ಕನ್ನಡಪ್ರಭ ವಾರ್ತೆ ಬೆಂಗಳೂರು

ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​​ ಹೇಳಿದೆ.

ಶಿಕ್ಷೆಯ ಪ್ರಮಾಣದ ಬಗ್ಗೆ ಗುರುವಾರ ನ್ಯಾಯಾಲಯದಲ್ಲಿ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಪ್ರತಿಯೊಬ್ಬ ಅಪರಾಧಿಯೂ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು. ಈ ವೇಳೆ ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸುತ್ತಾ ಶಿಕ್ಷೆ ಕಡಿಮೆ ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿ ಕಣ್ಣೀರಿಟ್ಟರು.

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ, ಒಬ್ಬ ಪೊಲೀಸ್ ಅಧಿಕಾರಿ ಸೇರಿ 17 ಮಂದಿ ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ಜತೆಗೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಬುಧವಾರ ವಿನಯ್ ಕುಲಕರ್ಣಿ ಸೇರಿ 17 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ಪ್ರಕಟಿಸಿದ್ದರು. ಶಿಕ್ಷೆಯ ಪ್ರಮಾಣ ಕುರಿತು ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿದರು.


ಇದಕ್ಕೂ ಮೊದಲು ಸಿಬಿಐ ಪರ ವಾದ ಮಂಡಿಸಿದ ಸಿಬಿಐ ವಿಶೇಷ ಅಭಿಯೋಜಕರಾದ ಶಿವಾನಂದ ಪೆರ್ಲ ಮತ್ತು ಹೇಮಾ, ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ಅಪರಾಧಿಕ ಒಳಸಂಚು ನಡೆದಿದೆ. ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೆ. ಹೀಗಾಗಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡದೆ, ಕಠಿಣಾತಿ ಕಠಿಣ ಶಿಕ್ಷೆಯಾದ ಜೀವಿತಾವಧಿ (ಕ್ಷಮಾದಾನವಿಲ್ಲದ ಜೀವನ ಪರ್ಯಂತ) ಶಿಕ್ಷೆ ವಿಧಿಸಬೇಕು. ಜತೆಗೆ ಹತ್ಯೆಗೀಡಾದ ಯೋಗೇಶ್‌ಗೌಡನ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದರು.

ವಿರಳಾತಿ ವಿರಳ ಪ್ರಕರಣ- ಸಿಬಿಐ:

ಯೋಗೇಶ್‌ ಗೌಡನ ಕಣ್ಣಿಗೆ ಕಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಪೊಲೀಸ್‌ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಸಮಾಜದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳುವ ಸಂದೇಶ ನೀಡಬೇಕು ಎಂದು ಸಿಬಿಐ ಪರ ವಕೀಲರು ಕೋರಿದರು.

--

ಅಪರಾಧಿಗಳ ಅಳಲು ಹೇಗಿತ್ತು?

15ನೇ ಅಪರಾಧಿ ವಿನಯ್ ಕುಲಕರ್ಣಿ

ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ. ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ. ನಾನೊಬ್ಬ ಕೃಷಿಕ, ಸುಮಾರು ಮೂರೂವರೆ ಸಾವಿರ ಹಸು ಮತ್ತು ಎಮ್ಮೆಗಳನ್ನು ಸಾಕುತ್ತಿದ್ದೇನೆ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ.

4ನೇ ಅಪರಾಧಿ ಸಂದೀಪ್‌ ಸವದತ್ತಿ:

ಚಾಲಕನಾಗಿದ್ದು, ವಯಸ್ಸಾದ ತಂದೆ-ತಾಯಿ ಇದ್ದಾರೆ. ಮನೆಯಲ್ಲಿ ನಾನು ಒಬ್ಬನೇ ದುಡಿಯುವುದು, ಶಿಕ್ಷೆ ಕಠಿಣವಾದರೆ ಅವರ ಜೀವನ ಬೀದಿಗೆ ಬೀಳುತ್ತದೆ.

