ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮ್ಮೇಳನದ ಧ್ಯೇಯೋದ್ದೇಶಗಳ ಪ್ರಾಮುಖ್ಯತೆ,ಪೌಷ್ಟಿಕತೆ ಹಾಗೂ ಜೀವನೋಪಾಯಕ್ಕಾಗಿ ತೋಟಗಾರಿಕೆ ಅತ್ಯವಶ್ಯಕವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಆಲೂರ ಹೇಳಿದರು.ಅಂತಾರಾಷ್ಟ್ರೀಯ ಸಮ್ಮೇಳನದ ಸಮೃದ್ಧಿ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಸ್ಮಾರ್ಟ್ ತೋಟಗಾರಿಕೆ ಜಾಗತಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳು, ಕುಪೋಷಣ, ಜೀವನೋಪಾಯ ಹಾಗೂ ಅವುಗಳ ಸುಸ್ಥಿರತೆಗಾಗಿ ತೋಟಗಾರಿಕೆ ಒಂದು ಮೂಲಮಂತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಮಾತನಾಡಿ, ಕೃಷಿಯಲ್ಲಿಣಿಂದು ಡಿಜಿಟಲ್ ಅತ್ಯಂತ ಅವಶ್ಯಕತೆಯಾಗಿದೆ. ರೈತರ ಆರ್ಥಿಕ ಸುಸ್ಥಿರತೆಗೆ ಬದ್ಧರಾಗಲು ಆಧುನಿಕತೆಗೆ ಒಗ್ಗಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಡಾ.ಚಂದ್ರಶೇಖರ ಬಿರಾದಾರ ಮಾತನಾಡಿ, ಖುಷ್ಕಿ ಭೂಮಿಯಲ್ಲಿ ತೋಟಗಾರಿಕೆಗೆ ಆದ್ಯತೆ ನೀಡಬೇಕಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿವಿ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಸಮ್ಮೇಳನದಿಂದ ಹೊರಬಂದ ಫಲಿತಾಂಶಗಳನ್ನು ತಮ್ಮ ಕ್ಷೇತ್ರದ ಸಂಶೋಧನೆಗಳಲ್ಲಿ ಅಳವಡಿಸಿ ರೈತರ ಉತ್ಪಾದಕತೆ ಹೆಚ್ಚಿಸಲು ಸಲಹೆ ನೀಡಿದರು.ಬಾಗಲಕೋಟೆಯ ತೋ.ವಿ.ವಿ. ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ. ದಂಡಿನ, ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರು ಹಾಗೂ ಶಿಕ್ಷಣ ನಿರ್ದೇಧಕರಾದ ಡಾ.ಎನ್.ಕೆ. ಹೆಗಡೆ, ಡಾ.ಅನಿತಾ, ಮಹಾಂತೇಶಗೌಡ ಪಾಟೀಲ, ಡಾ.ತಮ್ಮಯ್ಯ ಎನ್. ಹಾಗೂ ಜಮ್ಮು-ಕಾಶ್ಮೀರದ ಎನ್.ಜಿ.ಟಿ. ಅಧ್ಯಕ್ಷ ಡಾ.ಮನೋಜ ನಾಜೀರ್, ಡಿಡಿಎಂಮಂಜುನಾಥರೆಡ್ಡಿ, ನಬಾರ್ಡ್ ಹಾಗೂ ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಿಗಳು, ವಿವಿಧ ಮಹಾವಿದ್ಯಾಲಯಗಳ ಡೀನ್ ಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಸಂಶೋಧನಾ ವಿದ್ವಾಂಸರು, ಉದ್ಯಮಿಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಸಮ್ಮೇಳನದ ಸಂಘಟನಾ ಕಾರ್ಯದರ್ಶಿ, ತೋವಿವಿ ಡೀನ್ ಡಾ.ಬಾಲಾಜಿ ಎಸ್. ಕುಲಕರ್ಣಿ ಸ್ವಾಗತಿಸಿದರು. ಡಾ.ಸರ್ವಮಂಗಳ ಚೋಳಿನ್ ವರದಿ ವಾಚಿಸಿದರು. ಡಾ.ಐ.ಬಿ. ಬಿರಾದಾರ ವಂದಿಸಿದರು. ಡಾ.ಪಲ್ಲವಿ ಎಚ್.ಎಂ. ಮತ್ತು ಡಾ.ಮಹಾಂತೇಶ ನಾಯಕ್ ಬಿ.ಎನ್. ನಿರೂಪಿಸಿದರು.
