ರಾಮಲಲ್ಲಾನ ಮೂರ್ತಿ ಎತ್ತಿ ಇಟ್ಟಿದ್ದು ನಾನೇ!

| Published : Jan 21 2024, 01:31 AM IST

ಸಾರಾಂಶ

ರಾಮಜನ್ಮಭೂಮಿ ಹೋರಾಟದ ಕಥೆಗಳನ್ನು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡ ಹುಬ್ಬಳ್ಳಿಯ ಕರಸೇವಕ ನಂದಗೋಪಾಲ ಸಫಾರಿ

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

"ಮಸೀದಿ ಕೆಡವಿದ ಮ್ಯಾಲೆ ಒಳಗಿದ್ದ ರಾಮಲಲ್ಲಾನ ಮೂರ್ತಿ ಎತ್ತಿ ಸುರಕ್ಷಿತವಾಗಿಟ್ಟಿದ್ದು ನಾನೇ, 120 ಕೆ.ಜಿ. ತೂಕದ ಘಂಟೆಯನ್ನು ಐದಾರು ಜನ ಸೇರಿ ಸುರಕ್ಷಿತವಾಗಿಟ್ಟಿದ್ದೆವು. ಮರಳಿ ಬರುವಾಗ ನಮ್ಮ ಮೇಲೆ ಕಲ್ಲೆಸೆತವಾಗುತ್ತಿತ್ತು!

ಇದು 1992ರಲ್ಲಿ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡು ಕರಸೇವಕರಾಗಿ ತೆರಳಿದ್ದ ಹುಬ್ಬಳ್ಳಿಯ ನಂದಗೋಪಾಲ ಸಫಾರಿ ಅವರು ಹೇಳುವ ಮಾತು. ಅಯೋಧ್ಯೆಯಲ್ಲಿ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಕರಸೇವೆಯ ನೆನಪುಗಳನ್ನು ಮೆಲುಕು ಹಾಕಿದರು.

1992ರಲ್ಲಿ ಕರಸೇವೆಗೆ ಕರೆ ಬಂದಾಗ ಹುಬ್ಬಳ್ಳಿಯಿಂದ ಎರಡು ತಂಡಗಳಲ್ಲಿ ಕರಸೇವಕರು ತೆರಳಿದ್ದರು. ಆ ಎರಡು ತಂಡಗಳ ಪೈಕಿ ಒಂದರ ನೇತೃತ್ವ ವಹಿಸಿದ್ದವರು ನಂದಗೋಪಾಲ ಸಫಾರಿ. ಇವರ ತಂಡದಲ್ಲಿ 15 ಮಂದಿ ಇದ್ದರು. 8 ದಿನ ಮುಂಚಿತವಾಗಿಯೇ ಅಯೋಧ್ಯೆಗೆ ತೆರಳಿದ್ದ ಈ ತಂಡ ಮಸೀದಿ ನೆಲಸಮವಾದ ಮರುದಿನ ಅಲ್ಲಿಂದ ಮರಳಿದ್ದರು.

ಆಗ ನಡೆದಿದ್ದ ಹೋರಾಟ, ಮಸೀದಿ ಕೆಡವಿದ್ದು ಹೇಗೆ? ಒಳಗಿದ್ದ ರಾಮ, ಲಕ್ಷ್ಮಣ, ಹನುಮಂತ ಮೂರ್ತಿಗಳನ್ನು ರಕ್ಷಿಸಿ ಪಕ್ಕಕ್ಕೆ ಇಟ್ಟಿದ್ದು, ದೊಡ್ಡದೊಡ್ಡ ಗಂಟೆಯನ್ನು ರಕ್ಷಿಸಿ ಸುರಕ್ಷಿತವಾಗಿ ಇಟ್ಟಿದ್ದನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿ ಹೇಳಿದರು.

1992ರ ಡಿ.6ರಂದು ಬೆಳಗ್ಗೆ 9ರ ಸುಮಾರಿಗೆ ಮಸೀದಿ ಬಳಿ ತೆರಳಿದ್ದೆವು. ಅಲ್ಲೇ ಪಕ್ಕದ ಗೋಡೆ ಮೇಲೆ ನಿಂತು ಉಮಾಭಾರತಿ ಜೋರಾಗಿ ಹನುಮಾನ್‌ ಚಾಲೀಸ ಪಠಿಸುತ್ತಿದ್ದರೆ, ಎಲ್‌.ಕೆ. ಅಡ್ವಾಣಿ, ಯಡಿಯೂರಪ್ಪ ಸೇರಿ ಹಲವು ಹಿರಿಯ ನಾಯಕರು ಭಾಷಣದ ಮೂಲಕ ಹೋರಾಟಗಾರರನ್ನು ಹುರಿದುಂಬಿಸುತ್ತಿದ್ದರು ಎಂದು ಸ್ಮರಿಸಿದರು.

