ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳತುಳುನಾಡು ಕಲಾ ಸಂಸ್ಕೃತಿಗಳ ಆಗರವಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಜನಪದ ಆಚರಣೆಗಳು ಬಲು ವಿಶೇಷವಾಗಿ ಕಾಣಸಿಗುತ್ತವೆ. ಕಾರ್ಕಳ ತಾಲೂಕಿನ ಕೆಲವು ಭಾಗಗಳಲ್ಲಿ ಹೆಬ್ರಿ, ಕುಂದಾಪುರ, ಬ್ರಹ್ಮಾವರ ತಾಲೂಕುಗಳಲ್ಲಿ ಹೋಳಿ ಹಬ್ಬದ ವಿಶೇಷವಾದ ಆಚರಣೆಗಳು ಈಗಲೂ ಉಳಿದು ಕೊಂಡಿದೆ.ಕುಡುಬಿ ಹಾಗೂ ಮರಾಠಿ ಜನಾಂಗದವರು ಹೋಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟು ಜನಪದ ಹಾಡನ್ನು ಗುಮಟೆ ನುಡಿಸುತ್ತಾ ಹಾಡುತ್ತಾ ಹೆಜ್ಜೆ ಹಾಕುತ್ತಾರೆ.* ವಾರದ ವರೆಗೆ ಆಚರಣೆ
ಹೋಳಿ ಹಬ್ಬದ ಸಂದರ್ಭದಲ್ಲಿ ಸುಮಾರು ಒಂದು ವಾರಾದ್ಯಂತ ಹಬ್ಬವನ್ನಾಗಿ ಅಚರಣೆ ಮಾಡುವುದು ವಾಡಿಕೆ. ದಶಮಿ ದಿನದಂದು ತುಳಜಾಭವಾನಿ ಕಟ್ಟೆಯಲ್ಲಿ ಹಣ್ಣು ಹಂಪಲುಗಳನ್ನು ಇಟ್ಟು ದೇವರನ್ನು ಪೂಜಿಸಲಾಗುತ್ತದೆ. ಬಳಿಕ ಆ ಹಣ್ಣುಗಳನ್ನು ಅಲ್ಲಿರುವ ತುಳಸಿ ಕಟ್ಟೆಯಲ್ಲಿ ನೇತುಹಾಕಲಾಗುತ್ತದೆ. ಏಕಾದಶಿ ದಿನದಂದು ಸುಮಾರು 50ಕ್ಕೂ ಹೆಚ್ಚು ಜನರು ಗುಂಪುಗಳಲ್ಲಿ ಮನೆಮನೆಗೆ ಭೇಟಿ ನೀಡಿ ತೆರಳಿ ಜನಪದ ಹಾಡುಗಳನ್ನು ಹಾಡುತ್ತಾ ನೃತ್ಯ ಮಾಡುತ್ತಾರೆ.ಊರಿನ ಮನೆಮನೆಗಳಲ್ಲಿ ಹರಕೆಯ ಅನ್ನಪ್ರಸಾದ ನೀಡುವ ಕಾರ್ಯಕ್ರಮಗಳೂ ನಡೆಯುತ್ತವೆ. ಪ್ರತಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ವೀಳ್ಯದೆಲೆ, ಅಕ್ಕಿ, ತೆಂಗಿನಕಾಯಿ, ಗೌರವ ಧನ ನೀಡುತ್ತಾರೆ. ಪ್ರತಿದಿನ ಸಂಜೆ ತನ್ನ ಸಮುದಾಯದ ಮನೆಗೆ ತೆರಳಿ ಕಾಲಿನ ಗೆಜ್ಜೆ ಬಿಚ್ಚಲಾಗುತ್ತದೆ. ಏಕಾದಶಿಯಿಂದ ಚತುರ್ದಶಿ ವರೆಗೆ ಮನೆಮನೆಗೆ ತೆರಳಿ ಹಾಡು ಹಾಡಲಾಗುತ್ತದೆ. ಹೋಳಿ ಹುಣ್ಣಿಮೆಯಂದು ಎಲ್ಲ ಮನೆಗಳಲ್ಲಿ ನೀಡಿದ ತೆಂಗಿನ ಕಾಯಿ, ಅಕ್ಕಿ, ಎಲೆ, ಅಡಕೆಗಳನ್ನ (ಮೋಟುಗಾರಿ, ತಳಿ ಎಂದು ಕರೆಯುತ್ತಾರೆ) ವಾದ್ಯ ಮೇಳ ಜೊತೆ ನೃತ್ಯ ಮಾಡುತ್ತಾ ಹೊತ್ತುಕೊಂಡು ಮೆರವಣಿಗೆ ಮೂಲಕ ದೇವರ ಕಟ್ಟೆಗೆ ತರಲಾಗುತ್ತದೆ. ಬಳಿಕ ತುಳಸಿ ಕಟ್ಟೆಯ ಮೇಲೆ ನೇತು ಹಾಕಿದ ಹಣ್ಣು ಹಂಪಲುಗಳನ್ನು ಕೆಳಗಿಸಿ ಕಾಯಿಯಾಟ, ಓಕುಳಿಯಾಟ ಬೆಂಕಿಯಾಟ ಆಡುವ ಕಾರ್ಯಕ್ರಮ ನಡೆಯುತ್ತವೆ.
