ವೈಜ್ಞಾನಿಕತೆ ಅಳವಡಿಸಿಕೊಂಡರೆ ಕೃಷಿಯಲ್ಲಿ ಲಾಭ ಸಾಧ್ಯ

| Published : Feb 06 2025, 11:49 PM IST

ಸಾರಾಂಶ

ರೈತರು ಸಾಂಪ್ರದಾಯಿಕ ಪದ್ಧತಿಗೆ ಅಂಟಿಕೊಳ್ಳದೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ನಡೆಸಿದಾಗ ಕೃಷಿಯನ್ನು ಲಾಭದಾಯಕ ವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ತಿಳಿಸಿದರು. ರೈತರಿಗೆ ತಜ್ಞರ ಸಲಹೆ, ಮಾರ್ಗದರ್ಶನ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ವಾಟ್ಸ್ಆ್ಯಪ್‌ನಲ್ಲಿ ರೈತರ ಗುಂಪು ರಚಿಸಿ ಪ್ರತಿದಿನ ತಾಲೂಕಿನ ಪ್ರಮುಖ ಬೆಳೆಗಳ ಮಾರುಕಟ್ಟೆ ದರವನ್ನು ತಿಳಿಸುವ ಯೋಜನೆ ರೂಪಿಸುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ರೈತರು ಸಾಂಪ್ರದಾಯಿಕ ಪದ್ಧತಿಗೆ ಅಂಟಿಕೊಳ್ಳದೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ನಡೆಸಿದಾಗ ಕೃಷಿಯನ್ನು ಲಾಭದಾಯಕ ವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ತಿಳಿಸಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿಯಲ್ಲಿ ಬಹಳಷ್ಟು ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿದ್ದು, ಈ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಕೃಷಿ ಸಂಬಂಧಿತ ಇಲಾಖೆಗಳು ಈ ಕುರಿತು ರೈತರಿಗೆ ಅಗತ್ಯ ಮಾಹಿತಿ ಒದಗಿಸಬೇಕು. ರೈತರು ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ ಕುರಿತು ಹೆಚ್ಚಿನ ಎಚ್ಚರ ವಹಿಸಬೇಕು. ತಜ್ಞರ ಸಲಹೆಯಂತೆ ಬಳಕೆ ಮಾಡಬೇಕು, ಬೆಳೆಗೆ ರೋಗ ಬಂದಿದೆ, ಕೀಟಗಳ ಹಾವಳಿ ಎಂದು ಮನಬಂದತೆ ಬಳಕೆಮಾಡಿದರೆ ಇದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜನರ ಆರೋಗ್ಯ ರೈತರ ಕೈಯಲ್ಲಿದೆ, ಇದನ್ನು ಮನಗಂಡು ರೈತರು ಹೆಚ್ಚಿನ ಕಾಳಜಿ ಮತ್ತು ಜವಾಬ್ದಾರಿಯಿಂದ ನಡೆಯಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನು ಮರಳಿ ಕೃಷಿಗೆ ಕರೆತಂದು ಶಿಕ್ಷಣದ ಲಾಭ ಕೃಷಿಕ್ಷೇತ್ರಕ್ಕೆ ದೊರೆಯುವಂತೆ ಮಾಡಬೇಕಾದ ಹೊಣೆಯೂ ರೈತರದ್ದಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಕೃಷಿಕ ಸಮಾಜದ ಸಭೆಯನ್ನು ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಆಯೋಜಿಸಿ ರೈತರಿಗೆ ತಜ್ಞರ ಸಲಹೆ, ಮಾರ್ಗದರ್ಶನ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ವಾಟ್ಸ್ಆ್ಯಪ್‌ನಲ್ಲಿ ರೈತರ ಗುಂಪು ರಚಿಸಿ ಪ್ರತಿದಿನ ತಾಲೂಕಿನ ಪ್ರಮುಖ ಬೆಳೆಗಳ ಮಾರುಕಟ್ಟೆ ದರವನ್ನು ತಿಳಿಸುವ ಯೋಜನೆ ರೂಪಿಸುವುದಾಗಿ ಹೇಳಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಜಿ.