ಸಾರಾಂಶ
ಗ್ರಾಮದ ದಲಿತರು ಪ್ರತಿಭಟನೆ । ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿಕನ್ನಡಪ್ರಭ ವಾರ್ತೆ ಹಾಸನ
ದಲಿತರು ವಾಸವಿರುವ ಜಾಗಕ್ಕೆ ಕಾಯಂ ಸಾಗುವಳಿ ಪತ್ರ, ಇ-ಸ್ವತ್ತು, ಮೂಲಭೂತ ಸೌಕರ್ಯ, ಒದಗಿಸುವಂತೆ ಹೆತ್ತೂರು ಗ್ರಾಮದ ದಲಿತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಗ್ರಾಮದ ಮುಖ್ಯಸ್ಥ ಕುಮಾರಯ್ಯ ಮಾತನಾಡಿ, ತಲೆಮಾರುಗಳಿಂದ ಒಂದು ಸೂರು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ದಲಿತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದ ಅಧಿಕಾರಿಗಳಿಗೆ ಇದೀಗ ಹಿನ್ನಡೆಯಾಗಿದೆ. ಆದರೆ ಕಾನೂನಾತ್ಮಕವಾಗಿ ಅಲ್ಲಿ ವಾಸವಿರುವ ದಲಿತರು ಯಾವುದೇ ಬೇರೆ ಜಮೀನನ್ನು ಒತ್ತುವರಿ ಮಾಡಿಲ್ಲ ಎಂಬುದು ಸರ್ವೆ ಮೂಲಕ ರುಜುವಾತಾಗಿದೆ. ಗ್ರಾಮದಲ್ಲಿನ ಸರ್ವೆ ನಂಬರ್ ೩೦೨ರಲ್ಲಿ ತಲೆಮಾರುಗಳಿಂದ ವಾಸವಿರುವ ವಾಸಿಗಳ ಬಳಿ ಈ ಸ್ಥಳಕ್ಕೆ ಸಂಬಂಧಪಟ್ಟ ಹಂಗಾಮಿ ಸಾಗುವಳಿ ಪತ್ರವಿದ್ದು, ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದು ೧೯೭೭-೭೮ನೇ ಸಾಲಿನಲ್ಲಿ ದಲಿತರು ಹಾಗೂ ಇತರ ಸಮುದಾಯದವರು ವಾಸವಿರುವ ಮನೆಗಳ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಅಂದಿನ ತಾಲೂಕು ಆಡಳಿತ ವತಿಯಿಂದ ಫಲಾನುಭವಿಗಳನ್ನು ಗುರುತಿಸಿ ವೈಯುಕ್ತಿಕವಾಗಿ ಹಂಗಾಮಿ ಸಾಗುವಳಿ ಪತ್ರವನ್ನು ನೀಡಿದೆ ಎಂದು ಹೇಳಿದರು.
ಅಲ್ಲಿಂದ ಇಲ್ಲಿಯವರೆಗೂ ಸರ್ವೆ ನಂ.೩೦೨ರಲ್ಲಿ ಸುಮಾರು ೬೩ ಕುಟುಂಬ ವಾಸ ಮಾಡುತ್ತಿವೆ. ಫೆ.೩ ರಲ್ಲಿ ಸ್ಥಳೀಯ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸೇರಿ ಎಂ.ಆರ್. ನಂ.೪೯ನ್ನು ದಾಖಲಿಸಿ ದಲಿತರಿಗೆ ಮಂಜೂರಾಗಿದ್ದ ಸರ್ವೆ ನಂ.೩೦೨ರ ೨ ಎಕರೆ ಜಮೀನನ್ನು ಗ್ರಾಮ ಪಂಚಾಯಿತಿ ಎಂದು ನಮೂದು ಮಾಡಿರುತ್ತಾರೆ. ಸರ್ವೆ ನಂಬರ್‌ನಲ್ಲಿ ಒಟ್ಟು ವಿಸ್ತೀರ್ಣ ೬ ಎಕರೆ ೨೭ ಗುಂಟೆ ಜಮೀನಿದ್ದು, ೨ ಎಕರೆ ೨೭ ಗುಂಟೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಹಾಗೂ ೨ ಎಕರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಳಿದ ೨ ಎಕರೆ ಪರಿಶಿಷ್ಟ ಜಾತಿ ಎಂದು ಉದ್ದೇಶಪೂರ್ವಕವಾಗಿ ೧೯೭೭ರಿಂದಲೂ ಸರ್ಕಾರಿ ದಾಖಲೆಯಲ್ಲಿ ದಾಖಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಇಲ್ಲಿ ವಾಸವಿರುವ ದಲಿತ ಕುಟುಂಬಗಳ ಸ್ಥಳಗಳಿಗೆ ಕಾಯಂ ಸಾಗುವಳಿ ಚೀಟಿ, ಇ-ಸ್ವತ್ತು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಹೂವಣ್ಣ, ದೊಡ್ಡಯ್ಯ, ಮಲ್ಲೇಶ್ ಎನ್.ಡಿ, ಚಂದ್ರಯ್ಯ, ಸುಬ್ಬಯ್ಯ, ಗೌರಮ್ಮ, ಸುಶೀಲಮ್ಮ, ಜಯಂತಿ, ಹರಿಣಿ, ರತ್ನಮ್ಮ, ಯಶೋಧ, ಸುಶೀಲ, ರಮೇಶ್, ಕರ್ಣ, ರವಿ, ಶಿವಕುಮಾರ್, ಧನು, ಪೃಥ್ವಿ ಇತರರು ಇದ್ದರು.ಕಾಯಂ ಹಕ್ಕುಪತ್ರಕ್ಕಾಗಿ ಹಾಸನ ಕಚೇರಿ ಮುಂದೆ ಹೆತ್ತೂರಿನ ದಲಿತರು ಪ್ರತಿಭಟನೆ ನಡೆಸಿದರು.