ತಮ್ಮ ವಿಶೇಷವಾದ ಗೆಜ್ಜೆ ಧಿರಿಸುಗಳನ್ನು ಕಳಚಿಟ್ಟು ಗುಮಟೆಗೆ ಪೂಜಿಸಿ ಮುಂದಿನ ವರ್ಷದ ವರೆಗೆ ಇಡುವ ವ್ಯವಸ್ಥೆ ಇರುತ್ತದೆ. ಬೆಂಕಿಯಾಟ ಮಾಡಿ ವಿವಿಧ ಜಾತಿಯ ಮರಗಳಿಂದ ಸೊಪ್ಪುಗಳನ್ನು ಸಂಗ್ರಹಿಸಿ ಅದರ ಮೂಲಕ ನೃತ್ಯ ಮಾಡಿದವರ ದೃಷ್ಟಿ ತೆಗೆಯಲಾಗುತ್ತದೆ. ಮಾರನೇ ದಿನ ಮಾರಿ ಪೂಜೆ ಕಾರ್ಯಕ್ರಮ ನಡೆಯುತ್ತದೆ.* ಒಂದು ವಾರ ವ್ರತಾಚರಣೆ
ಈ ಆಚರಣೆ ಸಂದರ್ಭ ಒಂದು ವಾರ ವ್ರತಾಚರಣೆ ಮಾಡಲಾಗುತ್ತದೆ. ಈ ಸಂದರ್ಭ ಚಪ್ಪಲಿಯನ್ನು ಧರಿಸುವಂತಿಲ್ಲ, ಶುದ್ಧಾಚಾರದ ಜೊತೆ ಮಾಂಸಹಾರ, ಮದ್ಯ ಸೇವನೆ ಮಾಡಬಾರದು.* ಗುಮಟೆಗೆ ಹೆಚ್ಚಿದ ಬೇಡಿಕೆ:ಮಣ್ಣಿನಿಂದ ನಿರ್ಮಾಣ ಮಾಡಲಾದ ಗುಮಟೆಗೆ ಭಾರಿ ಬೇಡಿಕೆಯಿದೆ. ಗುಮಟೆ ಚರ್ಮ ವಾದ್ಯಗಳಲ್ಲಿ ಒಂದಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆ ಭಾರಿಸುತ್ತಾ ಜನಪದ ಹಾಡನ್ನು ಹಾಡುತ್ತಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆಗೆ ತಮ್ಮ ಆಕಾರಕ್ಕೆ ತಕ್ಕಂತೆ ಐನೂರಿಂದ ಸಾವಿರ ರು. ವರೆಗೂ ಬೇಡಿಕೆ ಇರುತ್ತದೆ.
* ಅದೃಷ್ಟ ತರುವ ನೃತ್ಯ: ಅವಿವಾಹಿತರು, ಮಕ್ಕಳು ಆಗದೇ ಇರುವವರು ತಮ್ಮ ಕಷ್ಟ ಪರಿಹರಿಸಲು ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆ ಮಾಡಿಸುತ್ತಾರೆ. ಪ್ರಾರ್ಥನೆ ಮಾಡಿಸಿ ಅದೆಷ್ಟೋ ಕಡೆಗಳಲ್ಲಿ ದೇವಿಯ ಅನುಗ್ರಹದಿಂದ ಫಲ ಸಿಕ್ಕಿ ಹರಕೆಯನ್ನು ಪೂರೈಸುತ್ತಾರೆ. ಕುಣಿದು ಹೋದ ಮನೆಯಲ್ಲಿ ಫಲ ನೀಡದ ತೆಂಗಿನ ಮರವಿದ್ದರೆ ಅದೂ ಫಲ ನೀಡುತ್ತದೆ ಎಂಬ ನಂಬಿಕೆ. ಮನೆ ಮಕ್ಕಳಿಗೆ ರೋಗ ಬಾಧೆ ಇದ್ದರೆ, ಈ ವೇಷಧಾರಿಗಳ ಕೈಯ್ಯಲ್ಲಿ ಕೊಟ್ಟು ಕುಣಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಹೋಳಿ ನೃತ್ಯ ತಂಡಗಳು ಮನೆಗೆ ಬರುವುದೆಂದರೆ ಅದೊಂದು ರೀತಿ ಮನೆಗೆ ಅದೃಷ್ಟ ಬರುತ್ತದೆ ಎನ್ನುವ ಕಲ್ಪನೆ ಹಳ್ಳಿಯಲ್ಲಿದೆ.---------ಕಳೆದ 25 ವರ್ಷಗಳಿಂದ ಹೋಳಿ ಹಬ್ಬದ ನೃತ್ಯದಲ್ಲಿ ತೊಡಗಿ ಕೊಂಡಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಯನ್ನು ಉಳಿಸಿಕೊಂಡು ಬರುವ ಕೆಲಸ ಮಾಡುತಿದ್ದೇವೆ.
। ಜಗದೀಶ್, ಹುತ್ತುರ್ಕೆ ಚಾರ-------
ಕಳೆದ ಹತ್ತು ವರ್ಷಗಳಿಂದ ಹೋಳಿ ನೃತ್ಯ ವೀಕ್ಷಿಸುತ್ತಿದ್ದೇನೆ. ಇಂದಿನ ಪೀಳಿಗೆಯ ಯುವಕರು ಕೂಡ ನೃತ್ಯದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ನೆಲದ ಸಂಸ್ಕತಿಯನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವುದು ಖುಷಿಯ ವಿಚಾರ. ಈ ನೃತ್ಯ ನೋಡಲು ಬೆಂಗಳೂರಿಂದ ಆಗಮಿಸಿದ್ದೇನೆ.। ಮಂಜುನಾಥ, ಮಂಡಾಡಿ ಜೆಡ್ಡು ಚಾರ ಹೆಬ್ರಿ
;Resize=(128,128))