ಸಮುದ್ರದಹಳ್ಳಿ - ಮ್ಯಾದನಹೊಳೆ ಸೇತುವೆ ಮರು ನಿರ್ಮಾಣಕ್ಕೆ ಇನ್ನೆಷ್ಟು ವರ್ಷ?

| Published : May 25 2024, 12:49 AM IST

ಸಮುದ್ರದಹಳ್ಳಿ - ಮ್ಯಾದನಹೊಳೆ ಸೇತುವೆ ಮರು ನಿರ್ಮಾಣಕ್ಕೆ ಇನ್ನೆಷ್ಟು ವರ್ಷ?
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮ್ಯಾದನಹೊಳೆ ಬಳಿಯ ಸೇತುವೆ 2022ರ ಸೆಪ್ಟೆಂಬರ್‌ ಭಾರೀ ಮಳೆ‌ ಸುರಿದ ಹಿನ್ನೆಲೆಯಲ್ಲಿ ಕುಸಿದು ಬಿದ್ದು ಇಂದಿಗೆ 2 ವರ್ಷಗಳಾದರೂ ಇನ್ನು ಕ್ರಮವಾಗದ ಕುರಿತು ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

2022ರಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಸಮುದ್ರದಹಳ್ಳಿ- ಮ್ಯಾದನ ಹೊಳೆ ಗ್ರಾಮಗಳ ನಡುವೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ ಮುರಿದು ಬಿದ್ದು ಈಗ್ಗೆ ಎರಡು ವರ್ಷ ಕಳೆಯುತ್ತಾ ಬಂದರೂ ಸೇತುವೆ ಪುನರ್ ನಿರ್ಮಾಣವಾಗದೆ ಆ ಭಾಗದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

2022ರ ಸೆಪ್ಟೆಂಬರ್ 20ರಂದು ರಾತ್ರಿ 8 ಗಂಟೆಯ ಸಮಯದಲ್ಲಿ ಭಾರೀ ಮಳೆ‌ ಸುರಿದ ಹಿನ್ನೆಲೆಯಲ್ಲಿ 1982ರಲ್ಲೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸಮುದ್ರದಹಳ್ಳಿ - ಮ್ಯಾದನಹೊಳೆ ಸೇತುವೆ ದಿಢೀರ್ ಕುಸಿದು ಹೋಯಿತು. ಮರುದಿನವೇ ವಿಧಾನಸಭಾ ಅಧಿವೇಶನದಲ್ಲಿ ಆಗಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಈ ವಿಷಯ ಪ್ರಸ್ತಾಪಿಸಿದ್ದರು. ಆದರೆ ಇದುವರೆಗೂ ಆ ಜಾಗದಲ್ಲಿ ಹಳೆಯ ಪಳೆಯುಳಿಕೆ ರೀತಿ ಮುರಿದ ಸೇತುವೆ ಹಾಗೇ ಇದೆ. ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ವೇಣುಕಲ್ಲುಗುಡ್ಡ ಸೇರಿದಂತೆ 8ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಶಿರಾ ತಾಲೂಕಿನ ಗಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸುವರ್ಣಮುಖಿ ನದಿಯಲ್ಲಿ ಗ್ರಾಮಸ್ಥರು ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣದಲ್ಲಿಯೇ ಸಂಚರಿಸುತ್ತಿದ್ದು ಇದುವರೆಗೂ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ರೈತರು ಜಮೀನುಗಳಿಗೆ ತೆರಳಲು, ಮಕ್ಕಳು ಶಾಲೆಗೆ ತೆರಳಲು 11 ಕಿ.ಮೀ. ಸುತ್ತಿ ಬಳಸಿ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ. ಹಿರಿಯೂರಿನಿಂದ ಶಿರಾ ಗಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಕೂಡಲೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮ್ಯಾದನಹೊಳೆ ಗ್ರಾಮಸ್ಥ ವೀರಭದ್ರಪ್ಪ ಮಾತನಾಡಿ, ಶಾಲಾ ಮಕ್ಕಳು ಪಕ್ಕದ ಆರನಕಟ್ಟೆ ಸಮುದ್ರದಹಳ್ಳಿಯ ಶಾಲೆಗಳಿಗೆ ಹೋಗುತ್ತಾರೆ. ಸುಮಾರು 15-20 ಮಕ್ಕಳ ಸಂಚಾರಕ್ಕೆ, ದಿನವೂ ನಗರಕ್ಕೆ ಹೋಗುವ ಕಾರ್ಮಿಕರಿಗೆ, ಪ್ರಯಾಣಿಕರಿಗೆ ಸೇತುವೆ ಅನಿವಾರ್ಯವಾಗಿದೆ. ಮಳೆಗಾಲವಾದ್ದರಿಂದ ಈ ಭಾಗದಲ್ಲಿ ಇನ್ನು ಓಡಾಡುವುದೇ ದುಸ್ತರ ಎಂಬಂತಾಗುತ್ತದೆ ಎಂದರು.

ವಕೀಲ ಎಂ.ಆರ್.ರವೀಂದ್ರ ಮಾತನಾಡಿ, ನಮಗೆ 2 ವರ್ಷದಿಂದ ಸೇತುವೆ ಇಲ್ಲದೆ ಪರಿತಪಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗಲೂ ಮನವಿ ಮಾಡಿದ್ದೆವು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ವಾದರೆ ಅನುಕೂಲ. 800 ಮೀ.ಗೆ ಒಂದೊದಾದರೂ ಚೆಕ್ ಡ್ಯಾಂ ನಿರ್ಮಾಣವಾದರೆ ಒಳ್ಳೆಯದು. ಎರಡು ಮಳೆಗಾಲ ಮುಗಿದರೂ ಸೇತುವೆ ನಿರ್ಮಾಣವಾಗಲಿಲ್ಲ. ಸುಮಾರು 8 ಕಿಮೀ ಹೆಚ್ಚಿನ ದಾರಿ ಸುತ್ತಿ ಬಳಸಿ ಹೋಗಬೇಕಾಗಿದೆ. ಈ ವಿಳಂಬ ಹೋರಾಟಕ್ಕೆ ದಾರಿ ಮಾಡಿಕೊಡುತ್ತದೆ.

ಇನ್ನು, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಈ ಕುರಿತು ಮಾತನಾಡಿ, ಕಳೆದ 2 ವರ್ಷಗಳ ಹಿಂದೆ ಕುಸಿದ ಸೇತುವೆಯ ಮರು ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಅನುದಾನ ಕೇಳಲಾಗಿದೆ. ಸೇತುವೆ ನಿರ್ಮಾಣಕ್ಕೆ 2 ಬಾರಿ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಪ್ರಸಕ್ತ ವರ್ಷವೂ ಮತ್ತೆ ಅನುದಾನ ಕೇಳಲಾಗುವುದು. ಆ ಭಾಗದ ಹಳ್ಳಿಗಳ ಜನರ ಸುಗಮ ಸಂಚಾರಕ್ಕೆ ಯಾವುದೇ ಅನಾನುಕೂಲವಾಗದಂತೆ ಆದಷ್ಟು ಶೀಘ್ರ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.