ಸಾರಾಂಶ
ದೊಡ್ಡಬಳ್ಳಾಪುರದಲ್ಲಿ ‘ಮೆಕ್ಕೆಜೋಳ ಬೆಳೆಯಲ್ಲಿ ಸ್ಲಾಗ್ ಆಧಾರಿತ ಜಿಪ್ಸಂ ಬಳಕೆಯ ಪರಿಣಾಮ’ ಕುರಿತು ಕ್ಷೇತ್ರ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ಎಸ್‌ಎಂ ಗೊಲ್ಲಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯ ಮಣ್ಣು ವಿಜ್ಞಾನ ವಿಭಾಗ ಹಾಗೂ ಬೆಂ.ಗ್ರಾ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ‘ಮೆಕ್ಕೆಜೋಳ ಬೆಳೆಯಲ್ಲಿ ಸ್ಲಾಗ್ ಆಧಾರಿತ ಜಿಪ್ಸಂ ಬಳಕೆಯ ಪರಿಣಾಮ’ ಕುರಿತು ಕ್ಷೇತ್ರ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು.ಕೃಷಿ ವಿವಿ ಡೀನ್ ಡಾ. ಎನ್.ಬಿ. ಪ್ರಕಾಶ್ ಮಾತನಾಡಿ, ಮೆಕ್ಕೆಜೋಳ ಬೆಳೆಯಲ್ಲಿ ಸ್ಲಾಗ್ ಆಧಾರಿತ ಜಿಪ್ಸಂ ಉಪಯೋಗ ಮಹತ್ವದ್ದಾಗಿದೆ. ಈ ಜಿಪ್ಸಂ ಕಬ್ಬಿಣ ಮತ್ತು ಸ್ಟೀಲ್ ಕಾರ್ಖಾನೆಗಳ ಒಂದು ಮೌಲ್ಯವರ್ಧಿತ ಉತ್ಪನ್ನವಾಗಿದ್ದು, ಇದರಲ್ಲಿ ಸುಣ್ಣ ಮತ್ತು ಗಂಧಕದ ಜೊತೆಗೆ ಕಬ್ಬಿಣ, ಮ್ಯಾಂಗನೀಸ್ ಮತ್ತು ಸಿಲಿಕಾನ್ ಅಂಶಗಳು ಇರುತ್ತವೆ ಎಂದರು.
ಕಬ್ಬಿಣ ಹಾಗೂ ಉಕ್ಕಿನ ಉದ್ಯಮದಿಂದ ಲಭ್ಯವಿರುವ ಈ ಜಿಪ್ಸಂನ್ನು ಕೃಷಿ ಉತ್ಪಾದನೆಗೆ ಅಗ್ಗದ ಮತ್ತು ಪರ್ಯಾಯ ಗಂಧಕದ ಮೂಲವಾಗಿ ಬಳಸಬಹುದು. ಆಮ್ಲೀಯ ಮಣ್ಣಿನಲ್ಲಿ ಸ್ಲಾಗ್ ಜಿಪ್ಸಂ ಮಣ್ಣಿನ ಲವಣಾಂಶಗಳನ್ನು ಹತೋಟಿಯಲ್ಲಿಡುತ್ತದೆ. ಇದರ ಬಳಕೆಯಿಂದ ಸಸ್ಯದ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಬಹುದು. ಈ ಜಿಪ್ಸಂ ಬಳಕೆಯಿಂದ ಶೇ.8 ರಿಂದ 12 ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಡಾ.ಪಿ.ರಾಘವೇಂದ್ರ ಮಾತನಾಡಿ, ಪೋಷಕಾಂಶಗಳನ್ನು ಪೂರೈಸುವಾಗ ಎಲ್ಲಾ ಪೋಷಕಾಂಶಗಳನ್ನು ಸಮತೋಲನ ಪ್ರಮಾಣದಲ್ಲಿ ಒದಗಿಸಿದಾಗ ಆರೋಗ್ಯಯುತ ಬೆಳೆ ಸಾಧ್ಯ. ಇಲ್ಲವಾದಲ್ಲಿ ರೋಗ ನಿರೋಧಕತೆ ಕಡಿಮೆಯಾಗಿ ರೋಗ, ಕೀಟ ಹಾವಳಿ ಹೆಚ್ಚುವುದು ಇದರಿಂದಾಗಿ ಕಡಿಮೆ ಇಳುವರಿಯಾಗಿ ಮಣ್ಣಿನ ಆರೋಗ್ಯ ಕ್ಷೀಣಿಸುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪಿ.ವೀರನಾಗಪ್ಪ ಮಾತನಾಡಿ, ರೈತರು ಪೊಟ್ಯಾಶ್ ಮತ್ತು ಗಂಧಕಗಳಂತಹ ಪೋಷಕಾಂಶಗಳ ಪೂರೈಕೆಗೆ ಪರ್ಯಾಯ ಗೊಬ್ಬರಗಳನ್ನು ಬಳಸಬಹುದಾಗಿದೆ. ಸಸ್ಯ ಪೋಷಕಗಳನ್ನು ಒದಗಿಸಲು ಬೆಳೆ ಪರಿವರ್ತನೆ, ಸಾವಯವ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಬಳಕೆ, ಮಾಗಿ ಉಳುಮೆ, ಅಂತರ ಬೆಳೆ ಪದ್ಧತಿಗಳನ್ನು ಅಳವಡಿಸುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸಿ ಗುಣಮಟ್ಟದ ಆಹಾರ ಉತ್ಪಾದನೆಗೆ ಅನುಕೂಲ ಮಾಡಿದಂತಾಗುತ್ತದೆ ಎಂದರು. ಸುಬ್ರತಾ ಬರಾಲ್, ಕೆಂಪಣ್ಣ, ಲೋಕೇಶ್, ಪುಟ್ಟಸಿದ್ದಯ್ಯ ಭಾಗವಹಿಸಿದ್ದರು.