ಹೈಟೆಕ್ ರೇಷ್ಮೆ ಮಾರುಕಟ್ಟೆ ಶೀಘ್ರ ಕಾರ್ಯಾರಂಭ: ಸಿಪಿವೈ

| Published : Sep 28 2025, 02:00 AM IST

ಹೈಟೆಕ್ ರೇಷ್ಮೆ ಮಾರುಕಟ್ಟೆ ಶೀಘ್ರ ಕಾರ್ಯಾರಂಭ: ಸಿಪಿವೈ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲೇ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ ಇದಾಗಿದ್ದು, ಮೊದಲ ಹಂತದಲ್ಲಿ ೭೫ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಎರಡನೇ ಹಂತದಲ್ಲಿ ೧೨೫ ಕೋಟಿ ರು. ಬಿಡುಗಡೆಯಾಗಲಿದ್ದು, ಒಟ್ಟು ೨೦೦ ಕೋಟಿ ರು. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ.

ಶಾಸಕರಿಂದ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಪರಿಶೀಲನೆ । ೨೦೦ ಕೋಟಿ ರು. ವೆಚ್ಚದ ಕಾಮಗಾರಿ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಇಲ್ಲಿನ ಸಿಲ್ಕ್ ಫಾರಂ ಬಳಿ ಸುಮಾರು ೨೦ ಎಕರೆ ಜಾಗದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಬೇಗ ಪೂರ್ಣಗೊಂಡು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಸಿಲ್ಕ್ ಫಾರಂ ಬಳಿ ನೂತನವಾಗಿ ನಿರ್ಮಿಸಿರುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ಹೈಟೆಕ್ ರೇಷ್ಮೆ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಮೂರರಿಂದ ನಾಲ್ಕು ತಿಂಗಳೊಳಗೆ ಮೊದಲ ಹಂತದ ಕಾರ್ಯ ಚಟುವಟಿಕೆಗಳು ಇಲ್ಲಿ ಪ್ರಾರಂಭವಾಗಲಿದೆ. ಹಳೇ ಮಾರುಕಟ್ಟೆಯ ಲೋಪದೋಷಗಳನ್ನ ಸರಿಪಡಿಸಿ ಆಧುನಿಕವಾದ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

ದೇಶದಲ್ಲೇ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ ಇದಾಗಿದ್ದು, ಮೊದಲ ಹಂತದಲ್ಲಿ ೭೫ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಎರಡನೇ ಹಂತದಲ್ಲಿ ೧೨೫ ಕೋಟಿ ರು. ಬಿಡುಗಡೆಯಾಗಲಿದ್ದು, ಒಟ್ಟು ೨೦೦ ಕೋಟಿ ರು. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದರು.

ಹೈಟೆಕ್ ರೇಷ್ಮೆ ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರ್ಸಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಹಳೇ ಕಟ್ಟಡ ತೆರವು ಗೊಳಿಸುವುದು ವಿಳಂಬವಾದ ಕಾರಣ ಈ ಕಟ್ಟಡದ ನಿರ್ಮಾಣ ಕಾರ್ಯ ತಡವಾಗಿ ಆರಂಭಗೊಂಡಿತ್ತು. ಇದೀಗ ಮಾರುಕಟ್ಟೆ ನಿರ್ಮಾಣ ಕಾರ್ಯ ವೇಗ ಪಡೆದಿದೆ. ರೇಷ್ಮೆ ಸಚಿವ ಕೆ.ವೆಂಕಟೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮಯ ನಿಗದಿಗೊಂಡ ಬಳಿಕ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಆಧುನಿಕ ಸೌಲಭ್ಯ:

ರಾಮನಗರ ಮಾರುಕಟ್ಟೆಗೆ ಪ್ರತಿದಿನ ೪೦- ೫೦ ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ ೧೦೦- ೧೫೦ ಟನ್ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.

ರಾಮನಗರದ ರೇಷ್ಮೆ ರೀಲರ್ಸ್‌ಗಳ ವಿರೋಧ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅತ್ಯಾಧುನಿಕ ಸೌಲಭ್ಯ ಸಿಗುವ ಕಡೆ ಪ್ರತಿಯೊಬ್ಬರೂ ಬರಲೇಬೇಕು. ಹೆಣ್ಮಕ್ಕಳು ಅತ್ಯುತ್ತಮ ಕೆಎಸ್‌ಐಸಿ ಸೀರೆ ಸಿಗುವ ಕಡೆ ಹುಡುಕಿಕೊಂಡು ಹೋಗುತ್ತಾರೆ. ಅಂತೆಯೇ ರೀಲರ್ಸ್‌ಗಳು ಸಹ ಉತ್ತಮ ರೇಷ್ಮೆಗೂಡು ಸಿಗುವೆಡೆ ಬರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಸುಸಜ್ಜಿತ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ:

ಹಳೇ ರೇಷ್ಮೆ ಮಾರುಕಟ್ಟೆ ಜಾಗದಲ್ಲಿ ಸುಸಜ್ಜಿತ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಪ್ರಸ್ತಾವ ಇದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನೂತನ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಬಳಿಕ ಹಳೇ ರೇಷ್ಮೆ ಮಾರುಕಟ್ಟೆ ಇರುವ ಕಟ್ಟಡ ಪಾಳುಬೀಳುವ ಸಂಭವದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಸುಸಜ್ಜಿತ ಆಸ್ಪತ್ರೆ ಆಗತ್ಯವಿದೆ. ಹೀಗಾಗಿ ಈ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಜತೆಗೆ ಈಗಿರುವ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.