ಸಾರಾಂಶ
ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಮೂಲಕ ಜನರ ಮೆಚ್ಚುಗೆ ಕಳಿಸಿದೆ
ಹೊನ್ನಾವರ
ಇಲ್ಲಿನ ತಾಲೂಕಾಸ್ಪತ್ರೆಗೆ ಲಕ್ಷ್ಯ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಅಡಿಯಲ್ಲಿ 11 ಸಾರ್ವಜನಿಕ ಆರೋಗ್ಯ ಸೌಲಭ್ಯ ತೆಗೆದುಕೊಂಡು ಗುಣಮಟ್ಟದ ಪ್ರಮಾಣೀಕರಣಕ್ಕಾಗಿ ಆಯ್ಕೆಯಾಗಿದೆ.ಆಸ್ಪತ್ರೆ ಗುಣಮಟ್ಟದಲ್ಲಿ ರಾಜಿಯಾಗದೆ ಖಾಸಗಿ ಆಸ್ಪತ್ರೆಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಚಿಕಿತ್ಸೆ ಒದಗಿಸುವ ಮೂಲಕ ಬಡಜನರ ಪಾಲಿನ ಆಶಾಕಿರಣವಾಗಿದೆ. ಸಕ್ಕರೆ ಕಾಯಿಲೆ, ಬಿಪಿ, ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ ಸೇರಿದಂತೆ ಮುಂತಾದ ಪರೀಕ್ಷೆ ನಡೆಸಿ ವರದಿ ನೀಡುವ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆರೋಗ್ಯ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದ ಗೋಡೆ ಬರಹ, ನೇತು ಹಾಕಿರುವ ಬ್ಯಾನರ್, ಫಲಕ ಗಮನ ಸೆಳೆಯುತ್ತಿವೆ. ಇಲ್ಲಿನ ಶುಚಿಯಾದ ವಾತಾವರಣ, ಪ್ರಯೋಗಾಲಯ, ಅತ್ಯುತ್ತಮ ಚಿಕಿತ್ಸಾ ಸೌಲಭ್ಯ, ತಜ್ಞ ವೈದ್ಯರ ಲಭ್ಯತೆ, ಸಿಬ್ಬಂದಿಯಿಂದ ಸಿಗುವ ನಗುಮುಖದ ಸೇವೆ ಸೇರಿದಂತೆ ಮೊದಲಾದವು ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಉತ್ಕೃಷ್ಟ ಆರೋಗ್ಯ ಕೇಂದ್ರವನ್ನಾಗಿ ರೂಪಿಸಿವೆ. ಆದ್ದರಿಂದಲೇ ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಅಡಿಯಲ್ಲಿ ಮಾನ್ಯತೆ ಸಿಕ್ಕಿದೆ.ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್ ಕಿಣಿ, ಕಾರ್ಯ ನಿರ್ವಹಿಸುವ ತಜ್ಞ ವೈದ್ಯರಾದ ಡಾ. ಕೃಷ್ಣಾಜಿ, ಡಾ. ಪ್ರಕಾಶ ನಾಯ್ಕ, ಉಷಾ ಹಾಸ್ಯಗಾರ ಮತ್ತಿತರ ವೈದ್ಯರ ಸೇವೆ ಜನರ ಪ್ರೀತಿಗೆ ಪಾತ್ರವಾಗಿದೆ.ಲಭ್ಯವಿರುವ ಸೇವೆ:ಆಸ್ಪತ್ರೆಯಲ್ಲಿ ಗರ್ಭಿಣಿ, ಮಕ್ಕಳ ಕಿವಿ ಮತ್ತು ಗಂಟಲು, ಮೂಗು, ಚರ್ಮ, ಎಲಬು ಮತ್ತು ಕೀಲು, ಶಸ್ತ್ರಚಿಕಿತ್ಸೆ, ದಂತ, ಹೃದಯ ಮತ್ತು ಸಾಮಾನ್ಯ ಕಾಯಿಲೆ, ಅರವಳಿಕೆ ವಿಭಾಗಗಳಲ್ಲಿ ತಜ್ಞ ವೈದ್ಯರು ಸೇವೆ ನೀಡುತ್ತಿದ್ದಾರೆ. ಆಯುಷ್ ವಿಭಾಗದಲ್ಲಿ ವೈದ್ಯರು ಸೇವೆಗೆ ಲಭ್ಯರಿದ್ದಾರೆ. ಎಕ್ಸರೇ, ರಕ್ತ ಪರೀಕ್ಷೆ, ಇಸಿಜಿ ಪರೀಕ್ಷೆ, ರಕ್ತ ಸಂಗ್ರಹಣಾ ಕೇಂದ್ರಗಳು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಿದೆ. ಡಯಾಲಿಸಿಸ್ ವಿಭಾಗವಿದ್ದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ.ಏನಿದು ಪ್ರಮಾಣಪತ್ರ?ಉತ್ತಮ ಕಾರ್ಯಕ್ಷಮತೆಯ ಸೌಲಭ್ಯ ಗುರುತಿಸುವ ಜತೆಗೆ ಸಮುದಾಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳ ವಿಶ್ವಾಸಾರ್ಹತೆ ಸುಧಾರಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ (NQAS) ಕಾರ್ಯಕ್ರಮ ಪ್ರಾರಂಭಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಡಿ ಹೆರಿಗೆಯ ಚಿಕಿತ್ಸಾ ಕೊಠಡಿಯಲ್ಲಿ ಆರೈಕೆಯ ಗುಣಮಟ್ಟ ಸುಧಾರಿಸಲು ಲಕ್ಷ್ಯ ಯೋಜನೆ ಪ್ರಾರಂಭಿಸಿದೆ. LaQshya ಕಾರ್ಯಕ್ರಮದ ಉದ್ದೇಶವು ತಡೆಗಟ್ಟಬಹುದಾದ ತಾಯಿಯ ಮತ್ತು ನವಜಾತ ಶಿಶುಗಳ ಮರಣ ಕಡಿಮೆ ಮಾಡುವುದು, ಹೆರಿಗೆ ಆಪರೇಷನ್ ಥಿಯೇಟರ್‌ನಲ್ಲಿ ಹೆರಿಗೆಯನ್ನು ಕಾಳಜಿಯೊಂದಿಗೆ ಆರೈಕೆ ಮಾಡುವುದಾಗಿದೆ. ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಎಲ್ ಆರ್ 77%, ಎಂಒಟಿನಲ್ಲಿ 73% ಅಂಕ ಲಭಿಸಿದೆ.