ಸಾರಾಂಶ
ಜಿಲ್ಲೆಯಲ್ಲಿ 2022ರಲ್ಲಿ ಒಟ್ಟು 780 ರಸ್ತೆ ಅಪಘಾತಗಳನ್ನು ಸಂಭವಿಸಿವೆ. ಅದರಲ್ಲಿ 300 ಅಪಘಾತಗಳು ದ್ವಿಚಕ್ರ ವಾಹನಗಳಿಂದ ನಡೆದಿವೆ. 2023ರಲ್ಲಿ ಒಟ್ಟು 410 ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರು ಘಟನೆಗಳು ವರದಿಯಾಗಿವೆ
ಕನ್ನಡಪ್ರಭ ವಾರ್ತೆ ಗೋಕಾಕ
ಕೇವಲ ಹತ್ತು, ಇಪ್ಪತ್ತು ಸಾವಿರ ಮೌಲ್ಯದ ಮೊಬೈಲಗಳಿಗೆ ಕವರ್ ಹಾಕಿ ರಕ್ಷಿಸುವ ನಾವು ಬೆಲೆ ಕಟ್ಟಲಾಗದ ನಮ್ಮ ತಲೆಗೆ ಕಡ್ಡಾಯವಾಗಿ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯ ಜೀವ ರಕ್ಷಿಸಿಕೊಳ್ಳೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳ್ಳೇದ ಹೇಳಿದರು.ಗುರುವಾರ ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಗೋಕಾಕ ಉಪ ವಿಭಾಗದ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಂಡ ವ್ಯಸನ ಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ಧ ಹಾಗೂ ಹೆಲ್ಮೆಟ್ ಜಾಗೃತ ಜಾಥಾಗೆ ಚಾಲನೆ ನೀಡಿ ಮಾತಾಡಿದ ಅವರು,ಜಿಲ್ಲೆಯಲ್ಲಿ 2022ರಲ್ಲಿ ಒಟ್ಟು 780 ರಸ್ತೆ ಅಪಘಾತಗಳನ್ನು ಸಂಭವಿಸಿವೆ. ಅದರಲ್ಲಿ 300 ಅಪಘಾತಗಳು ದ್ವಿಚಕ್ರ ವಾಹನಗಳಿಂದ ನಡೆದಿವೆ. 2023ರಲ್ಲಿ ಒಟ್ಟು 410 ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರು ಘಟನೆಗಳು ವರದಿಯಾಗಿವೆ ಎಂದರು.
ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದರು ಸಹ ವಾಹನ ಸವಾರರು ಜಾಗೃತಗೊಂಡಿಲ್ಲ. ವಾಹನ ಸವಾರರಿಗೆ ದಂಡ ಹಾಕಿ ಅವರನ್ನು ಹೆದರಿಸಬೇಕು ಎಂಬ ಉದ್ದೇಶ ಪೊಲೀಸರು ಮತ್ತು ಇಲಾಖೆಯ ಹೊಂದಿಲ್ಲ. ಬದಲಾಗಿ ಸಾರ್ವಜನಿಕ ಜಾಗೃತಿ ಮೂಡಿಸಿ ಅವರ ಜೀವ ಉಳಿಸುವ ಉದ್ದೇಶ ನಮ್ಮದಾಗಿದೆ ಎಂದರು.ಎಸ್‌ಪಿ ಭೀಮಾಶಂಕರ ಗುಳ್ಳೇದ ಅವರು ಸ್ವತಃ ಹೆಲ್ಮೆಟ್ ಧರಿಸಿ ದ್ವಿಚಕ್ರ ಚಾಲಾಯಿಸಿ ಜಾಗೃತಿ ಮೂಡಿಸಿದರು. ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಜಾಥಾ ಬಸವೇಶ್ವರ ವೃತ್ತ, ಆನಂದ ಟಾಕೀಸ ರೋಡ, ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮಾಧವಾನಂದ ಪ್ರಭುಜಿ ವೃತ್ತದ ಮೂಲಕ ಸಾಗಿ ಜೆಎಸ್‌ಎಸ್ ಕಾಲೇಜು ಆವಣರದಲ್ಲಿ ಮುಕ್ತಾಯಗೊಳಿಸಲಾಯಿತು.
ಈ ವೇಳೆ ಡಿವೈಎಸ್‌ಪಿ ಡಿ.ಎಚ್ ಮುಲ್ಲಾ, ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐ ಕೆ.ವಾಲಿಕಾರ, ಕಿರಣ ಮೋಹಿತೆ, ಯಮನಪ್ಪ ಮಾಂಗ, ಗುಡಾಜ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಅಶೋಕ ಪಾಟೀಲ, ಪರಿಸರ ಅಭಿಯಂತರ ಎಂ.ಎಚ್.ಗಜಾಕೋಶ, ನ್ಯಾಯವಾದಿಗಳ ಸಂಘದ ಅಧ್ಯಕ್ಷ6 ಬಸವರಾಜ ತೋಟಗಿ, ಮುಖಂಡ ಜಾವೇದ ಗೋಕಾಕ, ಭೀಮಶಿ ಭರಮನ್ನವರ , ಕೆಎಲ್‌ಇ, ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.