ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಕೊಪ್ಪಳ ಜಿಲ್ಲೆಯಲ್ಲಿರುವ ಕಾರ್ಖಾನೆ ತ್ಯಾಜ್ಯದಿಂದ ಅನೇಕ ಮಕ್ಕಳು ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪರಿಶೀಲನೆಗೆ ಮುಂದಾಗಿದೆ. ಕಾರ್ಖಾನೆ ತ್ಯಾಜ್ಯದಿಂದ ನಮಗೆ ಆರೋಗ್ಯ ಸಮಸ್ಯೆಯಾಗಿದೆ. ಕಣ್ಣು ಮಂಜಾಗಿವೆ ಎಂದು ಅನೇಕ ಮಕ್ಕಳು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಕಲ್ಯಾಣ ಸಮಿತಿ ತಪಾಸಣೆಗೆ ಮುಂದಾಗಿದೆ.
ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ನಡೆಸಿದ ಹೋರಾಟದ ವೇಳೆಯಲ್ಲಿ ಪ್ರದರ್ಶನ ಮಾಡಿದ ಕಾರ್ಖಾನೆಗಳಿಂದಾದ ಗೋಳು ಎನ್ನುವ ವೀಡಿಯೋದಲ್ಲಿ ಅನೇಕ ಮಕ್ಕಳು ಮಾತನಾಡಿ, ಸಮಸ್ಯೆಯನ್ನು ತೋಡಿಕೊಂಡಿರುವುದನ್ನು ಹಾಗೂ ಮಾಧ್ಯಮದಲ್ಲಿ ಬಿತ್ತರವಾಗಿರುವ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿ ಗಂಭೀರವಾಗಿ ಪರಿಗಣಿಸಿದೆ.ಕಾರ್ಖಾನೆ ತ್ಯಾಜ್ಯದಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ಆಸ್ಪತ್ರೆಯಲ್ಲಿ ಈ ವರೆಗೂ ಚಿಕಿತ್ಸೆಗಾಗಿ ದಾಖಲಾದ ಮಕ್ಕಳು ಮತ್ತು ಎದುರಿಸುತ್ತಿರುವ ನಾನಾ ರೋಗಗಳ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಿದೆ. ಅಷ್ಟೇ ಅಲ್ಲ, ಕಳೆದ ಹತ್ತು ವರ್ಷಗಳಲ್ಲಿ ಯಾವ ಯಾವ ಮಕ್ಕಳು ಏನೇನು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಆಗಿರುವ ಪರಿಣಾಮದ ಕುರಿತು ಆಸ್ಪತ್ರೆಯಲ್ಲಿ ಇರುವ ಮಾಹಿತಿಯನ್ನು ಸಂಗ್ರಹಿಸುವುದು ಪ್ರಮುಖವಾಗಿದೆ. ಇದಕ್ಕಿಂತ ಮಿಗಿಲಾಗಿ ಶಾಲೆಯಲ್ಲಿ ಮಕ್ಕಳ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳ ಸ್ಥಿತಿಗತಿ ಸೇರಿದಂತೆ ಮಕ್ಕಳ ಮೇಲಾಗಿರುವ ಪರಿಣಾಮಗಳನ್ನು ಅರಿಯಲು ಮುಂದಾಗಿದೆ.
