಚರಿಸಲಾಯಿತು.ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೆರೆ ಕಟ್ಟಿ, ಬಳಿಕ ಬೆಳೆಯಿಂದ ತುಂಬಿದ್ದ ಹೊಲಗದ್ದೆಗಳಿಗೆ ಮಂಗಳವಾದ್ಯಗಳಾದ ದುಡಿಕೊಟ್ಟುಪಾಟ್‌ಗಳೊಂದಿಗೆ ತೆರಳಿ ಧಾನ್ಯಲಕ್ಷ್ಮೀಗೆ ಪೂಜೆ ಸಲ್ಲಿಸಲಾಯಿತು. ವೀರತ್ವದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಧಾನ್ಯಲಕ್ಷ್ಮೀಗೆ ಗೌರವ ಸಲ್ಲಿಸಲಾಯಿತು. ಬಳಿಕ ಕದಿರು ಕೊಯ್ದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಒಕ್ಕಣೆ ಕಣಕ್ಕೆ ಕದಿರು ತರಲಾಯಿತು.
ಮೆರವಣಿಗೆಯುದ್ಧಕ್ಕೂ ‘ಪೊಲಿ ಪೊಲಿಯೇ ಪೊಲಿ ದೇವಾ’ ಎಂಬ ಘೋಷಗಳು ಮೆರವಣಿಗೆಗೆ ಮತ್ತಷ್ಟು ಕಳೆತಂದಿತು. ಹೀಗೆ ತಂದ ಕದಿರನ್ನು ಕಣದಲ್ಲಿಟ್ಟು ಪೂಜೆ ಸಲ್ಲಿಸಿ ಕೊಡವರ ಸಾಂಪ್ರದಾಯಿಕ ನೃತ್ಯಗಳಾದ ದುಡಿಕೊಟ್ಟು ಪಾಟ್, ಕೋಲಾಟ್ ಮತ್ತು ಪರಿಯಕಳಿ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ನಂತರ ಕದಿರನ್ನು ಮನೆಗೆ ಕೊಂಡೊಯ್ದು ಸ್ವಾಮಿ ಇಗ್ಗುತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಧಾನ್ಯಲಕ್ಷ್ಮೀಯನ್ನು ಮನೆಗೆ ತುಂಬಿಕೊಂಡರು.ಕೊಡಗಿನ ಐತಿಹಾಸಿಕ ದೇಗುಲಗಳಲ್ಲೊಂದಾದ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಜ್ಯೋತಿಷಿಗಳು ನಿರ್ಧರಿಸಿದ ಮುಹೂರ್ತಕ್ಕೆ ಅನುಗುಣವಾಗಿ ಹಬ್ಬ ಆಚರಿಸಲಾಯಿತು. ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಹಬ್ಬ ನಡೆಯಿತು. ನಿಗದಿಯಂತೆ ರಾತ್ರಿ 7.20ಕ್ಕೆ ನೆರೆ ಕಟ್ಟಿ, 8.20ಕ್ಕೆ ಕದಿರು ತೆಗೆಯಲಾಯಿತು. ಬಳಿಕ 9.20ಕ್ಕೆ ಪ್ರಸಾದ ವಿತರಣೆ ನಡೆಯಿತು. ಇದರೊಂದಿಗೆ ನಾಡಿನಾದ್ಯಂತ 7.45ಕ್ಕೆ ನೆರೆ ಕಟ್ಟಿ, 8.45ಕ್ಕೆ ಕದಿರು ತೆಗೆದು, 9.45ಕ್ಕೆ ಭೋಜನ ಸ್ವೀಕರಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.ಮಡಿಕೇರಿ ನಗರದ ಓಂಕಾರೇಶ್ವರ ದೇಗುಲದಲ್ಲಿ, ಗೌಡ ಸಮಾಜ, ಕೊಡವ ಸಮಾಜಗಳ ನೇತೃತ್ವದಲ್ಲಿಯೂ ಹಬ್ಬ ಆಚರಣೆ ಸಂಪ್ರದಾಯಬದ್ಧವಾಗಿ ಜರುಗಿತು.ಹುತ್ತರಿ ಹಬ್ಬದ ವಿಶೇಷ ಖಾದ್ಯಗಳಾದ ಬೇಯಿಸಿದ ಹುತ್ತರಿ ಗೆಣಸು, ಹುರಿದ ಕುಸುಬಲಕ್ಕಿಯ ಪುಡಿಯಿಂದ ಮಾಡುವ ತಂಬಿಟ್ಟು, ಗದ್ದೆಯಿಂದ ಕೊಯ್ಲುಮಾಡಿ ತಂದ ಭತ್ತದಿಂದ ಮಾಡಿದ ಹೊಸ ಅಕ್ಕಿ ಒಳಗೊಂಡ ಪಾಯಸವನ್ನು ಕುಟುಂಬಸ್ಥರೆಲ್ಲಾ ಒಟ್ಟಿಗೆ ಸೇರಿ ಸವಿದು ಸಂಭ್ರಮಿಸಿದರು.