ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಹಾವೇರಿ-ಗದಗ ಲೋಕಸಭಾ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಒಯ್ಯುವ ಮಹದಾಸೆಯಿಂದ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ದುಬೈನಲ್ಲಿ ಉದ್ಯೋಗಿಯಾಗಿರುವ ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಶಶಿಧರ ನಾಗರಾಜಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ತಾವು ಹಿಂದಿನಿಂದಲೂ ಮೋದಿ ಅವರ ಅನುಯಾಯಿಯಾಗಿದ್ದು, ಪಕ್ಷದಲ್ಲೂ ಗುರುತಿಸಿಕೊಂಡಿದ್ದೇನೆ. ದುಬೈನಲ್ಲಿ ಕಳೆದ ತಿಂಗಳು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿರ್ವಹಣಾ ಸಮಿತಿಯಲ್ಲಿ ಸಕ್ರಿಯ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಹಾವೇರಿ ಲೋಕಸಭಾ ಟಿಕೆಟ್ ನೀಡುವಂತೆ ದುಬೈನ ಇಂಡಿಯನ್ ಪೀಪಲ್ಸ್ ಫೋರಂ ಕೂಡ ಬಿಜೆಪಿ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. ದಶಕಗಳಿಂದ ದುಬೈನಲ್ಲಿ ಭಾರತ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಸಂಘಗಳಲ್ಲಿ ಸಕ್ರಿಯನಾಗಿದ್ದೇನೆ. ದುಬೈನಲ್ಲಿ ಕನ್ನಡ ಪಾಠ ಶಾಲೆಯನ್ನು ಆರಂಭಿಸಿದ್ದು, ಸದ್ಯ 870 ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲಾಗಿದೆ. ಭಾರತದ ಆಚೆಯಿರುವ ಬಹುದೊಡ್ಡ ಕನ್ನಡ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಭಾರತದಿಂದ ದುಬೈಗೆ ಉದ್ಯಮ ಅರಸಿ, ಪ್ರವಾಸಿಗರಾಗಿ ಹೋಗಿ ತೊಂದರೆಗೆ ಸಿಲುಕಿದ ನೂರಾರು ಜನರಿಗೆ ನೆರವು ನೀಡಿದ್ದೇನೆ ಎಂದು ತಿಳಿಸಿದರು.
ಹಾಲಿ ಸಂಸದ ಶಿವಕುಮಾರ್ ಉದಾಸಿ ರಾಜಕೀಯ ನಿವೃತ್ತಿ ಕಾರಣಕ್ಕಾಗಿ ಹಾವೇರಿ ಕ್ಷೇತ್ರದ ಟಿಕೆಟ್ ಕೇಳಿದ್ದೇನೆ. ಕ್ಷೇತ್ರದಲ್ಲಿ ಸುಶಿಕ್ಷಿತ ಮತದಾರರಿದ್ದು, ದುಬೈನಲ್ಲಿನ ತಮ್ಮ ಸಮಾಜ ಸೇವೆಯನ್ನು ಇಲ್ಲಿಯೂ ಮುಂದುವರಿಸುವ ಆಶಯವಿದೆ. ದುಬೈ ಕನ್ನಡಿಗರ ಸಂಘದಿಂದ ರಾಜ್ಯದ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಲಾಗಿದ್ದು, ಹಾವೇರಿ ಕ್ಷೇತ್ರದ ಶಾಲೆಗಳಿಗೂ ನೆರವು ನೀಡಲಾಗುವುದು. ಇಂಡಿಯನ್ ಪೀಪಲ್ ಫೋರಂನ ಕರ್ನಾಟಕ ಘಟಕದ ಸಮನ್ವಯಕಾರನಾಗಿ, ದುಬೈ ಕರ್ನಾಟಕ ಸಂಘ, ಕನ್ನಡ ಮಿತ್ರರು ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಅರಿವಿದ್ದು, ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.ಪ್ರಮುಖರಾದ ಸಿದ್ದಾರೂಢ, ಡಾ. ಮಮತಾ ರಡ್ಡೇರ, ಪ್ರವೀಣ, ಸುರೇಶ ರಡ್ಡೇರ, ಸೋಮಶೇಖರ, ಕೊಟ್ರೇಶ ಇತರರಿದ್ದರು.