ವೀಡಿಯೋದಲ್ಲೇನಿದೆ:ಹೋರಾಟದ ವೇಳೆಯಲ್ಲಿ ಪ್ರದರ್ಶನ ಮಾಡಿದ ವೀಡಿಯೋದಲ್ಲಿ ಕೊಪ್ಪಳ ತಾಲೂಕಿನ ಕುಣಿಕೇರಿ, ಹಿರೇಬಗನಾಳ, ಕರ್ಕಿಹಳ್ಳಿ ಹಾಗೂ ಗಿಣಿಗೇರಿ ಸೇರಿದಂತೆ ಹತ್ತಾರ ಗ್ರಾಮಗಳಲ್ಲಿ ಈಗಾಗಲೇ ಇರುವ ಕಾರ್ಖಾನೆಗಳಿಂದಾಗಿರುವ ದುಷ್ಪರಿಣಾಮಗಳನ್ನು ಎಳೆ-ಎಳೆಯಾಗಿ ಪ್ರದರ್ಶನ ಮಾಡಲಾಗಿದೆ. ಅಷ್ಟೇ ಅಲ್ಲ, ಅಲ್ಲಿಯ ಮಕ್ಕಳನ್ನು ಸಹ ಮಾತನಾಡಿಸಿ, ಅವರು ಅನುಭವಿಸುತ್ತಿರುವ ತೊಂದರೆ ಸಹ ಬಿಂಬಿಸಲಾಗಿದೆ. ಈ ವೀಡಿಯೋ ನೋಡಿದ ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಅಲ್ಲಿ ನೆರೆದಿದ್ದವರು ಕಣ್ಣೀರು ಹಾಕಿದ್ದರು. ವೀಡಿಯೋದಲ್ಲಿ ನರಕ ಜೀವನ ತೋರಿಸುತ್ತಿದ್ದಂತೆ ಅನೇಕರ ಕಣ್ಣಾಲೆಗಳಲ್ಲಿ ನೀರಾಡಿದ್ದವು.
ಇದನ್ನು ಮಕ್ಕಳ ಕಲ್ಯಾಣ ಸಮಿತಿ ಗಂಭೀರವಾಗಿ ಪರಿಗಣಿಸಿ, ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಮುಂದಾಗಿದೆ. ಕಾರ್ಖಾನೆಗಳ ತ್ಯಾಜ್ಯದಿಂದ ಮಕ್ಕಳ ಬದುಕಿಗೆ ಬಿದ್ದಿರುವ ಬರೆ ಮತ್ತು ಪೆಟ್ಟುಗಳನ್ನು ಪಟ್ಟಿ ಮಾಡಿ, ಸರ್ಕಾರಕ್ಕೂ ವರದಿ ಮಾಡಲು ಮುಂದಾಗಿದೆ.ಕ್ರಮ ವಹಿಸದ ಜಿಲ್ಲಾಡಳಿತಈ ಹಿಂದೆಯೂ ಈ ಕುರಿತು ಅಧ್ಯಯನ ಮಾಡಲಾಗಿದೆ. ಜಿಲ್ಲಾಡಳಿತವೇ ಆರೋಗ್ಯ ಇಲಾಖೆಯ ಸಹಯೋಗದಲ್ಲಿಯೂ ಅಧ್ಯಯನ ಮಾಡಿದೆ. ಆದರೆ, ವರದಿಯಲ್ಲಿ ಅಘಾತಕಾರಿ ಅಂಶಗಳು ಪತ್ತೆಯಾಗಿದ್ದರೂ ಸಹ ಅವುಗಳ ಮೇಲೆ ಕ್ರಮ ವಹಿಸುವ ಪ್ರಯತ್ನ ಆಗಿಯೇ ಇಲ್ಲ. ದೂರುಗಳನ್ನು ಸ್ವೀಕರಿಸುವ ಜಿಲ್ಲಾಡಳಿತ, ಅವುಗಳ ಮೇಲೆ ಕ್ರಮ ವಹಿಸುವ ದಿಸೆಯಲ್ಲಿ ಈ ವರೆಗೂ ಮುಂದಾಗಿಲ್ಲ.ಕಾರ್ಖಾನೆ ತ್ಯಾಜ್ಯದಿಂದ ಅನೇಕ ಮಕ್ಕಳ ಮೇಲೆ ಆರೋಗ್ಯ ಸಮಸ್ಯೆಯಾಗಿರುವ ಮಾಹಿತಿ ಆಧರಿಸಿ, ಆ ಭಾಗದಲ್ಲಿ ಅಧ್ಯಯನ ಮಾಡಲಾಗುವುದು. ಆ ವ್ಯಾಪ್ತಿಯ ಆಸ್ಪತ್ರೆ ಮತ್ತು ಶಾಲೆಯಲ್ಲಿರುವ ಮಕ್ಕಳಿಂದ ಮಾಹಿತಿ ಪಡೆದು, ಪರಿಶೀಲಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ಆರ್. ಹೇಳಿದರು.