ಅಮ್ಮನ್ನ ನೋಡಿಕೊಳ್ಳಲು ಓದು ನಿಲ್ಲಿಸಿದೆ

| Published : Feb 11 2024, 01:46 AM IST

ಸಾರಾಂಶ

ರಾಮನಗರ: ನಮ್ಮಮ್ಮನನ್ನು ನೋಡಿಕೊಳ್ಳಲು ಓದು ನಿಲ್ಲಿಸಿದೆ. ಜೀತ ಮಾಡುತ್ತಿದ್ದಾಗ ದಲಿತ ಚಳವಳಿಯ ಸಂಪರ್ಕಕ್ಕೆ ಬಂದೆ. ಆನಂತರದಿಂದ ಬುಡಕಟ್ಟು ಜನರ ಪರವಾಗಿ ಹೋರಾಟದಲ್ಲಿ ಸಕ್ರಿಯನಾಗಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಹೇಳಿದರು.

ರಾಮನಗರ: ನಮ್ಮಮ್ಮನನ್ನು ನೋಡಿಕೊಳ್ಳಲು ಓದು ನಿಲ್ಲಿಸಿದೆ. ಜೀತ ಮಾಡುತ್ತಿದ್ದಾಗ ದಲಿತ ಚಳವಳಿಯ ಸಂಪರ್ಕಕ್ಕೆ ಬಂದೆ. ಆನಂತರದಿಂದ ಬುಡಕಟ್ಟು ಜನರ ಪರವಾಗಿ ಹೋರಾಟದಲ್ಲಿ ಸಕ್ರಿಯನಾಗಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕದ ಜಾನಪದ ಪರಿಷತ್ತು ಆಯೋಜಿಸಿರುವ ಎರಡು ದಿನಗಳ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ -2024 ಸಮಾರಂಭದಲ್ಲಿ ಸೋಮಣ್ಣರವರು ಭಾಷಣದ ಮೂಲಕ ತಮ್ಮ ಜೀವನದ ಹಾದಿಯನ್ನು ತೆರೆದಿಟ್ಟರು.

ತಂದೆ ಕಚ್ಚೆನಹಳ್ಳಿಯ ಅರಣ್ಯದೊಳಗೆ ವಾಸ ಮಾಡುತ್ತಿದ್ದರು. ಕುಟುಂಬದ ಜೊತೆ ಜಗಳ ಮಾಡಿ ಹೆಗ್ಗಡದೇವನಕೋಟೆಯ ಕಟ್ಟೆಮಾರನಹಳ್ಳಿಗೆ ಬಂದರು. ಒಂಬತ್ತು ಮಕ್ಕಳಲ್ಲಿ‌ ಕಡೆಯವನಾದ ನನ್ನನ್ನು ಜನ‌ ಹೀಯಾಳಿಸುತ್ತಿದ್ದರು. ಇದರಿಂದ ಬೇಸತ್ತ ನಮ್ಮಮ್ಮ ನಾನು ಸಾಯಲೆಂದು ಹಾಲು‌ ಕೊಡುವುದನ್ನು ನಿಲ್ಲಿಸಿದರು. ಆಗ ನನ್ನಕ್ಕ‌ ಹಾಲು ಕುಡಿಸಿ ಬದುಕಿಸಿದರು. ಕಿತ್ತು ತಿನ್ನುವ ಬಡತನ, ಹೊಟ್ಟೆಗೆ ಊಟ ಇಲ್ಲ. ಜಮೀನುದಾರರ ಹೊಲದಲ್ಲಿ ಸೊಪ್ಪು ಕುಯ್ಯಲು ಹೋದಾಗ ಬಯ್ಯುತ್ತಿದ್ದರು. ಹೀಗಾಗಿ ನಮ್ಮವ್ವ ಕೂಲಿ ಮಾಡುತ್ತಿದ್ದರು. ಕೂಲಿ ಇಲ್ಲದಿದ್ದಾಗ ಹುಲ್ಲು ಮಾರಾಟ ಮಾಡಿದರಷ್ಟೆ ಹೊಟ್ಟೆ ತುಂಬುತ್ತಿತ್ತು ಎಂದರು.