ಕವಿತಾ, ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ಪಶುಪಾಲನಾ ಇಲಾಖೆಯ ಡಾ. ಪವನ್, ತೋಟಗಾರಿಕೆ ಇಲಾಖೆ ಅಧಿಕಾರಿ ಪಲ್ಲವಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಬೆಳೆ ವಿಮೆ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು. ಈಗಿರುವ ಬೆಳೆವಿಮೆ ಪದ್ಧತಿಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ, ಕೇವಲ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದೆ. ಜೀವ ವಿಮೆಯಂತೆ ಬೆಳೆ ವಿಮೆ ಪದ್ಧತಿಯನ್ನು ಜಾರಿಗೆ ತರಬೇಕು, ಕೃಷಿಕರು ತಾವು ಬೆಳೆದ ಧಾನ್ಯಗಳನ್ನು ಸಂಗ್ರಹಿಸಿಲು ಹಿಂದೆ ನೀಡುತ್ತಿದ್ದಂತೆ ತಗಡಿನ ಶೀಟ್ ಡ್ರಮ್ಮುಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು, ಹಾವು ಕಚ್ಚಿದ ರೈತರಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೀವ ರಕ್ಷಕ ಔಷಧಗಳ ದಸ್ತಾನು ಸದಾ ಇರುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಹಣಿಯಲ್ಲಿ ನಿಗದಿತ ಬೆಳೆ ನೋಂದಣಿಯಾಗದೆ ಬ್ಯಾಂಕ್, ಸಹಕಾರ ಸಂಘಗಳಲ್ಲಿ ರೈತರು ಸಾಲ ಪಡೆಯಲು ತೊಂದರೆಯಾಗುತ್ತಿದೆ, ಇದನ್ನು ಕ್ರಮ ಬದ್ಧಗೊಳಿಸಲು ಕಂದಾಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಭೆ ಒತ್ತಾಯಿಸಿತು. ಪ್ರಗತಿಪರ ಕೃಷಿಕರಾದ ರಾಮನಾಥಪುರ ಹೋಬಳಿಯ ಹಂಪಾಪುರ ಗ್ರಾಮದ ದೇವರಾಜ್, ಜಿಟ್ಟೇನಹಳ್ಳಿ ಗ್ರಾಮದ ರಾಜೇಶ್, ಹರಳಹಳ್ಳಿ ಗ್ರಾಮದ ಎಚ್.ವಿ.ಮಂಜುನಾಥ್, ಕೊಣನೂರು ಹೋಬಳಿ ಹಿರೇಹಳ್ಳಿ ಗ್ರಾಮದ ರವಿ, ದೊಡ್ಡಮಗ್ಗೆ ಹೋಬಳಿ ಕೊರಟಿಕೆರೆಕಾವಲ್ ಗ್ರಾಮದ ಕುಮಾರಶೆಟ್ಟಿ, ಕಸಬಾ ಹೋಬಳಿ ಕಂಚೇನಹಳ್ಳಿ ಗ್ರಾಮದ ಜಗದೀಶ್ ಅವರನ್ನು ಗೌರವಿಸಲಾಯಿತು. 5 ಜನ ರೈತರಿಗೆ ತರಕಾರಿ ಬಿತ್ತನೆ ಬೀಜದ ಕಿಟ್, ಇಬ್ಬರು ರೈತರಿಗೆ ಮೇವು ಕತ್ತರಿಸುವ ಯಂತ್ರ, ಒಬ್ಬರಿಗೆ ಪಿವಿಸಿ ಪೈಪ್, 5 ಜನ ರೈತರಿಗೆ ಹನಿ ನೀರಾವರಿ ಘಟಕದ ಪೈಪ್ ಗಳನ್ನು ವಿತರಿಸಲಾಯಿತು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬೇಲೂರೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರೇವಣ್ಣ, ಖಜಾಂಚಿ ಎ.ಸಿ. ದೇವರಾಜೇಗೌಡ, ಜಿಲ್ಲಾ ಪ್ರತಿನಿಧಿ ಎಂ.ಬಿ.ಬಸವರಾಜ್, ನಿರ್ದೇಶಕ ವಿ. ಎ. ನಂಜುಂಡಸ್ವಾಮಿ, ಕೆ.ಟಿ.ರಂಗಸ್ವಾಮಿ, ಎ. ವಿ. ಕೃಷ್ಣರಾಜ್, ರಂಗಸ್ವಾಮಿ, ಬಸವಲಿಂಗಪ್ಪ, ಎಂ. ಚಂದ್ರಪ್ಪ, ಚಂದ್ರು ಉಪಸ್ಥಿತರಿದ್ದರು.