ಇಲ್ಲಿ ಜಾತಿಗಿಂತ ವ್ಯಕ್ತಿ, ಪಕ್ಷವೇ ಮುಖ್ಯ

| Published : Mar 24 2024, 01:31 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕ್ಷೇತ್ರದಲ್ಲಿ ಕಡಿಮೆ ಮತಗಳನ್ನು ಹೊಂದಿದ ಸಮುದಾಯದ ಅಭ್ಯರ್ಥಿಗಳೇ ಹೆಚ್ಚಿನ ಬಾರಿ ಆಯ್ಕೆಯಾಗಿರುವುದು ಹಿಂದಿನ ಚುನಾವಣೆಗಳ ಫಲಿತಾಂಶ ಸಾಕ್ಷಿಯಾಗಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಚುನಾವಣೆ ಎಂದರೆ ಆಯಾ ಸಮುದಾಯದ ಜನಸಂಖ್ಯೆ ಆದರಿಸಿಯೇ ಲೆಕ್ಕಾಚಾರ ಇರುತ್ತದೆ. ಆದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿಗಿಂತ ವ್ಯಕ್ತಿಯೇ ಮುಖ್ಯ ಎಂಬುದನ್ನು ಕಳೆದ 17 ಚುನಾವಣೆಗಳಲ್ಲಿ ಮತದಾರರು ಸಾಬೀತುಪಡಿಸಿದ್ದಾರೆ. ಇಲ್ಲಿ ಜಾತಿ ಆಧಾರದ ಮೇಲೆ ಅಭ್ಯರ್ಥಿಯಾಗಿದ್ದೇ ಇಲ್ಲ.

ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು17,91,386 ಮತದಾರರನ್ನು ಹೊಂದಿದೆ. ಇದರಲ್ಲಿ ಸರಿಸುಮಾರು 5 ಲಕ್ಷ ವೀರಶೈವ- ಲಿಂಗಾಯತ ಮತದಾರರಿದ್ದರೆ, ಎಸ್ಸಿಎಸ್ಟಿ- 2.25 ಲಕ್ಷಕ್ಕೂ ಅಧಿಕ, ಮುಸ್ಲಿಂ 3.10 ಲಕ್ಷ, ಕುರುಬ- 2 ಲಕ್ಷ, ವಿವಿಧ ಹಿಂದುಳಿದ ವರ್ಗ- 3.7 ಲಕ್ಷ, ಬ್ರಾಹ್ಮಣ, ರಡ್ಡಿ ಸಮುದಾಯ- 1 ಲಕ್ಷ ಸೇರಿದಂತೆ ವಿವಿಧ ಸಣ್ಣ ಪುಟ್ಟಸಮುದಾಯಗಳು ಸೇರಿ 17,91,386 ಮತದಾರರಿದ್ದಾರೆ.

ಇಲ್ಲಿ ಲಿಂಗಾಯತ- ವೀರಶೈವ ಸಮಾಜಕ್ಕೆ ಸೇರಿದ ಮತದಾರರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿದೆ. ವಿಧಾನಸಭೆ ಚುನಾವಣೆಗಳಲ್ಲೂ ಅದೇ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕ್ಷೇತ್ರದಲ್ಲಿ ಕಡಿಮೆ ಮತಗಳನ್ನು ಹೊಂದಿದ ಸಮುದಾಯದ ಅಭ್ಯರ್ಥಿಗಳೇ ಹೆಚ್ಚಿನ ಬಾರಿ ಆಯ್ಕೆಯಾಗಿರುವುದು ಹಿಂದಿನ ಚುನಾವಣೆಗಳ ಫಲಿತಾಂಶ ಸಾಕ್ಷಿಯಾಗಿದೆ.

ಸೋತಿದ್ದು ಲಿಂಗಾಯತರು:

1952ರಿಂದ ಈ ವರೆಗೆ 17 ಚುನಾವಣೆಗಳು ನಡೆದಿವೆ. ಐವರು ಮಾತ್ರ ಸಂಸದರಾಗಿ ಆಯ್ಕೆಯಾಗುವ ಮೂಲಕ ಪದೇ ಪದೇ ಅವರನ್ನೇ ಆಯ್ಕೆ ಮಾಡುವ ಕ್ಷೇತ್ರವಿದು ಎಂಬುದನ್ನು ಸಾಬೀತಾಗಿದೆ. ಇನ್ನೊಂದು ವಿಚಿತ್ರವೆಂದರೆ ಈ ವರೆಗೆ ಆಯ್ಕೆಯಾದ ಐವರು ಸಂಸದರಲ್ಲಿ ಒಬ್ಬರೇ ಒಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೆಚ್ಚು ಬಾರಿ ಸೋತವರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದು ಅಷ್ಟೇ ಸತ್ಯ. ಆಯ್ಕೆಯಾದ ಇನ್ನುಳಿದ ನಾಲ್ವರಲ್ಲಿ ಮೂವರು ಬ್ರಾಹ್ಮಣರಾದರೆ, ಇನ್ನೊಬ್ಬರು ಕುರುಬ ಸಮುದಾಯದವರು.

