ಗಾಯತ್ರಮ್ಮ ಮೊದಲ ಸಂಸದೆಯಾದರೆ ಇತಿಹಾಸ ಸೃಷ್ಟಿ

| Published : Apr 06 2024, 12:51 AM IST

ಗಾಯತ್ರಮ್ಮ ಮೊದಲ ಸಂಸದೆಯಾದರೆ ಇತಿಹಾಸ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ಲುವುದು ನಿಶ್ಚಿತವಾಗಿದೆ. ಕನಿಷ್ಠ 2 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗಾಯತ್ರಮ್ಮ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡುತ್ತೇವೆ ಎಂದು ಚನ್ನಗಿರಿ ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ ಘೋಷಿಸಿದ್ದಾರೆ.

- ಚನ್ನಗಿರಿ ಪ್ರಚಾರದಲ್ಲಿ ಮಾಡಾಳ್ ಮಲ್ಲಿಕಾರ್ಜುನ, ಎಚ್‌.ಎಸ್‌. ಶಿವಕುಮಾರ ಹೇಳಿಕೆ

- ಕನಿಷ್ಠ 2 ಲಕ್ಷಕ್ಕೂ ಅಧಿಕ ಮತಗಳ ಅಂತರ ಗೆಲುವೇ ನಮ್ಮ ಗುರಿ: ಮುಖಂಡರು

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ಲುವುದು ನಿಶ್ಚಿತವಾಗಿದೆ. ಕನಿಷ್ಠ 2 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗಾಯತ್ರಮ್ಮ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡುತ್ತೇವೆ ಎಂದು ಚನ್ನಗಿರಿ ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ ಘೋಷಿಸಿದ್ದಾರೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ, ರೋಡ್ ಶೋ ವೇಳೆ ಮಾತನಾಡಿದ ಅವರು, ಜಿಲ್ಲೆ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು, ದಾವಣಗೆರೆಗೆ ಗಾಯತ್ರಮ್ಮ ಅವರು ಸಂಸದರಾಗಬೇಕು ಎಂದರು.

ಮಾಡಾಳ್ ಮಲ್ಲಿಕಾರ್ಜುನ ಮಾತನಾಡಿ, ಗಾಯತ್ರಮ್ಮನ ಗೆಲುವಿಗೆ ನಾನು, ಶಿವಣ್ಣ (ಎಚ್‌.ಎಸ್‌. ಶಿವಕುಮಾರ) ಸೇರಿದಂತೆ ಎಲ್ಲರೂ ಶ್ರಮಿಸುತ್ತೇವೆ. ಗಾಯತ್ರಿ ಸಿದ್ದೇಶ್ವರ ಅವರು ಸಂಸದರಾದರೆ, ನಾವು ನೇರವಾಗಿ ಹೋಗಿ ಭೇಟಿ ಮಾಡಬಹುದು. ಅಲ್ಲಿ ಯಾವುದೇ ಅಡೆ, ತಡೆಗೋಡೆ ಇರುವುದಿಲ್ಲ. ನಮ್ಮೆಲ್ಲರನ್ನೂ ಗಾಯತ್ರಮ್ಮ ತಮ್ಮ ಮಕ್ಕಳಂತೆ ಪ್ರೀತಿ ಮಾಡಿ, ಕಷ್ಟ ಸುಖಕ್ಕೆ ಆಗುತ್ತಾರೆ. ಇಂತಹ ಹೃದಯವಂತೆ, ಮಾತೃಹೃದಯಿ ಸಂಸದೆಯಾದರೆ ಕ್ಷೇತ್ರದ ಅಭಿವೃದ್ಧಿಗೆ ಜೊತೆಗೆ ಜನರಿಗೂ ಪ್ರಥಮಾದ್ಯತೆ ಮೇಲೆ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ದಾವಣಗೆರೆಯಿಂದ ಗಾಯತ್ರಮ್ಮ ಸಂಸದೆಯಾಗಿ ಆಯ್ಕೆಯಾದರೆ, ಇಲ್ಲಿನ ಮೊದಲ ಮಹಿಳಾ ಸಂಸದೆಯೆಂಬ ಇತಿಹಾಸ ಸೃಷ್ಟಿಯಾಗುತ್ತದೆ. ಅಂತಹದ್ದೊಂದು ಇತಿಹಾಸಕ್ಕೆ ನಾವೆಲ್ಲರೂ ಕಾರಣೀಕರ್ತರಾಗುತ್ತೇವೆ ಎಂಬ ಹೆಮ್ಮೆ ನಮಗಿರುತ್ತದೆ. ಹಾಗಾಗಿ, ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಒಗ್ಗಟ್ಟಿನಿಂದ ಗಾಯತ್ರಮ್ಮ ಪರ ಪ್ರಚಾರ ಕೈಗೊಂಡು, ನಮ್ಮ ತಾಲೂಕು, ಕ್ಷೇತ್ರದಿಂದ ಅತೀ ಹೆಚ್ಚು ಮತಗಳ ನ್ನು ಕೊಡಿಸುವ ಮೂಲಕ ದಾಖಲೆಯ ಅಂತರದಲ್ಲಿ ಗೆಲ್ಲಿಸೋಣ ಎಂದು ಮನವಿ ಮಾಡಿದರು.

ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ ಮಾತನಾಡಿ, ದಾವಣಗೆರೆ ಜಿಲ್ಲೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಕೊಡುಗೆ ಅಪಾರವಾಗಿದೆ. ಕಳೆದ 2 ದಶಕದಲ್ಲಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಬಾರಿ ಸಂಸದ ಸಿದ್ದೇಶ್ವರರ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಸ್ಪರ್ಧಿಸಿದ್ದಾರೆ. ನಾನು, ನಮ್ಮ ಸಹೋದರ ಮಾಡಾಳ ಮಲ್ಲಿಕಾರ್ಜುನ ಜೊತೆಯಾಗಿ ಜೋಡಿ ಎತ್ತಿನಂತೆ ನಿಂತು, ಗಾಯತ್ರಿ ಸಿದ್ದೇಶ್ವರರಿಗೆ ಹೆಚ್ಚು ಮತಗಳನ್ನು ನಮ್ಮ ಕ್ಷೇತ್ರದಿಂದ ಹಾಕಿಸುವ ಮೂಲಕ ಗೆಲ್ಲಿಸುತ್ತೇವೆ ಎಂದು ಹೇಳಿದರು.

ಚನ್ನಗಿರಿ ತಾಲೂಕಿನ ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ, ಎಸ್.ಬಿ.ಆರ್.ಕಾಲನಿ, ಕಸ್ತೂರಿ ಬಾ ನಗರ, ಸಿದ್ದನಮಠ, ಯಕ್ಕೆಗೊಂದಿ, ಕುಮಾರನಹಳ್ಳಿ, ತೊಪೇನಹಳ್ಳಿ, ಕಲ್ಲೇನಹಳ್ಳಿ, ಮೆದಿಕೆರೆ, ಮಂಗೇನಹಳ್ಳಿ, ಮರಡಿ, ಉಪ ನಾಯಕನಹಳ್ಳಿ, ತಣಿಗೆರೆ, ಭೀಮನಕೆರೆ, ಬೆಳ್ಳಿಗನೂಡು, ಚಿಕ್ಕಕೋಗಲೂರು, ಮಲ್ಲಾಪುರ, ಮಲ್ಲಾಪುರ ಗೋಮಾಳ, ಆಲೂರು, ಹಿರೇಕೋಗಲೂರು, ಗಿರಿಯಾಪುರ, ಈರಗಾನಹಳ್ಳಿ, ವೆಂಕಟೇಶ್ವರ ಕ್ಯಾಂಪ್‌, ಕೆಂಚನಹಳ್ಳಿ ಇತರೆಡೆ ರೋಡ್ ಶೋ ಮೂಲಕ ಗಾಯತ್ರಿ ಸಿದ್ದೇಶ್ವರ ಪರ ಮಾಡಾಳ ಮಲ್ಲಿಕಾರ್ಜುನ, ಎಚ್ಚೆಸ್ ಶಿವಕುಮಾರ ಪ್ರಚಾರ ಮಾಡಿದರು. ಗಾಯತ್ರಿ ಸಿದ್ದೇಶ್ವರ, ಯುವ ಮುಖಂಡ ಜಿ.ಎಸ್.ಅನಿತಕುಮಾರ ಇತರರು ಇದ್ದರು.

- - -

-5ಕೆಡಿವಿಜಿ7, 8:

ಚನ್ನಗಿರಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಎಚ್.ಎಸ್.ಶಿವಕುಮಾರ, ಜಿ.ಎಸ್.ಅನಿತ್ ರೋಡ್ ಶೋ ವೇಳೆ ಮಾತನಾಡಿದರು.