ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕೇಂದ್ರದ ಬಿಜೆಪಿ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ರಾಜ್ಯದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಧ್ವನಿ ಎತ್ತುತ್ತಿಲ್ಲ. ಕನ್ನಡಿಗರನ್ನು ದ್ವೇಷದಿಂದ ನೋಡುವ ಕೇಂದ್ರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಆಯೋಜಿಸಿದ್ದ ಯುವ ಸಮ್ಮೇಳನ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ನಾವು ₹4.5 ಲಕ್ಷ ಕೋಟಿ ತೆರಿಗೆ ಕಟ್ಟಿದರೆ, ಕೇಂದ್ರ ನಮಗೆ ವಾಪಸ್ ನೀಡುತ್ತಿರುವುದು ಕೇವಲ 14 ಪೈಸೆ. ಈ ಆರ್ಥಿಕ ಅನ್ಯಾಯದ ವಿರುದ್ಧ ಮುಖ್ಯಮಂತ್ರಿಗಳು ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಕೇವಲ ಹಿಂದೂ-ಮುಸ್ಲಿಂ ದ್ವೇಷ ಬಿತ್ತಿ ಸಮಾಜ ಒಡೆಯುತ್ತಿದೆ. ಗಡಿಭಾಗದಲ್ಲಿ ಮರಾಠಿ-ಕನ್ನಡಿಗರ ನಡುವೆ ಕಿಚ್ಚು ಹಚ್ಚಲು ಯತ್ನಿಸುತ್ತಿದೆ. ಈ ಎಲ್ಲಾ ಜನವಿರೋಧಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಎಂದರು.ನಮ್ಮ ಸರ್ಕಾರ ನೀಡಿದ್ದ ಪಂಚ ಗ್ಯಾರಂಟಿಗಳನ್ನು ನೀವು ಮನೆ ಮನೆಗೆ ತಲುಪಿಸಿದ್ದೀರಿ. ಅದರ ಫಲವಾಗಿಯೇ ಚಿಕ್ಕೋಡಿ ಭಾಗದ ಎಂಟು ಸ್ಥಾನಗಳಲ್ಲಿ ಐದರಲ್ಲಿ ಪಕ್ಷ ಗೆಲುವು ಸಾಧಿಸಿದೆ ಮತ್ತು ಲೋಕಸಭೆಯಲ್ಲೂ ಪ್ರಿಯಾಂಕ ಜಾರಕಿಹೊಳಿ ಅವರು ಭರ್ಜರಿ ಜಯಗಳಿಸಿದ್ದಾರೆ ಎಂದರು.ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಉಪಸ್ಥಿತರಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಮ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಯ್ಯದ್ ಸಾದಿಕ್ ಮತ್ತು ಬಾಹುಬಲಿ ಜೈನ್, ರಾಜ್ಯ ಕಾರ್ಯದರ್ಶಿ ಉದಯ ವೀರಗೌಡರ, ಕಾನೂನು ಘಟಕದ ಅಧ್ಯಕ್ಷ ಶ್ರೀಧರ ಜಾಧವ, ಮಾಧ್ಯಮ ಘಟಕದ ಅಧ್ಯಕ್ಷ ದೀಪಕಗೌಡ, ಮತ್ತು ಚಿಕ್ಕೋಡಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಪಾಟೀಲ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ ಅಂಕಲಗಿ ಇದ್ದರು.