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ಡಿ.ಪಿ. ಕರಮಕರ ಆಯ್ಕೆಯಾಗಿದ್ದರು. ನಂತರ ನಡೆದ ಚುನಾವಣೆಯಲ್ಲೂ ಅವರೇ ಆಯ್ಕೆಯಾದರು. 1962ರಿಂದ 1980ರ ವರೆಗೆ ನಾಲ್ಕು ಬಾರಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸರೋಜಿನಿ ಮಹಿಷಿ ಸಂಸದರಾಗಿದ್ದರು. ಆಗ ಸರೋಜಿನಿ ಮಹಿಷಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಆದರೆ, ರಾಜಕೀಯದಲ್ಲಿನ ಬೆಳವಣಿಗೆಗಳಿಂದಾಗಿ 1980ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಕುರುಬ ಸಮುದಾಯದ ಡಿ.ಕೆ. ನಾಯ್ಕರ ಅವರಿಗೆ ಟಿಕೆಟ್‌ ನೀಡಿತ್ತು. ಆಗ ತಮಗೆ ಟಿಕೆಟ್‌ ತಪ್ಪಿದ್ದಕ್ಕೆ ಸಿಡಿದೆದ್ದ ಸರೋಜಿನಿ ಮಹಿಷಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಗೆಲುವು ಮಾತ್ರ ಕಾಂಗ್ರೆಸ್‌ನ ಡಿ.ಕೆ. ನಾಯ್ಕರ ಅವರಿಗೆ ಲಭಿಸಿತ್ತು. 1996ರ ವರೆಗೂ ಡಿ.ಕೆ. ನಾಯ್ಕರ ಆಯ್ಕೆಯಾಗುತ್ತ ಬಂದರು.

ಬಳಿಕ 1996ರಿಂದ 2004ರ ವರೆಗೆ ಲಿಂಗಾಯತ ಸಮುದಾಯದ ವಿಜಯ ಸಂಕೇಶ್ವರ ಕ್ಷೇತ್ರದಲ್ಲಿ ಜಯಸಾಧಿಸಿ ಸಂಸದರಾಗಿದ್ದರು. ಈ ಮೂರು ಚುನಾವಣೆಗಳಲ್ಲಿ ಮಾತ್ರ ಲಿಂಗಾಯತ ಸಮುದಾಯಕ್ಕೆ ಸೇರಿದವರು ಸಂಸದರಾಗಿದ್ದರು. ಬಳಿಕ 2004ರಿಂದ ನಾಲ್ಕು ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ ಜೋಶಿ ಸಂಸದರಾಗಿದ್ದಾರೆ. ಈಗಲೂ ಅವರೇ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಕುರುಬ ಸಮುದಾಯದ ವಿನೋದ ಅಸೂಟಿ ಅವರನ್ನು ಪಕ್ಷ ಕಣಕ್ಕಿಳಿಸುತ್ತಿದೆ. ಕಾಂಗ್ರೆಸ್‌ ಈ ಸಲ ಅಹಿಂದ ಮತ ಬುಟ್ಟಿಗೆ ಹಾಕಿಕೊಂಡು ಜೋಶಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಬೇಕೆಂಬ ಇರಾದೆ ಹೊಂದಿದೆ.

ಹೀಗಾಗಿ, ಕ್ಷೇತ್ರದಲ್ಲಿ ಮತದಾರರು ಜಾತಿಗೆ ಸೊಪ್ಪು ಹಾಕುವುದಿಲ್ಲ. ಇಲ್ಲಿನ ಮತದಾರ ಜಾತಿಗಿಂತ ವ್ಯಕ್ತಿ, ಪಕ್ಷ ಹಾಗೂ ಇತರ ಅಂಶಗಳನ್ನೇ ಗಮನದಲ್ಲಿಟ್ಟು ಮತ ಚಲಾಯಿಸುತ್ತಾನೆ ಎಂದು ಸಾಬೀತು ಪಡಿಸಿದ್ದಾರೆ.

ಪದೇ ಪದೇ ಆಯ್ಕೆಯ ಕ್ಷೇತ್ರ:

ಮೊದಲ 2 ಬಾರಿ ಡಿ.ಪಿ. ಕರಮರಕರ, ಸರೋಜಿನಿ ಮಹಿಷಿ 4 ಬಾರಿ, ಡಿ.ಕೆ. ನಾಯ್ಕರ 4 ಬಾರಿ, ವಿಜಯ ಸಂಕೇಶ್ವರ 3 ಬಾರಿ, ಪ್ರಹ್ಲಾದ ಜೋಶಿ 4 ಬಾರಿ ಆಯ್ಕೆಯಾಗಿದ್ದಾರೆ. ಹೀಗೆ ಪದೇ ಪದೇ ಅದೇ ಅಭ್ಯರ್ಥಿಗೆ ಅವಕಾಶ ಕೊಟ್ಟು ನೋಡುವ ಕ್ಷೇತ್ರವಿದು.