ಕಾಡಿನಿಂದ ಹುಲ್ಲಿನ ಹೊರೆ ತರುವಾಗ ಬಿದ್ದು ಆರೋಗ್ಯ ಹದಗೆಟ್ಟಿತು. ಆಗ ನಾಲ್ಕನೇ ತರಗತಿ ಓದಿದ್ದ ನಾನು ವಯಸ್ಸಾದ ಅಮ್ಮನನ್ನು ನೋಡಿಕೊಳ್ಳಲು ಓದು ನಿಲ್ಲಿಸಿದೆ. ತಂದೆಯವರು ನನ್ನನ್ನು ಒಬ್ಬರ ಮನೆಗೆ ಜೀತಕ್ಕೆ ಇರಿಸಿದರು. ಒಂದು ವರ್ಷ ಊಟಕ್ಕಷ್ಟೆ ಜೀತ ಮಾಡಿದ ನನಗೆ ವರ್ಷಕ್ಕೆ 16 ರು., ಮರು ವರ್ಷ 25 ರುಪಾಯಿ ಕೂಲಿ ನೀಡಿದರು. ವರ್ಷದಿಂದ ವರ್ಷಕ್ಕೆ ಕೂಲಿ ಪ್ರಮಾಣ ಹೆಚ್ಚಾಯಿತು. ಆಗ ಸ್ವಂತ ಜಮೀನು ಹೊಂದುವ ಆಲೋಚನೆ ಬಂದಿತು. ಆ ವೇಳೆ ಸಿದ್ದಲಿಂಗಯ್ಯ, ರಾಮಯ್ಯ, ಲಿಂಗದೇವರು ಹಳೇಮನೆರವರ ಕ್ರಾಂತಿಕಾರ ಹಾಡುಗಳು ಪ್ರಭಾವ ಬೀರಿತು. ಹಾಡಿಗೆ ಬಂದ ಗೆಳೆಯರ ಮೂಲಕ ದಲಿತ ಸಂಘರ್ಷ ಸಮಿತಿ ಸಂಪರ್ಕಕ್ಕೆ ಬಂದೆ.

1970ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದ ನಂತರ ಬುಡಕಟ್ಟು ಜನರನ್ನು ಅರಣ್ಯದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಆರಂಭಿಸಲಾಯಿತು. ಅದರ ವಿರುದ್ಧ ಹೋರಾಟ ನಡೆಸಿದವು. ದಲಿತ ಸಂಘರ್ಷ ಸಮಿತಿಯಲ್ಲಿ ಒಂದು ಸಮುದಾಯದ ಸಮಸ್ಯೆ ಬಗ್ಗೆ ಹೇಳುತ್ತಿದ್ದರು. ಬುಡಕಟ್ಟು ಸಮುದಾಯಗಳ ಬಗ್ಗೆ ಗಮನ ಹರಿಸಲಿಲ್ಲ. ಆಗ ನಾನೇ ಬುಡಕಟ್ಟು ಸಮುದಾಯದ ಕಡೆ ಗಮನ ಹರಿಸಿದೆ. ನಂತರ ಹುಣಸೂರಿನ ಡೀಡ್ ಸಂಸ್ಥೆ ಮಾರ್ಗದರ್ಶನದಲ್ಲಿ ಆದಿವಾಸಿಗಳ ಪರ ಕೆಲಸ ಶುರು ಮಾಡಿದೆ. ಜಾತಿ ಮತ ನೋಡದೆ ನನ್ನ ಹೋರಾಟಕ್ಕೆ ಬೆಂಬಲ ನೀಡಿದರು ಎಂದು ಸೋಮಣ್ಣ ಹೇಳಿದರು.

1991ರಲ್ಲಿ ಆದಿವಾಸಿಗಳಲ್ಲಿ ಮಹಿಳೆಯರು, ಮಕ್ಕಳ ಸತ್ತರು. ಸರ್ಕಾರದಿಂದ ಶಾಲೆ ಕೊಡಿ ಅಂದರೆ ಕೊಡಲು ಅರಣ್ಯ ಕಾಯ್ದೆ ಅಡ್ಡಿ ಬರುತ್ತದೆ ಅಂದರು. ಆದರೆ, ಫೈವ್ ಸ್ಟಾರ್ ಹೋಟೆಲ್ ಕಟ್ಟಲು ಅನುಮತಿ ನೀಡುತ್ತಿದ್ದರು. ನ್ಯಾಯಾಲಯದ ಮೊರೆ ಹೋದಾಗ ನಮಗೆ ನ್ಯಾಯ ಸಿಕ್ಕಿತು ಎಂದು ಸೋಮಣ್ಣ ಹೇಳಿದರು.

ಕೋಟ್ ................

ವಿದ್ಯಾರ್ಥಿಗಳು ಈಗ ತಲೆ ಬಗ್ಗಿಸಿ ಓದಿದರೆ ಮುಂದೆ ತಲೆ ಎತ್ತಿ ಬದುಕಬಹುದು. ಮೊಬೈಲ್ ಅನ್ನು ಅಗತ್ಯವಾದಷ್ಟು ಬಳಕೆ ಮಾಡಬೇಕು. ಅದರ ಹಿಂದೆಯೇ ಹೋಗಬೇಡಿ. ನೀವು ಅಧಿಕಾರಿಯಾದರೆ ಬಡವರ ಕಣ್ಣೀರು ಒರೆಸಬಹುದು.

- ಸೋಮಣ್ಣ, ಪದ್ಮಶ್ರೀ ಪುರಸ್ಕೃತರು10ಕೆಆರ್ ಎಂಎನ್ 7.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ನಡೆದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ -2024 ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.