ಮಾರಕ ರೋಗಗಳಿಂದ ರಕ್ಷಿಸಲು ಲಸಿಕೆ ಮೊರೆ ಹೋಗುವುದು ಅಗತ್ಯ

| Published : Jan 05 2024, 01:45 AM IST

ಸಾರಾಂಶ

ಜೀವಕ್ಕೆ ಕಂಟಕವಾಗಿರುವ ಮಾರಕ ರೋಗಳಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ತಪ್ಪದೇ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು..

ಚಿತ್ರದುರ್ಗ: ಜೀವಕ್ಕೆ ಕಂಟಕವಾಗಿರುವ ಮಾರಕ ರೋಗಳಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ತಪ್ಪದೇ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿಯ ಅಂಗನವಾಡಿ-ಎ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೈನಂದಿನ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಿ 12 ಮಾರಕ ರೋಗಗಳಿಂದ ರಕ್ಷಣೆ ನೀಡಬೇಕು. ಲಸಿಕೆಗಳು ಎದೆಹಾಲಿನಷ್ಟೇ ಮಹತ್ವವುಳ್ಳದ್ದಾಗಿದೆ. ಬಿಟ್ಟು ಹೋಗಿರುವ ಲಸಿಕಾ ದಿನಚರಿಯನ್ನು ಸರಿಪಡಿಸಿಕೊಳ್ಳಬೇಕು. ಅಂತರದ ಹೆರಿಗೆ, ಕುಟುಂಬ ಯೋಜನೆ ಅನುಸರಿಸಿಕೊಳ್ಳುವುದು ಉತ್ತಮ. ಅದೇ ರೀತಿ ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಮಹತ್ವವಾಗಿರುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಆಹಾರಗಳು, ಪೋಷಕಾಂಶಗಳು ಮತ್ತು ಅವುಗಳನ್ನು ಒಳಗೊಂಡಿರುವ ಇತರೆ ಪದಾರ್ಥಗಳ ವಿಜ್ಞಾನವೇ ಪೌಷ್ಟಿಕಾಂಶ. 5 ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಸಾಧಾರಣ ಅಪೌಷ್ಟಿಕತೆ, ತೀವ್ರ ಅಪೌಷ್ಟಿಕತೆ, ಕುಂಟಿತ ಬೆಳವಣಿಗೆ ಮಾಪನ ಹೇಗೆ ಮಾಡಬೇಕು, ಸಮುದಾಯದಲ್ಲಿ ಅಪೌಷ್ಟಿಕ ಮಕ್ಕಳ ಪತ್ತೆ ಹಚ್ಚುವಿಕೆ, ಅಪೌಷ್ಟಿಕ ಮಕ್ಕಳ ಪಟ್ಟಿ ಮಾಡಿ ಚೈನ್ ವಿಧಾನದಲ್ಲಿ ಆಹಾರ ಅನುಕ್ರಮಗಳನ್ನ ಹೇಗೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ವಾರಕ್ಕೆ ಎರಡು ಬಾರಿ ಬುಧವಾರ ಮತ್ತು ಶನಿವಾರದಂದು ಕಬ್ಬಿಣಾಂಶದ ಔಷಧಿ ನೀಡಿ ರಕ್ತಹೀನತೆಯಿಂದ ಕಾಪಾಡಿ ಎಂದು ಮನವಿ ಮಾಡಿದರು. ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಲಸಿಕಾ ವೇಳಾಪಟ್ಟಿ ಹಾಗೂ ತಾಯಿ ಕಾರ್ಡ್ ಮಹತ್ವದ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಲಸಿಕಾ ಅಧಿವೇಶನಕ್ಕೆ ಆಗಮಿಸಿದ ತಾಯಿ ಮಕ್ಕಳಿಗೆ ಕಬ್ಬಿಣಾಂಶದ ಔಷಧಿ ವಿತರಿಸಲಾಯಿತು.ಆರೋಗ್ಯ ಸುರಕ್ಷತಾ ಅಧಿಕಾರಿ ಶಿಲ್ಪ ಮಕ್ಕಳಿಗೆ ವಿವಿಧ ಲಸಿಕೆಗಳನ್ನು ನೀಡಿದರು. ಲಸಿಕಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಶಿವಮಾಲಾ, ಅಂಗನವಾಡಿ ಕಾರ್ಯಕರ್ತೆ ಬಾನು ಉಪಸ್ಥಿತರಿದ್ದರು.