ಹುಬ್ಬಳ್ಳಿ ಎಪಿಎಂಸಿಯ ಬಯಲೇ ಶೌಚಾಲಯ!

| Published : Jul 10 2025, 01:46 AM IST

ಸಾರಾಂಶ

ಎಪಿಎಂಸಿಯು ಬರೋಬ್ಬರಿ 434 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಬರೋಬ್ಬರಿ 1200 ಖಾಸಗಿ ಒಡೆತನದಲ್ಲಿರುವ ಮಳಿಗೆಗಳಿದ್ದರೆ, 43 ಎಪಿಎಂಸಿ ಆಡಳಿತಕ್ಕೊಳಪಟ್ಟಿವೆ. ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಬೆಳಗಿನಜಾವ ಶುರುವಾಗುವ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದ ರಾತ್ರಿಯೇ ಬಂದಿರುತ್ತಾರೆ ರೈತರು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಏಷಿಯಾದ ಎರಡನೆಯ ದೊಡ್ಡ ಎಪಿಎಂಸಿ ಎನಿಸಿರುವ ಹುಬ್ಬಳ್ಳಿಯ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಹೀಗಾಗಿ ನೈಸರ್ಗಿಕ ಕರೆ ಬಂದರೆ ನಿಸರ್ಗದ ಮೊರೆಗೆ ಹೋಗಬೇಕು. ಇಲ್ಲಿನ ಬಯಲೇ ಶೌಚಾಲಯ!

ಎಪಿಎಂಸಿಯು ಬರೋಬ್ಬರಿ 434 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಬರೋಬ್ಬರಿ 1200 ಖಾಸಗಿ ಒಡೆತನದಲ್ಲಿರುವ ಮಳಿಗೆಗಳಿದ್ದರೆ, 43 ಎಪಿಎಂಸಿ ಆಡಳಿತಕ್ಕೊಳಪಟ್ಟಿವೆ. ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಬೆಳಗಿನಜಾವ ಶುರುವಾಗುವ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದ ರಾತ್ರಿಯೇ ಬಂದಿರುತ್ತಾರೆ ರೈತರು.

ಇನ್ನು ಇತ್ತ ತರಕಾರಿ ಹೋಲ್‌ಸೆಲ್‌ ಮಾರುಕಟ್ಟೆ ಮುಗಿಯುತ್ತಿದ್ದಂತೆ, ಅಲ್ಲೇ ಚಿಲ್ಲರೆ ವ್ಯಾಪಾರವೂ ಶುರುವಾಗುತ್ತದೆ. ಪಕ್ಕದಲ್ಲೇ ಆಲೂಗಡ್ಡೆ, ಒಣಮೆಣಸಿನಕಾಯಿ, ಈರುಳ್ಳಿ, ಕಾಳು ಕಡಿ ಸೇರಿದಂತೆ ಮತ್ತಿತರರ ಕೃಷಿ ಉತ್ಪನ್ನಗಳ ವಹಿವಾಟುವೂ 10ರ ನಂತರ ಶುರುವಾಗುತ್ತದೆ. ಇದರೊಂದಿಗೆ ಬೆಳಗ್ಗೆಯೇ ಹೂವು ಹಣ್ಣುಗಳ ಹೋಲ್‌ಸೆಲ್‌ ಮಾರಾಟ ನಡೆಯುತ್ತದೆ. ಇನ್ನು ವಾರಕ್ಕೊಮ್ಮೆ ಜಾನುವಾರು ಸಂತೆಯೂ ಇರುತ್ತದೆ. ರೈತರು, ಕೃಷಿ ಉತ್ಪನ್ನಗಳನ್ನು ಹೊತ್ತು ತರುವ ಲಾರಿ, ಟೆಂಪೋ, ಟಾಟಾ ಏಸ್‌, ಟ್ಯ್ರಾಕ್ಟರ್‌ ಸೇರಿದಂತೆ ನೂರಾರು ವಾಹನಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿನ ಡ್ರೈವರ್‌, ಕ್ಲಿನರ್‌, ಇನ್ನು ವ್ಯಾಪಾರಕ್ಕೆ ಬರುವ ಚಿಲ್ಲರೆ ವ್ಯಾಪಾರಸ್ಥರು, ಮಧ್ಯವರ್ತಿಗಳು, ವರ್ತಕರು, ಸಾರ್ವಜನಿಕರು ಹೀಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನತೆಯ ಆಗಮನ ಇದ್ದೇ ಇರುತ್ತದೆ. ಆದರೆ, ಇವರಿಗೆ ನೈಸರ್ಗಿಕ ಕರೆಗೆ ನಿಸರ್ಗದ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಹಾಗಂತ ಎಪಿಎಂಸಿ ಆಡಳಿತ ಮಂಡಳಿ ಏನೂ ಮಾಡಿಯೇ ಇಲ್ಲ ಅಂತೇನೂ ಇಲ್ಲ. ಬರೋಬ್ಬರಿ 8 ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಹೊರಗುತ್ತಿಗೆ ಸಿಬ್ಬಂದಿಯಿಂದ ಅವುಗಳ ನಿರ್ವಹಣೆಯನ್ನೂ ಮಾಡಲಾಗುತ್ತಿದೆ.

