ಸಾರಾಂಶ
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಮಂಗಳವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿಯಿಡೀ ಸುರಿಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಮಂಗಳವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿಯಿಡೀ ಸುರಿಯಿತು. ಬುಧವಾರ ಬೆಳಗ್ಗೆ ಮೋಡ ಮುಸುಕಿದ ವಾತಾವಣ ಇತ್ತು. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿಯವರೆಗೂ ಆಗಾಗ ಜೋರು ಹಾಗೂ ಜಿಟಿ ಜಿಟಿ ಸುರಿಯತ್ತಲಿತ್ತು. ಮಳೆಯಿಂದಾಗಿ ಬೀದಿ ಬದಿಯ ವ್ಯಾಪಾರಸ್ಥರು ತೀವ್ರ ತೊಂದರೆ ಎದುರಿಸಬೇಕಾಯಿತು. ಶಾಲೆ-ಕಾಲೇಜು ಬಿಡುವಿನ ವೇಳೆ ಮಳೆ ಸುರಿದಿದ್ದರಿಂದ ವಿದ್ಯಾರ್ಥಿಗಳು, ಮಾರುಕಟ್ಟೆಗೆ ಬಂದಿದ್ದ ಸಾರ್ವಜನಿಕರು ಮಳೆಯಿಂದ ತೀವ್ರ ಪರದಾಡುವಂತಾಯಿತು.ನಗರದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಆವರಣದಲ್ಲಿ ಬೃಹತ್ ಗಾತ್ರ ಮರವೊಂದು ಬಿದ್ದು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಶೆಡ್‌ನಲ್ಲಿ ಎರಡು ವಾಹನ ನಿಲ್ಲಿಸಲಾಗಿತ್ತು. ಅವುಗಳ ಮೇಲೆ ಮರ ಬಿದ್ದಿದ್ದರಿಂದ ವಾಹನಗಳು ಜಖಂಗೊಂಡಿವೆ. ಮಳೆಯಿಂದ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು.
ಒಂದು ವಾರದಿಂದ ಬಿಡುವು ನೀಡಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದವು, ಅತಿವೃಷ್ಟಿ ಮಳೆಯಿಂದ ನೀರು ಹಿಡಿದಿದ್ದ ಗದ್ದೆಗಳನ್ನು ಹದಗೊಳಿಸುವ ಚಟುವಟಿಕೆ ತೀವ್ರಗೊಂಡಿದ್ದವು. ಈಗ ಮತ್ತೆ ಮಳೆ ಸುರಿಯಲಾರಂಭಿಸಿದ್ದರಿಂದ ಮುಂಗಾರು ಬಿತ್ತನೆಗೆ ಸಂಕಷ್ಟ ಎದುರಾಗಿದೆ. ಕೆಲವು ಕಡೆಗೆ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಸೊಯಾಬೀನ್ ಒಕ್ಕಲು ನಡೆದಿದ್ದು, ಏಕಾಏಕಿ ಮಳೆಯಿಂದ ರೈತರು ಪರದಾಡುವಂತಾಯಿತು.