ಸಾರಾಂಶ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ನಡೆದ ಮಾಜಿ ಉಪಪ್ರಧಾನಿ, ರಾಷ್ಟ್ರನಾಯಕ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ ೧೧೭ನೇ ಜನ್ಮದಿನಾಚರಣೆ ಕಾರ್ಯಕ್ರಮ ಪ್ರಾರಂಭದಲ್ಲಿ ಗೊಂದಲದ ಗೂಡಾಗಿತ್ತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ನಡೆದ ಮಾಜಿ ಉಪಪ್ರಧಾನಿ, ರಾಷ್ಟ್ರನಾಯಕ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ ೧೧೭ನೇ ಜನ್ಮದಿನಾಚರಣೆ ಕಾರ್ಯಕ್ರಮ ಪ್ರಾರಂಭದಲ್ಲಿ ಗೊಂದಲದ ಗೂಡಾಗಿತ್ತು.ನಗರದಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಮೆರವಣಿಗೆ ನಗರದ ಚಾಮರಾಜೇಶ್ವರ ದೇವಾಲಯದ ಬಳಿಯಿಂದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಭುವನೇಶ್ವರಿ ವೃತ್ತದಲ್ಲಿ ಹಾಕಿದ್ದ ಡಾ.ಬಾಬು ಜಗಜೀವನರಾಮ್ ಪ್ಲೆಕ್ಸ್‌ನ್ನು ನಗರಸಭೆಯವರು ತೆರವುಗೊಳಿಸಿದರು. ಇದರಿಂದ ಆಕ್ರೋಶಗೊಂಡ ಸಮುದಾಯದ ಮುಖಂಡರು ನಗರಸಭೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ನಗರಸಭೆಯವರು ಪುನಃ ಪ್ಲೆಕ್ಸ್ ತಂದು ಹಾಕಿದರು.ಮೆರವಣಿಗೆ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಕ್ಕೆ ಬಂದು ತಲುಪಿತು. ಆನಂತರ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಡದ ಯಾವೊಬ್ಬ ಅಧಿಕಾರಿಗಳು ಬಾರದಿದ್ದರಿಂದ ಆಕ್ರೋಶಗೊಂಡ ಮುಖಂಡರು ಕಾರ್ಯಕ್ರಮದ ಬಹಿಷ್ಕಾರಕ್ಕೂ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕೆಲವರು ವಾಗ್ವಾದಕ್ಕೂ ಇಳಿದು, ಪರಸ್ಪರಲ್ಲೇ ಮಾತಿನ ಚಕಮಕಿ ನಡೆದವು. ಸಮುದಾಯದವರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ, ಬೆರಳಣಿಕೆಯಷ್ಟೂ ಜನರು ಬಂದಿದ್ದಾರೆ. ಯಾವ ಅಧಿಕಾರಿಯೂ ಬಂದಿಲ್ಲ. ಕಾರ್ಯಕ್ರಮದ ನಿರ್ಲಕ್ಷ್ಯವಹಿಸಿ, ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದಾರೆಎಂದು ತಾಲೂಕು ಸಹಾಯಕ ಅಧಿಕಾರಿ ಚಿಕ್ಕಬಸವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.ತಾಲೂಕು ಸಹಾಯಕ ಅಧಿಕಾರಿ ಚಿಕ್ಕಬಸವಯ್ಯ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಮತ್ತು ನಾಮಪತ್ರಗಳ ಪರಿಶೀಲನೆ ಇದೆ. ಆದ್ದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲ್ಲಿರಬೇಕು, ಆದ್ದರಿಂದ ಬಂದಿಲ್ಲ, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು.ಜಿಲ್ಲಾಧಿಕಾರಿ, ಎಸ್ಪಿ, ಎಡಿಸಿ, ಎಎಸ್ಪಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಭಾಗವಹಿಸದೇ ಇರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದು ಸರ್ಕಾರಿ ಕಾರ್ಯಕ್ರಮ ನಾವು ಬಹಿಷ್ಕರಿಸಿ ಹೋದರೆ ನಮ್ಮ ನಾಯಕರಿಗೆ ನಾವೇ ಅವಮಾನ ಮಾಡಿದಂತೆ ಆಗುತ್ತದೆ. ಆದ್ದರಿಂದ ಕಾರ್ಯಕ್ರಮ ನಡೆಯಲಿ ಎಂದು ಮುಖಂಡರು ಒಪ್ಪಿಗೆ ಸೂಚಿಸಿದ ನಂತರ ಕಾರ್ಯಕ್ರಮ ನಡೆಯಿತು.