ಪೋಷಕಾಂಶ ನಿರ್ವಹಣೆಯಿಂದ ಅಧಿಕ ಇಳುವರಿ

| Published : Oct 08 2024, 01:06 AM IST / Updated: Oct 08 2024, 01:07 AM IST

ಸಾರಾಂಶ

ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದಲ್ಲಿ ಪೋಷಕಾಂಶಗಳನ್ನು ನಿರ್ವಹಣೆ ಮಾಡುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದು ಮಣ್ಣು ವಿಜ್ಞಾನದ ವಿಷಯ ತಜ್ಞೆ ಡಾ. ರಶ್ಮಿ ಸಿ.ಎಂ. ಹೇಳಿದರು.

ರಾಣಿಬೆನ್ನೂರು: ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದಲ್ಲಿ ಪೋಷಕಾಂಶಗಳನ್ನು ನಿರ್ವಹಣೆ ಮಾಡುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದು ಮಣ್ಣು ವಿಜ್ಞಾನದ ವಿಷಯ ತಜ್ಞೆ ಡಾ. ರಶ್ಮಿ ಸಿ.ಎಂ. ಹೇಳಿದರು.

ತಾಲೂಕಿನ ಪತ್ತೇಪುರ ಗ್ರಾಮದ ಪ್ರಗತಿಪರ ರೈತ ನಾಗರಾಜ ಅವರ ಕ್ಷೇತ್ರದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಮೆಕ್ಕೆಜೋಳದ ಕ್ಷೇತ್ರೋತ್ಸವ ಹಾಗೂ ಕಾಂಪೋಸ್ಟ್‌ ಕಲ್ಚರ್‌ನಿಂದ ಕೃಷಿ ತ್ಯಾಜ್ಯ ವಸ್ತುಗಳ ಕಳಿವಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು. ಬೆಳೆಗೆ ಲಘುಪೋಷಕಾಂಶಗಳನ್ನು ನೀಡುವುದರಿಂದ ಕಾಳು ಕಟ್ಟುವಿಕೆ ಮತ್ತು ಇಳುವರಿ ಹೆಚ್ಚಾಗುವುದು. ಗೋವಿನ ಜೋಳ ಬೆಳೆಗೆ ಫಾಲ್ ಸೈನಿಕ ಹುಳು ಮಾರಕವಾಗಿ ಪರಿಣಮಿಸಿದ್ದು, ಇದರಿಂದ ಗೋವಿನಜೋಳ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಈ ಕೀಟವನ್ನು ಹತೋಟಿ ಮಾಡಲು ಅನುಸರಿಸಿದ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ವಿವರಿಸಿದರು. ಭಾರತದಲ್ಲಿ ಪ್ರತಿ ವರ್ಷ 350 ಮಿಲಿಯನ್‌ ಟನ್‌ನಷ್ಟು ಕೃಷಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ತ್ಯಾಜ್ಯದ ಪ್ರಮಾಣ ತಗ್ಗಿಸಬಹುದು. ಬೆಳೆಯುಳಿಕೆಗಳನ್ನು ಕ್ಷೇತ್ರದಲ್ಲಿ ಸುಡುವುದರಿಂದ ಫಲವತ್ತಾದ ಮೇಲ್ಮೈ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು, ಪೋಷಕಾಂಶಗಳು ನಾಶವಾಗಿ ಬೆಳೆಗಳ ಇಳುವರಿ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಇದನ್ನು ರೈತರು ತಮ್ಮ ಹೊಲಗಳಲ್ಲಿ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದರು.

ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೊಟಬಾಗಿ ಮಾತನಾಡಿ, ಕೃಷಿ ತ್ಯಾಜ್ಯ ವಸ್ತುಗಳನ್ನು ಅವಶ್ಯಕತೆಗೆ ಅನುಗುಣವಾಗಿ ನೀರು ಬಳಸಿ ಹಸಿ ಮಾಡಬೇಕು. ಕಾಂಪೋಸ್ಟ್ ತಯಾರಿಸುವ ಗುಂಡಿ ತುಂಬುವಾಗ ಅಥವಾ ಗುಡ್ಡೆ ಹಾಕುವಾಗ ಪ್ರತಿ ಎಂಟರಿಂದ ಹತ್ತು ಇಂಚು ತ್ಯಾಜ್ಯ ಪದರಿಗೆ ಪ್ರತಿಟನ್‌ ತ್ಯಾಜ್ಯಕ್ಕೆ 1 ರಿಂದ 2 ಕೆಜಿ ಕಾಂಪೋಸ್ಟ್ ಜೀವಿಗಳ ಮಿಶ್ರಣವನ್ನು 10ರಿಂದ 15 ಲೀಟರ್ ನೀರಿನಲ್ಲಿ ಬೆರೆಸಿ ಬಳಸಬೇಕು. ದನಗಳ ಸಗಣಿ ದೊರೆಯದ ಸಂದರ್ಭದಲ್ಲಿ ಎರಡು ಕೆಜಿ ಸಗಣಿ ಗಂಜಲವನ್ನು ನೀರಿನೊಂದಿಗೆ ಬೆರೆಸಿ ಉಪಯೋಗಿಸುವುದರಿಂದ ಸೂಕ್ಷ್ಮಾಣು ಜೀವಿಗಳು ಬೇಗನೆ ವೃದ್ಧಿಯಾಗಿ, ಕಳೆಯುವುದಕ್ಕೆ ಸಹಾಯವಾಗುತ್ತದೆ ಎಂದರು.

ಕೊಟ್ಟಿಗೆ ಗೊಬ್ಬರದೊಂದಿಗೆ ಪ್ರತಿ ಎಕರೆಗೆ 1 ಕಿ.ಗ್ರಾಂ.ನಂತೆ ಕಾಂಪೋಸ್ಟ್ ಕಲ್ಚರ್‌ನ್ನು ಮಿಶ್ರಣ ಮಾಡಿ ಕ್ಷೇತ್ರದಲ್ಲಿನ ತ್ಯಾಜ್ಯಗಳ ಮೇಲೆ ಎರಚಬಹುದು. ಕಾಂಪೋಸ್ಟ್ ಕಲ್ಚರ್‌ನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿದೆ. ಇದರಿಂದ ಸಾವಯವ ಪದಾರ್ಥಗಳು ಅಥವಾ ತ್ಯಾಜ್ಯ ವಸ್ತುಗಳು ನಾಲ್ಕು ಶಿಲೀಂಧ್ರಗಳ (ಪ್ಲೊರೋಟಸ್, ಟ್ರೆಕೋಡರ್ಮಾ, ಫೆನಿರೊಕೀಟ್, ಅಸರಿಜಿಲಸ್) ಕ್ರಿಯೆಯಿಂದ ಸಮನಾಗಿ ಮತ್ತು ಶೀಘ್ರವಾಗಿ ವಿಘಟನೆಯಾಗಿ ದುರ್ವಾಸನೆರಹಿತ ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆ ಹೊಂದುತ್ತದೆ. ಸಾಮಾನ್ಯವಾಗಿ ಕೊಟ್ಟಿಗೆ ಗೊಬ್ಬರವು ಕಳಿಯುವುದಕ್ಕೆ ವರ್ಷನುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಉಪಚಾರದಿಂದ 3ರಿಂದ 4 ತಿಂಗಳಲ್ಲಿ ಉತ್ತಮ ಕಾಂಪೋಸ್ಟ್ ಗೊಬ್ಬರ ತಯಾರಾಗುವುದು .ಕಾಂಪೋಸ್ಟಿನ ಗುಣಮಟ್ಟ ಸುಧಾರಿಸಿ ಅದರಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚುವುದು. ರೋಗಾಣುಗಳ ಸಂಖ್ಯೆಯನ್ನು ನಿಯಂತ್ರಿಸಿ, ಉಪಯುಕ್ತ ಜೀವಾಣುಗಳ ಸಂಖ್ಯೆಯನ್ನು ವೃದ್ಧಿಸಿ, ಮಣ್ಣಿನ ಆರೋಗ್ಯ, ನೀರಿನ ಸಂಗ್ರಹಣೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳ ಇಳುವರಿಯನ್ನು ಹೆಚ್ಚಿಸುತ್ತದೆ ಎಂದರು.

ಪ್ರಾತ್ಯಕ್ಷಿಕೆಯಲ್ಲಿ 25ಕ್ಕೂ ಹೆಚ್ಚು ಗ್ರಾಮಗಳ ರೈತರು ಭಾಗವಹಿಸಿದ್ದರು.