ಸಂಶೋಧನೆಗಳ ಮಂಡನೆ; ಅಂತಾರಾಷ್ಟ್ರೀಯ ಸಮ್ಮೇಳನದ ಕೊನೆಯ ದಿನದಂದು ಆಯೋಜಿಸಿದ ಅನೇಕ ವೈಜ್ಞಾನಿಕ ಮತ್ತು ತಾಂತ್ರಿಕ ಸಭೆಗಳಲ್ಲಿ ದೇಶ-ವಿದೇಶಗಳಿಂದ ಆಗಮಿದ ವಿಜ್ಞಾನಿಗಳು, ಪರಿಣಿತರು ಹಾಗೂ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಮಂಡಿಸಿದರು.ಸದ್ಯದಲ್ಲಿ ವಿಶ್ವದಾದ್ಯಂತ ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳಾದ ಹವಾಮಾನ ವೈಪರೀತ್ಯ, ಜನಸಂಖ್ಯೆ ಸ್ಫೋಟ, ಅತೀ ವೇಗವಾಗಿ ನಶಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗಾಗಿ ಕಾರ್ಯತಂತ್ರ ರೂಪಿಸುವ ಬಗ್ಗೆ ಸಮ್ಮೇಳನದ ವಿವಿಧ ಹಂತಗಳಲ್ಲಿ ಶಿಫಾರಸ್ಸು ಮಾಡಲಾಯಿತು.
ಕೃತಕ ಬುದ್ಧಿಮತ್ತೆಯ ಬಳಕೆ, ಡ್ರೋನ್ ತಂತ್ರಜ್ಞಾನ ಅಳವಡಿಕೆ, ಪೋಷಕಾಂಶ ಮತ್ತು ನೀರು ಬಳಕೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ದೂರ ಸಂವೇದನ ಬಳಕೆಯಲ್ಲಿ ಬರುವ ಅಡತಡೆಗಳು, ವೈಜ್ಞಾನಿಕ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಇತ್ಯಾದಿಗಳ ಬಗ್ಗೆ ಮಂಡಿಸಿದ ಸಂಶೋಧನೆಗಳ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ಪೂರಕವಾಗಿ ದೇಶ ಹಾಗೂ ರಾಜ್ಯ ಸರ್ಕಾರ ಮಟ್ಟಗಳಲ್ಲಿ ಕಾರ್ಯನೀತಿ ರಚನೆಗಳಲ್ಲಿ ಇಂತಹ ಸಮ್ಮೇಳನದ ಅಂಶಗಳನ್ನು ಒಳಪಡಿಸಿ ನಿರ್ಧಾರ ಕೈಗೊಂಡಿದ್ದಲ್ಲಿ ಜಾಗತಿಕ ಸಮಸ್ಯೆಗಳಿಗೆ ಸುಸ್ಥಿರತೆಯ ಪರಿಹಾರ ಕಂಡು ಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.ಮೂರು ದಿನಗಳವರೆಗೆ ನಡೆದಿರುವ ಈ ವೈಜ್ಞಾನಿಕ ಸಮ್ಮೇಳನದಲ್ಲಿ ಒಟ್ಟು 113 ಸಂಶೋಧನಾ ಪತ್ರಿಕೆ ಮಂಡಿಸಲಾಯಿತು. 150ಕ್ಕೂ ಅಧಿಕ ಭಿತ್ತಿಚಿತ್ರ ಪ್ರದರ್ಶನಗಳ ಮೂಲಕ ಮಂಡಿಸಿದ ವಿಷಯಗಳನ್ನು ಸಮ್ಮೇಳನದ ಹೊರಬಂದ ಮುಖ್ಯಾಂಶಗಳಲ್ಲಿ ಪರಿಗಣಿಸಲಾಯಿತು.
ಹೊರದೇಶಗಳಾದ ಫಿನ್ಲ್ಯಾಂಡ್, ಥೈಲ್ಯಾಂಡ್, ಇಟಲಿ ಹಾಗೂ ದೇಶದ ಜಮ್ಮು-ಕಾಶ್ಮೀರ್, ಜಾರ್ಖಂಡ್, ಓಡಿಸ್ಸಾ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಕೇರಳ, ತಮಿಳುನಾಡು ಇತ್ಯಾದಿ ದೇಶಗಳಿಂದ ಸುಮಾರು 130ಕ್ಕೂ ಅಧಿಕ ವಿಜ್ಞಾನಿಗಳು ಭಾಗವಹಿಸಿದ್ದರು. ದೇಶ ಹಾಗೂ ವಿದೇಶಗಳ 40ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ತಮ್ಮ ಸಂಶೋಧನಾ ಫಲಿತಾಂಶ ಮಂಡಿಸಿದರು. ತದನಂತರ ಉತ್ತಮ ಸಂಶೋಧನೆ0. ಮಂಡಿಸಿದ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.