* ಅರ್ಥಪೂರ್ಣವಾಗಿ ಹುತ್ತರಿ ಆಚರಿಸಿದ ಸಿಎನ್‌ಸಿ:ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ದಕ್ಷಿಣ ಕೊಡಗಿನ ಬಾಳೆಲೆ ಬಳಿಯ ಆರ್ಕೇರಿನಾಡಿನ ಬಿಳೂರು ಗ್ರಾಮದಲ್ಲಿ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು.ಹುಣ್ಣಿಮೆಯ ದಿನವಾದ ಸೋಮವಾರ ಬೆಳಗ್ಗೆ ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸಾಂಪ್ರದಾಯಿಕವಾಗಿ ನವ ಧಾನ್ಯ ಭತ್ತದ ಕದಿರು ಕೊಯ್ಯುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.ಸಿಎನ್‌ಸಿ ಸಂಘಟನೆ ಆಚರಿಸಿದ 30ನೇ ವರ್ಷದ ಸಾರ್ವತ್ರಿಕ ಪುತ್ತರಿ ಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಟ್ ಹಿಂದೂಸ್ಥಾನ್ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಕೊಡವ ಜನಾಂಗದ ವಿಶಿಷ್ಟವಾದ ಸಂಸ್ಕೃತಿಯಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಸಿಎನ್ ಸಿ ಅಧ್ಯಕ್ಷ ನಾಚಪ್ಪ ಮಾತನಾಡಿ, ನವಧಾನ್ಯವನ್ನು ಶ್ರದ್ಧಾಭಕ್ತಿಯಿಂದ ಗದ್ದೆಯಿಂದ ತಂದು ಮನೆ ತುಂಬಿಸಿಕೊಳ್ಳುವ ಕೊಡವರ ಸಂಪ್ರದಾಯವೇ ಪುತ್ತರಿಯಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿದೆ. ನಮ್ಮ ವಿಶಿಷ್ಟ ಹಬ್ಬಗಳನ್ನು ಇಡೀ ವಿಶ್ವಕ್ಕೆ ತಿಳಿಸುವುದು ಮತ್ತು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಳೆದ 3 ದಶಕಗಳಿಂದ ಸಿಎನ್‌ಸಿ ಸಂಘಟನೆ ಸಾರ್ವತ್ರಿಕವಾಗಿ ಪುತ್ತರಿಯನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.ಕೊಡವ ಬುಡಕಟ್ಟು ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಕೊಡವರಿಗೆ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತತ್ತೆಯ ಹಕ್ಕನ್ನು ನೀಡಲೇಬೇಕಾದ ಅನಿವಾರ್ಯತೆ ಇದೆ ಎಂದರು.ಈ ಸಂದರ್ಭ ಕಾಂಡೇರ ಸುರೇಶ್, ಕಾಂಡೇರ ಲೇಖ ಸುರೇಶ್, ಕಾಂಡೇರ ಲವಿನ್ ಪೂಣಚ್ಚ, ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅಲ್ಕಂಡ ನೆಹರು, ಅರೆಯಡ ಗಿರೀಶ್, ಚಂಬಂಡ ಜನತ್, ಅಪ್ಪೆಂಗಡ ಮಲೆ ಸೇರಿದಂತೆ ಕೌನ್ಸಿಲ್ ಪ್ರಮುಖರು ಪಾಲ್ಗೊಂಡು ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.