ಸಾರಾಂಶ
ಗುಬ್ಬಿ : ಮಂಗಳೂರು ಗಲಭೆ ಹಿನ್ನೆಲೆ ಭೇಟಿ ನೀಡಿದ ಗೃಹ ಮಂತ್ರಿ ಪರಮೇಶ್ವರ್ ಅವರು ಒಂದು ಸಮುದಾಯವನ್ನು ಮಾತ್ರ ಮಾತನಾಡಿಸಿದ್ದು ಸರಿಯಿಲ್ಲ. ಮತ್ತೊಂದು ಸಮುದಾಯ ಮೃತ ಶೆಟ್ಟಿ ಅವರ ಮನೆಗೂ ಭೇಟಿ ನೀಡಿದ್ದರೆ ಸಾಮಾಜಿಕ ನ್ಯಾಯ ಕಲ್ಪಿಸಿದಂತೆ ಆಗುತ್ತಿತ್ತು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಎನ್.ಆರ್.ಎಲ್.ಎಂ ಶೆಡ್ ಹಾಗೂ ಬೇಲೂರು ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ವೈಯಕ್ತಿಕ ದ್ವೇಷದ ಘಟನೆ ಆಗಿದ್ದರೂ ಒಂದು ಸಮುದಾಯ ಓಲೈಕೆಯ ಬಗ್ಗೆ ಗೃಹ ಸಚಿವರ ಪ್ರೀತಿ ಇರುವುದನ್ನು ರುಜುವಾತು ಮಾಡಿದಂತಾಗಿದೆ. ಈ ಬಗ್ಗೆ ತಾರತಮ್ಯ ನೀತಿ ಒಪ್ಪಿಕೊಳ್ಳಲಾಗದು ಎಂದು ಪ್ರತಿಕ್ರಿಯಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳ ಜನಿವಾರ ತೆಗಿಸುವುದು, ಮಾಂಗಲ್ಯ ಸರ ತೆಗಿಸುವುದು ಸರ್ಕಾರ ನಿಯಮಾವಳಿಯಲ್ಲಿ ಇದ್ದರೆ ಪಾಲಿಸಬೇಕಿದೆ. ಆದರೆ ನಿಯಮ ಇಲ್ಲದೆ ನಡೆದಲ್ಲಿ ಅಲ್ಲಿನ ಸಿಬ್ಬಂದಿಗಳ ಕ್ರಮ ಕೈಗೊಳ್ಳಬೇಕು ಎಂದ ಅವರು ಪರೀಕ್ಷೆ ಬರೆಯುವವಲ್ಲಿ ಪ್ರಾಮಾಣಿಕತೆ ಮರೆಯಾದ ಹಿನ್ನಲೆ ಏನೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ನಡೆದಿದೆ. ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ನರೇಗಾ ಯೋಜನೆ ಬಳಸಿ ಮತ್ತಷ್ಟು ಕೆಲಸ ಸದಸ್ಯರು ಮಾಡಬೇಕು. ಈಗ 8 ಸಾವಿರ ಮೀಟರ್ ಚರಂಡಿ ಮಾಡಲು ಇರುವ ಅವಕಾಶ ಬಳಸಿ ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಕೆಂಪಣ್ಣ, ಉಪಾಧ್ಯಕ್ಷೆ ರೇಷ್ಮಾ, ಸದಸ್ಯರಾದ ಕೃಷ್ಣೇಗೌಡ, ಗುರು ಪ್ರಕಾಶ್, ಲೋಕೇಶ್, ಅನ್ನಪೂರ್ಣ, ಈರಣ್ಣ, ವೆಂಕಟೇಶ್, ಕವಿತಾ, ಮಮತಾ, ಪ್ರಕಾಶ್, ಸುಧಾರಾಣಿ, ಪ್ರೇಮಾ, ಗಂಗಾಧರಗೌಡ, ಸೀತಾರಾಮು ಸಿಂಗ್, ಭಾರತಿ, ನಾಗರಾಜು, ಪಿಡಿಓ ಶ್ರೀದೇವಿ ಬಳ್ಳಳ್ಳಿ, ಗುಮಾಸ್ತರಾದ ವಿಜಯಕುಮಾರಿ ಇತರರು ಇದ್ದರು.