ಮೊದಲನೆಯದಾಗಿ ಎಪಿಎಂಸಿಗೆ ಆಗಮಿಸುವ ಜನಸಂಖ್ಯೆಗೆ ತಕ್ಕಂತೆ ಎಂಟು ಶೌಚಾಲಯ ಯಾವುದಕ್ಕೂ ಸಾಕಾಗುವುದಿಲ್ಲ. ಇರುವ ಶೌಚಾಲಯಗಳ ನಿರ್ವಹಣೆ ಅಷ್ಟಕಷ್ಟೇ. ಒಳಗೆ ಹೋಗಲು ಮನಸು ಬರುವುದಿಲ್ಲ; ಅಷ್ಟೊಂದು ಗಲೀಜು. ದುರ್ನಾತ ಬೀರುತ್ತಿರುತ್ತದೆ.

ಹೀಗಾಗಿ ಯಾರಪ್ಪ ಅಲ್ಲಿಗೆ ಹೋಗುತ್ತಾರೆ ಎಂದುಕೊಂಡು ಸಾರ್ವಜನಿಕರೆಲ್ಲರೂ ಬಯಲು ಶೌಚಾಲಯಕ್ಕೆ ಹೋಗುವುದೇ ಜಾಸ್ತಿ. ಹೀಗಾಗಿ ರಾತ್ರಿಯೇ ಬಂದಿರುವ ರೈತರು, ವಿವಿಧ ವಾಹನಗಳ ಸವಾರರು ಬೆಳಗ್ಗೆ ಬಯಲು ಶೌಚಾಲಯಕ್ಕೆ ಹೋಗುತ್ತಿರುವುದು ಕಣ್ಣಿಗೆ ರಾಚುತ್ತದೆ. ಎಲ್ಲಿಯಾದರೂ ಖುಲ್ಲಾ ಜಾಗೆಯಲ್ಲೋ, ಗಿಡಗಂಟೆಗಳು ಬೆಳೆದಿರುವ ಜಾಗೆಗಳು ಬಯಲು ಶೌಚಕ್ಕೆ ಬಳಕೆಯಾಗುತ್ತಿದೆ.

ಇರುವ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಸ್ವಚ್ಛತೆ ಕಾಪಾಡಬೇಕು. ಬೇಕಾದರೆ ಒಂದಿಷ್ಟು ದುಡ್ಡು ನಿಗದಿಪಡಿಸಲಿ. ಆದರೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಈಗಿರುವ ಎಂಟು ಶೌಚಾಲಯಗಳು ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.

ಕುಡಿಯುವ ನೀರು: ಇನ್ನು ಕುಡಿಯುವ ನೀರಿನ ಸೌಲಭ್ಯವೂ ಅಷ್ಟಕಷ್ಟೆ. ಅಲ್ಲಲ್ಲಿ ಕುಡಿಯುವ ನೀರಿನ ಅರವಟಿಗೆ, ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಕೇಳಿ ಬರುತ್ತದೆ. ಒಟ್ಟಿನಲ್ಲಿ ಎಪಿಎಂಸಿಯಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.

ಎಪಿಎಂಸಿಯಲ್ಲಿ ಸೌಲಭ್ಯಗಳು ಇವೆ. ಆದರೆ, ಬರುವ ಜನಸಂಖ್ಯೆಗೆ ಸಾಕಾಗುತ್ತಿಲ್ಲ. ಹೀಗಾಗಿ ಇನ್ನಷ್ಟು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಜತೆಗೆ ಈಗಿರುವ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಅಂದಾಗ ಇಲ್ಲಿಗೆ ಬರುವ ಜನರಿಗೆ ಅನುಕೂಲವಾಗುತ್ತದೆ ಎಂದು ಎಪಿಎಂಸಿಯ ಎಚ್‌ಎಸ್‌ಎಫ್‌ ಟ್ರೇಡರ್ಸ್‌ನ ಹುಸೇನ ನಬಿಸಾಬ ಗಡವಾಲೆ ಹೇಳಿದರು.