ಸಾರಾಂಶ
ಗುಂಡ್ಲುಪೇಟೆ : ವಿಪ್ ಉಲ್ಲಂಘನೆ ಆರೋಪದ ಮೇರೆಗೆ ಇಲ್ಲಿನ ಪುರಸಭೆಯ ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದ ಜಿಲ್ಲಾಧಿಕಾರಿ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದೆ.
ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅನರ್ಹ ಐವರು ಸದಸ್ಯರು ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆದು ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆ ನೀಡಿದ್ದಾರೆ. ಇದು ಐವರು ಬಿಜೆಪಿ ಸದಸ್ಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
ಏನಿದು ಕಥೆ?:ಪುರಸಭೆ ಬಿಜೆಪಿ ಸದಸ್ಯರಾದ ರಮೇಶ್, ಕಿರಣ್‌ಗೌಡ, ಹೀನಾ ಕೌಸರ್, ರಾಣಿ ಲಕ್ಷ್ಮೀದೇವಿ, ವೀಣಾ ಮಂಜುನಾಥ್‌ರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಳೆದ ಜ.೩೦ರಂದು ವಿಪ್ ಉಲ್ಲಂಘಿಸಿದ್ದಾರೆ ಎಂದು ಸದಸ್ಯತ್ವ ರದ್ದು ಪಡಿಸಿ ಆದೇಶ ಹೊರಡಿಸಿದ್ದರು. ೨೦೨೪ ರ ಸೆ.೪ ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪುರಸಭೆ ಸದಸ್ಯರಾದ ಕಿರಣ್ ಗೌಡ, ಹೀನಾ ಕೌಸರ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆದರೆ ಪುರಸಭೆ ಸದಸ್ಯರಾದ ರಮೇಶ್, ರಾಣಿಲಕ್ಷ್ಮೀ ದೇವಿ, ವೀಣಾ ಮಂಜುನಾಥ್ ಗೈರಾಗಿದ್ದರು.
ಕಳೆದ ೨೦೨೪ ರ ಸೆ.೧೨ ರಂದು ಪುರಸಭೆ ಮುಖ್ಯಾಧಿಕಾರಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ ೧೯೮೭ ರಡಿಯಲ್ಲಿ ಪುರಸಭೆ ಬಿಜೆಪಿ ಸದಸ್ಯರಾದ ಪಿ.ಗಿರೀಶ್, ಎಸ್.ಕುಮಾರ್ ದೂರು ಸಲ್ಲಿಸಿದ್ದರು.ಪುರಸಭೆ ಸದಸ್ಯರ ಕೈ ಬಿಡಲ್ಲ ಎಂದು ಹಿಂದೆಯೂ ಹೇಳಿದ್ದೆ? ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ತಡೆ ಸಿಕ್ಕಿದೆ. ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕಲ್ಲವೇ?
-ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ
ಪುರಸಭೆ ಸದಸ್ಯರ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದೆ. ನಮಗೆ ನ್ಯಾಯ ಸಿಕ್ಕಿದೆ. ಮುಂದೆಯೂ ಸಿಗಲಿದೆ. ಸದಸ್ಯತ್ವ ಹೋದ ಬಳಿಕ ಕೆಲವರು ಟೀಕಿಸಿದ್ದವರಿಗೆ ನಾಯಿ ಆನೆಗೆ ಬೊಗಳಿದ ಕಥೆ ನೆನಪಿಸುತ್ತೇನೆ.
-ರಮೇಶ್, ಬಿಜೆಪಿ ಸದಸ್ಯ
ಜಿಲ್ಲಾಧಿಕಾರಿ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಾತ್ಕಾಲಿಕ ತಡೆ ಬರುವ ಮಾ.೨೫ರವರೆಗೆ ನೀಡಿದೆ. ಸದಸ್ಯರ ಅನರ್ಹಗೊಂಡ ದಾಖಲೆಯನ್ನು ತುರ್ತಾಗಿ ಸಲ್ಲಿಸಿ ಎಂದು ನೋಟೀಸ್ ಪುರಸಭೆ ಮುಖ್ಯಾಧಿಕಾರಿಗೆ ಹೇಳಿದೆ.-ಪಿ. ಗಿರೀಶ್, ದೂರುದಾರ ಸದಸ್ಯ