5ನೇ ಅಪರಾಧಿ ವಿನಾಯಕ್‌ ಕಾಟಗಿ:

ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು, ನನ್ನ ಪೋಷಕರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ.

3ನೇ ಅಪರಾಧಿ ಕೀರ್ತಿ ಕುಮಾರ್‌:

ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿದ್ದೆ. ನಾನು ತಪ್ಪು ಮಾಡಿಲ್ಲ.

ಅಪರಾಧಿ 4- ಸಂದೀಪ್‌ ಸವದತ್ತಿ

ನನಗೆ ಚಿಕ್ಕ ಮಕ್ಕಳಿದ್ದಾರೆ. ನಾನು ತಪ್ಪು ಮಾಡಿಲ್ಲ.

ಅಪರಾಧಿ-9 ಅಶ್ವತ್ಥ್, ಅಪರಾಧಿ-10 ಸುನೀಲ್, ಅಪರಾಧಿ-11 ನಾಜೀರ್‌ ಅಹಮ್ಮದ್:

ವಯಸ್ಸಾದ ತಂದೆ-ತಾಯಿ ಇದ್ದಾರೆ. ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಕರುಣೆ ತೋರಿ.

ಅಪರಾಧಿ- 6 ಮಹಾಬಲೇಶ್ವರ್:

ನನಗೆ ಒಂದು ವರ್ಷದ ಹಾಗೂ ಮೂರು ವರ್ಷದ ಮಕ್ಕಳಿದ್ದಾರೆ. ನಾನು ದುಡಿದರೆ ಮಾತ್ರ ನಮ್ಮ ಕುಟುಂಬ ನಡೆಯುತ್ತದೆ.

ಅಪರಾಧಿ-12 ಶಾನವಾಜ್‌ ಮತ್ತು ಅಪರಾಧಿ-18 ವಿಕಾಸ್‌ ಕಲಬುರ್ಗಿ:

ವೃತ್ತಿಯಲ್ಲಿ ಗುತ್ತಿಗೆದಾರರು ಮತ್ತು ಕೃಷಿಕರಾಗಿದ್ದು, ಚಿಕ್ಕ ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಇದೆ.

13ನೇ ಅಪರಾಧಿ ನೂತನ್‌: ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ ಶಿಕ್ಷೆ ಕಡಿಮೆ ಮಾಡಿ.

ಅಪರಾಧಿ-16 ಚಂದ್ರಶೇಖರ್‌ ಹಿಂಡಿ:

ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ನಮ್ಮ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ.

ಅಪರಾಧಿ-7 ಸಂತೋಷ್‌ ಸವದತ್ತಿ:

ತೀವ್ರ ಕಣ್ಣಿನ ಸಮಸ್ಯೆಯಿಂದ ದೃಷ್ಟಿ ದೋಷ ಎದುರಿಸುತ್ತಿದ್ದೇನೆ.

ಅಪರಾಧಿ-19 ಚನ್ನಕೇಶವ (ಪೊಲೀಸ್ ಅಧಿಕಾರಿ):

ನಾನು ಇದುವರೆಗೂ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದೇನೆ. ಈ ಹಿಂದೆ ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇನೆ.

-ಬಾಕ್ಸ್-

ನೊಂದವರಿಗೆ ಪರಿಹಾರಕ್ಕೆ ಮನವಿ:

