ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬರದಿಂದ ತತ್ತರಿಸಿರುವ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ತಾಲೂಕಿನ ಮರಿಲಿಂನದೊಡ್ಡಿ ಗ್ರಾಮಸ್ಥರು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.ಗ್ರಾಮದ ಬಸ್ ನಿಲ್ದಾಣದ ಬಳಿ ಮರಿಲಿಂಗನದೊಡ್ಡಿ ಸುತ್ತಮುತ್ತಲ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಮಂತ್ರಿ ವಿರುದ್ಧ ಘೋಷಣೆ ಕೂಗಿದರು.
ಮಳೆ ಕೊರತೆಯಿಂದಾಗಿ ನೀರಿ ಅಭಾವ ಎದುರಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆ ಇರುವುದರಿಂದ ರೈತರು ಹೊಸ ಬೆಳೆ ಹಾಕಬಾರದು ಎಂದು ಆಳುವ ಸರ್ಕಾರ ನಿರ್ಬಂಧ ಹಾಕಿದ್ದರಿಂದ ಯಾವುದೇ ಬೆಳೆಯನ್ನು ರೈತರು ಬೆಳೆದಿಲ್ಲ. ಆದರೆ, ಇರುವ ಬೆಳೆ ರಕ್ಷಣೆ ಮತ್ತು ಜನ-ಜಾನುವಾರುಗಳ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ದೂರಿದರು.ಕಳೆದ ಬಾರಿ ಭೀಕರ ಬರ ಬಂದ ಸಂದರ್ಭದಲ್ಲೂ ಕೆಆರ್‌ಎಸ್‌ನಲ್ಲಿ ೭೦ ಅಡಿ ನೀರಿದ್ದರೂ, ನಾಲೆಗಳಲ್ಲಿ ನೀರು ಹರಿಸುವ ಮೂಲಕ ಜನ-ಜಾನುವಾರುಗಳನ್ನು ರಕ್ಷಿಸುವ ಕೆಲಸ ಮಾಡಿದ್ದರು. ಆದರೆ ಈಗ ಕೆಆರ್‌ಎಸ್ ಜಲಾಶಯದಲ್ಲಿ ೮೪ ಅಡಿ ನೀರಿದ್ದರೂ ನಾಲೆಯಲ್ಲಿ ನೀರು ಹರಿಸದೆ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ತೆಂಗು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳೂ ಸಹ ನೀರಿಲ್ಲದ ಒಣಗುತ್ತಿವೆ. ಅವುಗಳ ರಕ್ಷಣೆಗಾದರೂ ನೀರು ಹರಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ತಮಿಳುನಾಡಿಗೆ ಕೇಳದೇ ಸರ್ಕಾರ ನೀರು ಹರಿಸಿ ರಾಜ್ಯದ ಜನರಿಗೆ ದ್ರೋಹವೆಸಗಿದೆ ಎಂದು ಕಿಡಿಕಾರಿದರು.ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದೆ. ನಾಲೆಗಳಲ್ಲಿ ನೀರಿಲ್ಲದೆ ಮೇವಿನ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ನಾವು ರಾಸುಗಳನ್ನು ರಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಎಲ್ಲ ಪ್ರಾಣಿಗಳೂ ಜೀವ ಜಲವೇ ಅಗತ್ಯ. ಅದರಲ್ಲೂ ಸುಡು ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯತೆ ಇರುತ್ತದೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಬೋರ್‌ವೆಲ್‌ಗಳಲ್ಲಿರುವ ನೀರು ಪಾತಾಳ ಸೇರುತ್ತಿದೆ. ಇಂತಹ ಹೊತ್ತಿನಲ್ಲಿ ರೈತರನ್ನು ರಕ್ಷಣೆ ಮಾಡಬೇಕಾದ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣವೇ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಿ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಯೋಗೇಶ್, ರಾಜೇಶ್, ಅನಿಲ್, ಮೋಹನ್, ಬೋರಪ್ಪ, ಶಿವಲಿಂಗೇಗೌಡ, ರಾಮಲಿಂಗೇಗೌಡ, ಅನುಕುಮಾರ್, ಕುಳ್ಳಪ್ಪ , ಸುಧೀಂದ್ರ, ಶಿವಣ್ಣ, ರಾಜಣ್ಣ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.