ನಾವು ಕೆಲ ಯುವಕರು ಗುಮ್ಮಟದ ಮೇಲೆ ಹತ್ತಿ ಅದನ್ನು ಕೆಡವಲು ಪ್ರಯತ್ನಿಸಿದ್ದೆವು. ಆದರೆ, ಅದು ಕಷ್ಟ ಸಾಧ್ಯವೆನಿಸುತ್ತಿತ್ತು. ಎಲ್ಲರೂ ಪ್ರಯತ್ನ ಮಾಡಿ ಕೆಡವಲಾಯಿತು. ಗೋಡೆಗಳೆಲ್ಲ ನೆಲಸಮವಾದ ಬಳಿಕ ಒಳಗೆ ಹೋಗಿ ತೆರಳಿದರೆ ಅಲ್ಲೊಂದು ಟೇಬಲ್‌ ಮೇಲೆ ರಾಮ, ಲಕ್ಷ್ಮಣ, ಹನುಮಂತನ ಮೂರ್ತಿಗಳಿದ್ದವು. ಅವುಗಳನ್ನು ಮತ್ತೆ ಸುರಕ್ಷಿತವಾದ ಜಾಗ ಹುಡುಕಿ ಅಲ್ಲಿಟ್ಟಿದ್ದೆವು. ಆಗ ರಾಮನ ಮೂರ್ತಿ ಹಿಡಿದಿದ್ದು, ಸುರಕ್ಷಿತವಾಗಿ ಇಟ್ಟಿದ್ದು ನಾನೇ ಎಂಬುದು ಈಗಲೂ ನನಗೆ ಹೆಮ್ಮೆಯ ವಿಷಯ. ಅದರ ಮರುದಿನ ಬೆಳಗ್ಗೆಯೇ ಅದೇ ರಾಮನ ಮೂರ್ತಿಯನ್ನು ಕೆಲ ಹಿರಿಯರು ಅಲ್ಲಿ ಪ್ರತಿಷ್ಠಾಪಿಸಿದ್ದರು ಎಂದು ನೆನಪಿಸಿಕೊಂಡರು.

ಸಮೀಪದಲ್ಲೇ 120 ಕೆಜಿ ತೂಕದ ಗಂಟೆಯೊಂದಿತ್ತು. ಅದನ್ನು ಬರೋಬ್ಬರಿ ಐದಾರು ಜನ ಕರಸೇವಕರು ಸೇರಿಕೊಂಡು ಎತ್ತಿ ಪಕ್ಕದಲ್ಲಿ ಸುರಕ್ಷಿತ ಜಾಗೆ ನೋಡಿಕೊಂಡು ಇಟ್ಟಿದ್ದೆವು ಎಂದು ಕರಸೇವೆಯ ಆ ದಿನಗಳನ್ನು ಮೆಲಕು ಹಾಕಿದರು.

ನಾವು ಮರಳಿ ಬರುವಾಗ ರೈಲಿನಲ್ಲಿ ನಮಗೆ ಕೂರಲು ಕುಳಿತುಕೊಳ್ಳಲು ಜಾಗವೇ ಸಿಗಲಿಲ್ಲ. ರೈಲಿನ ಮೇಲೆ ಹತ್ತಿ ಪ್ರಯಾಣಿಸಿದ್ದೆವು. ದಾರಿ ಮಧ್ಯೆ ಅನ್ಯಕೋಮಿನ ಜನ ನಮ್ಮ ಮೇಲೆ ಕಲ್ಲೆಸೆಯುತ್ತಿದ್ದರು. ಹಾಗೋ ಹೀಗೋ ಮರಳಿ ಊರು ತಲುಪಿದೆವು. ಆದರೆ ಎಂಟ್ಹತ್ತು ದಿನ ಅಲ್ಲಿನ ಅನುಭವ ಈಗಲೂ ಕಣ್ಣಿಗೆ ಕಟ್ಟಿದಂತಾಗುತ್ತದೆ. ಈಗ ರಾಮಮಂದಿರ ನಿರ್ಮಾಣದ ಸಹಸ್ರಾರು ಜನರ ಕನಸು ನನಸಾಗುತ್ತಿದೆ. ಇದೀಗ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ರಾಮಮಂದಿರ ನಿರ್ಮಾಣದಲ್ಲಿ ಕರಸೇವೆ ಮೂಲಕ ನಾನು ಕೂಡ ಅಳಿಲು ಸೇವೆ ಮಾಡಿದ್ದೇನೆ ಎಂಬ ಸಂತಸ ನನ್ನಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು ನಂದಗೋಪಾಲ ಸಫಾರೆ.

ಕರಸೇವೆಯಲ್ಲಿ ತೊಡಗಿದ್ದ ವೇಳೆ ನನ್ನ ಐಡಿ (ಗುರುತಿನ ಚೀಟಿ) ಕಳೆದಿತ್ತು. ಅದನ್ನು ಬೇರೆ ರಾಜ್ಯದ ಕರಸೇವಕರು ತಂದು ಕರ್ನಾಟಕದ ಟೆಂಟ್‌ಗೆ ಕೊಟ್ಟಿದ್ದರು. ಅದನ್ನು ನೋಡಿ ಹಿರಿಯರೆಲ್ಲರೂ ಬಹುಶಃ ನಾನು ಅಲ್ಲೇ ಗದ್ದಲದಲ್ಲಿ ಬಿದ್ದು ಸತ್ತಿರಬೇಕು. ಅದಕ್ಕೆ ಯಾರೋ ಐಡಿ ತಂದು ಇಲ್ಲಿಗೆ ಮುಟ್ಟಿಸಿದ್ದಾರೆ ಎಂದು ಭಾವಿಸಿದ್ದರು. ಬಳಿಕ ಕೆಲಹೊತ್ತು ಆದ ಮೇಲೆ ನಾನು ನಮ್ಮ ಟೆಂಟ್‌ಗೆ ಹಿಂತಿರುಗಿದಾಗಲೇ ನಾನು ಜೀವಂತ ಇರುವುದು ನಮ್ಮೊಂದಿಗೆ ಬಂದಿದ್ದ ಕರಸೇವಕರಿಗೆ ಗೊತ್ತಾಯಿತು ಎಂದು ಸಫಾರಿ ನೆನಪಿಸಿಕೊಂಡರು.