ಸಿಬಿಐ ವಿಶೇಷ ಅಭಿಯೋಜಕರಾದ ಹೇಮಾ, ನೊಂದವರಿಗೆ ಪರಿಹಾರ ನೀಡುವಂತೆ ಕೋರಿದರು. ಇದಕ್ಕೆ ನ್ಯಾಯಾಧೀಶರು ಯಾರಿಗೆ ಪರಿಹಾರ ಎಂದು ಪ್ರಶ್ನಿಸಿದರು. ಯೋಗೇಶ್‌ಗೌಡ ಅವರ ಮಕ್ಕಳಿಗೆ ಪರಿಹಾರ ನೀಡಬೇಕು ಎಂದರು. ನ್ಯಾಯಾಧೀಶರು, ಪತ್ನಿ ಮಲ್ಲಮ್ಮ ಈ ಪ್ರಕರಣದಲ್ಲಿ ನೊಂದ ವ್ಯಕ್ತಿ ಅಲ್ಲ ಎಂದರು. ಪತ್ನಿ ಮಲ್ಲಮ್ಮಗೆ ಅಲ್ಲ. ಬದಲಿಗೆ ಮಕ್ಕಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಪರಿಹಾರಕ್ಕೆ ಆದೇಶಿಸಬಾರದು ಎಂದು ವಿನಯ್‌ ಕುಲಕರ್ಣಿ ಪರ ವಕೀಲರಾದ ಶ್ಯಾಮ್‌ ಸುಂದರ್‌ ಇದೇ ವೇಳೆ ಮನವಿ ಮಾಡಿದರು.ಯಾರಿಗೂ ತೊಂದರೆ ಕೊಟ್ಟಿಲ್ಲ: ಜಡ್ಜ್‌ ಮುಂದೆ ವಿನಯ್‌ ಕಣ್ಣೀರು:

ನಾನು ಕಳೆದ 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿದೆ. ಹೀಗಾಗಿ ಕಡಿಮೆ ಶಿಕ್ಷೆ ವಿಧಿಸಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.ಗುರುವಾರ ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ವಿನಯ್‌ ಕುಲಕರ್ಣಿ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು.ವಿನಯ್‌ ಕುಲಕರ್ಣಿ ಪರ ವಕೀಲರಾದ ಎಂ.ಎಸ್‌.ಶ್ಯಾಮ್‌ಸುಂದರ್‌ ಅವರು, ವಿನಯ್‌ ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ. ಮೂರು ಬಾರಿ ಶಾಸಕ, ಒಮ್ಮೆ ಸಚಿವರು ಆಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ:ನ್ಯಾಯಾಲಯದ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್‌ ಕುಲಕರ್ಣಿ, ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದಾರೆ. ಆ ಪೈಕಿ ಇಬ್ಬರು ಹೆಣ್ಣುಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್‌ ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಜತೆಗೆ 3,500 ಹಸು/ಎಮ್ಮೆ ಇವೆ. ಅವುಗಳನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ, ವಿನಾಯಿತಿ ತೋರಬೇಕು ಎಂದು ಕೈಮುಗಿದು ಕಣ್ಣೀರಿಟ್ಟು ಮನವಿ ಮಾಡಿದರು.ಮುತ್ತಗಿ ಮನೆಗೆ ಹೆಚ್ಚುವರಿ ಭದ್ರತೆ:

ಜಿಪಂ ಸದಸ್ಯ ಯೋಗೇಶಗೌಡ ಹತ್ಯೆಯ ಎ-1 ಆರೋಪಿ, ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಅವರ ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಶಾಸಕ ವಿನಯ್‌ ಕುಲಕರ್ಣಿ ಪರಮಾಪ್ತನಾಗಿದ್ದ ಮುತ್ತಗಿ, ವಿನಯ್‌ ವಿರುದ್ಧವಾಗಿ ಮಾಫಿ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್‌ಗೆ ತಿಳಿಸಿದ್ದರು. ಅದರಂತೆ ಭದ್ರತೆ ಒದಗಿಸಲಾಗಿತ್ತು. ಬುಧವಾರ ವಿನಯ್‌ ಸೇರಿದಂತೆ 17 ಜನ ಅಪರಾಧಿಗಳು ಎಂದು ಘೋಷಿಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಮುತ್ತಗಿ ನಿವಾಸಕ್ಕೆ ಸಿಆರ್‌ಫಿಎಫ್‌ನ 12 ಸಿಬ್ಬಂದಿ, ಒಂದು ಸಿಎಆರ್ ತುಕಡಿ ನಿಯೋಜಿಸಲಾಗಿದೆ.